176.5 ಕಿ.ಮೀ ವೇಗ… ಹೊಸ ಚರ್ಚೆ ಹುಟ್ಟುಹಾಕಿದ ಮಿಚೆಲ್ ಸ್ಟಾರ್ಕ್​ ಎಸೆತ

ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಮಳೆಬಾಧಿತ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿಗದಿತ 26 ಓವರ್​ಗಳಲ್ಲಿ 136 ರನ್ ಕಲೆಹಾಕಿದ್ದರು. ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ 26 ಓವರ್​ಗಳಲ್ಲಿ 131 ರನ್​ಗಳ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ತಂಡವು 21.1 ಓವರ್​ಗಳಲ್ಲಿ ಗುರಿ ತಲುಪುವ ಮೂಲಕ 7 ವಿಕೆಟ್​ಗಳ ಜಯ ಸಾಧಿಸಿದೆ.

176.5 ಕಿ.ಮೀ ವೇಗ... ಹೊಸ ಚರ್ಚೆ ಹುಟ್ಟುಹಾಕಿದ ಮಿಚೆಲ್ ಸ್ಟಾರ್ಕ್​ ಎಸೆತ
Mitchell Starc

Updated on: Oct 20, 2025 | 8:43 AM

ಪರ್ತ್​ನಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್​​ ಎಸೆದ ಎಸೆತವೊಂದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಅದು ಕೂಡ 176.5 ಕಿ.ಮೀ ವೇಗದೊಂದಿಗೆ…! ಹೌದು, ಟೀಮ್ ಇಂಡಿಯಾ ವಿರುದ್ಧದ ಪಂದ್ಯದ ಮೊದಲ ಓವರ್​ನಲ್ಲಿ ಸ್ಟಾರ್ಕ್​ ಎಸೆದ ಎಸೆತವು 176.5 ಕಿ.ಮೀ ವೇಗದಲ್ಲಿ ಸಾಗಿದೆ ಎಂದು ತೋರಿಸಲಾಗಿತ್ತು.

ಇದರ ಬೆನ್ನಲ್ಲೇ  109 ಮೈಲಿ ವೇಗದಲ್ಲಿ (176.5 ಕಿ.ಮೀ) ಸಾಗಿದ ಚೆಂಡಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿತು. ತಕ್ಷಣವೇ ಎಚ್ಚೆತ್ತುಕೊಂಡ ಪ್ರಸಾರಕರ ಗ್ರಾಫಿಕ್ಸ್ ಟೀಮ್ ತಾಂತ್ರಿಕ ಸಮಸ್ಯೆಯಿಂದಾಗಿ ಹಾಗೆ ತೋರಿಸಿದೆ. ಸ್ಟಾರ್ಕ್ ಎಸೆದ ಚೆಂಡಿನ ವೇಗ 140.8 ಕಿಮೀ ಅಥವಾ 87 ಮೈಲಿಗಿಂತ ಸ್ವಲ್ಪ ಹೆಚ್ಚು ಎಂದು ದೃಢಪಡಿಸಿತು.

ಈ ಸ್ಪಷ್ಟನೆ ಹೊರತಾಗಿಯೂ 176.5 ಕಿ.ಮೀ ವೇಗದಲ್ಲಿ ಚೆಂಡೆಸೆಯಲು ಸಾಧ್ಯನಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

175+ ಕಿ.ಮೀ ವೇಗದಲ್ಲಿ ಚೆಂಡೆಸೆಲು ಸಾಧ್ಯವಿದೆಯಾ ಎಂದು ಕೇಳಿದರೆ, ಸಾಧ್ಯ ಎಂಬ ಉತ್ತರ ದೊರಕುತ್ತದೆ. ಆದರೆ ಅದು ಪ್ರಾಯೋಗಿಕವಾಗಿ ಅದು ಅಸಾಧ್ಯ.

ಬಯೋಮೆಕಾನಿಕ್ಸ್ ತಜ್ಞರ ಪ್ರಕಾರ, ಮಾನವ ಎಸೆಯುವ ವೇಗದ ಗರಿಷ್ಠ ಮಿತಿ ಗಂಟೆಗೆ 174–177 ಕಿ.ಮೀ. ಆದರೆ ಈ ಅಧ್ಯಯನಗಳು ಬೇಸ್‌ಬಾಲ್ ಕ್ರೀಡೆಯ ಮೇಲೆ ಕೇಂದ್ರೀಕರಿಸಿವೆ. ಅಲ್ಲಿ ಓವರ್‌ಆರ್ಮ್ ಚಲನೆಯು ಕ್ರಿಕೆಟ್ ಬೌಲಿಂಗ್‌ಗಿಂತ ಗಮನಾರ್ಹವಾಗಿ ಭಿನ್ನವಾಗಿರುತ್ತದೆ. ಹೀಗಾಗಿ ಮಾನವನ ಗರಿಷ್ಠ ವೇಗದ ಮಿತಿ  174 ರಿಂದ 177 ಕಿ.ಮೀ. ಎಂದು ತಿಳಿಸಲಾಗಿದೆ.

ಇತ್ತ ಕ್ರಿಕೆಟ್​ನಲ್ಲಿ ಅದೇ ವೇಗ ಮೂಡಿಬರುವುದಿಲ್ಲ. ಏಕೆಂದರೆ ಬೇಸ್​ ಬಾಲ್​ನಲ್ಲಿ ಒಂದೆಡೆ ನಿಂತು ಚೆಂಡೆಸೆಯಲಾಗುತ್ತದೆ. ಆದರೆ ಕ್ರಿಕೆಟ್​ನಲ್ಲಿ ಬೌಲರ್​ ಓಡಿ ಬಂದು ಚೆಂಡೆಸೆಯುವುದರಿಂದ ಆತನ ಸಂಪೂರ್ಣ ಶಕ್ತಿಯ ಪ್ರಯೋಗವಾಗಲ್ಲ. ಮುಖ್ಯವಾಗಿ ಬೌಲರ್​ ಹಲವು ಕಡೆ ಗಮನ ಕೇಂದ್ರೀಕರಿಸಿರುತ್ತಾನೆ. ಅಂದರೆ ನೋಬಾಲ್ ಲೈನ್, ಎಸೆತದ ರೂಪ, ಫೀಲ್ಡಿಂಗ್ ಸೆಟ್​ ಅನ್ನು ಗಮದಲ್ಲಿರಿಸಿ ಚೆಂಡೆಸೆಯುವುದರಿಂದ 170+ ಕಿ.ಮೀ ವೇಗಕ್ಕಿಂತ ಹೆಚ್ಚಿನ ಸ್ಪೀಡ್​ನಲ್ಲಿ ಚೆಂಡೆಸೆಯುವುದು ಅಸಾಧ್ಯ ಎಂದು ನಂಬಲಾಗಿದೆ.

ಇದಾಗ್ಯೂ ಪಾಕಿಸ್ತಾನ್ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್ 161.3 ಕಿ.ಮೀ ವೇಗದಲ್ಲಿ ಚೆಂಡೆಸೆದಿದ್ದರು. 2003 ರಲ್ಲಿ ನಿರ್ಮಾಣವಾದ ಈ ದಾಖಲೆಯನ್ನು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಈ ದಾಖಲೆಯನ್ನು ಪರಿಗಣನೆಗೆ ತೆಗೆದುಕೊಂಡರೆ ಬೌಲರ್​ರೊಬ್ಬರು ಗರಿಷ್ಠ 165 ಕಿ.ಮೀ ವೇಗದಲ್ಲಿ ಮಾತ್ರ ಚೆಂಡೆಸೆಯಲು ಸಾಧ್ಯವಾಗಬಹುದು.

ಹೀಗಾಗಿ ಕ್ರಿಕೆಟ್​ ಅಂಗಳದಲ್ಲಿ ಬೌಲರ್​ರೊಬ್ಬರು 170+ ವೇಗದಲ್ಲಿ ಚೆಂಡೆಸೆಯುವುದನ್ನು ನಿರೀಕ್ಷಿಸುವಂತಿಲ್ಲ. ಅಲ್ಲದೆ 170 ಕಿ.ಮೀ ವೇಗದಲ್ಲಿ ಚೆಂಡು ಮೂಡಿಬಂದರೂ ಅದು ತಾಂತ್ರಿಕ ದೋಷದಿಂದ ಉಂಟಾದ ಲೆಕ್ಕಾಚಾರ ಆಗಿರುತ್ತದೆ. ಅದಕ್ಕೆ ತಾಜಾ ಉದಾಹರಣೆ ಮಿಚೆಲ್ ಸ್ಟಾರ್ಕ್ ಎಸೆದ 176.5 ಕಿ.ಮೀ ವೇಗದ ಚೆಂಡು.

ಇದನ್ನೂ ಓದಿ: ಐನೂರು ಪಂದ್ಯಗಳ ಬಳಿಕ ಯಾರು ನಂಬರ್ ಒನ್?

ಕ್ರಿಕೆಟ್ ಇತಿಹಾಸದ ಫಾಸೆಸ್ಟ್ ಎಸೆತಗಳು:

  1. ಶೋಯೆಬ್ ಅಖ್ತರ್ (ಪಾಕಿಸ್ತಾನ): ಗಂಟೆಗೆ 161.3 ಕಿ.ಮೀ ವೇಗ.
  2.  ಶಾನ್ ಟೈಟ್ (ಆಸ್ಟ್ರೇಲಿಯಾ):  ಗಂಟೆಗೆ 161.1 ಕಿ.ಮೀ ವೇಗ.
  3.  ಬ್ರೆಟ್ ಲೀ (ಆಸ್ಟ್ರೇಲಿಯಾ): ಗಂಟೆಗೆ 161.1 ಕಿ.ಮೀ ವೇಗ.
  4.  ಜೆಫ್ ಥಾಮ್ಸನ್ (ಆಸ್ಟ್ರೇಲಿಯಾ): ಗಂಟೆಗೆ 160.6 ಕಿ.ಮೀ ವೇಗ.
  5. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ): ಗಂಟೆಗೆ 160.4 ಕಿ.ಮೀ ವೇಗ.

 

 

 

Published On - 8:34 am, Mon, 20 October 25