MLC 2023: ವಾಟ್ ಎ ಕ್ಯಾಚ್…ಅತ್ಯದ್ಭುತ ಕ್ಯಾಚ್ ಹಿಡಿದ ಫಾಫ್ ಡುಪ್ಲೆಸಿಸ್

| Updated By: ಝಾಹಿರ್ ಯೂಸುಫ್

Updated on: Jul 18, 2023 | 5:38 PM

MLC 2023: ಟೆಕ್ಸಾಸ್ ಸೂಪರ್ ಕಿಂಗ್ಸ್​ ವಿರುದ್ಧದ ಈ ಪಂದ್ಯದ ಕೊನೆಯ ಓವರ್​ನಲ್ಲಿ 21 ರನ್​ಗಳ ಟಾರ್ಗೆಟ್ ಪಡೆದ ಎಂಐ ನ್ಯೂಯಾರ್ಕ್ ಪರ ಟಿಮ್ ಡೇವಿಡ್ ಕ್ರೀಸ್​ನಲ್ಲಿದ್ದರು.

MLC 2023: ವಾಟ್ ಎ ಕ್ಯಾಚ್...ಅತ್ಯದ್ಭುತ ಕ್ಯಾಚ್ ಹಿಡಿದ ಫಾಫ್ ಡುಪ್ಲೆಸಿಸ್
Faf du Plessis
Follow us on

MLC 2023: ಅಮೆರಿಕದ ಮೇಜರ್ ಲೀಗ್​ ಕ್ರಿಕೆಟ್​ ಟೂರ್ನಿಯಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದು ಫಾಫ್ ಡುಪ್ಲೆಸಿಸ್ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಈ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ (TSK) ಹಾಗೂ ಎಂಐ ನ್ಯೂಯಾರ್ಕ್ (MINY) ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಟೆಕ್ಸಾಸ್ ತಂಡವು ಡೆವೊನ್ ಕಾನ್ವೆ (74) ಅವರ ಅರ್ಧಶತಕದ ನೆರವಿನಿಂದ 154 ರನ್​ ಕಲೆಹಾಕಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಎಂಐ ನ್ಯೂಯಾರ್ಕ್ ತಂಡವು 90 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೊಡಿಬಡಿ ದಾಂಡಿಗ ಟಿಮ್ ಡೇವಿಡ್ 18 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 24 ರನ್ ಬಾರಿಸಿದ್ದರು.

ಅಲ್ಲದೆ ಅಂತಿಮ ಓವರ್​ಗಳ ವೇಳೆ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಟಿಮ್ ಡೇವಿಡ್ ಅವರ ವಿಕೆಟ್ ಟೆಕ್ಸಾಸ್ ಸೂಪರ್ ಕಿಂಗ್ಸ್ ಪಾಲಿಗೆ ನಿರ್ಣಾಯಕವಾಗಿತ್ತು. ಕೊನೆಯ ಓವರ್​ನಲ್ಲಿ 21 ರನ್​ಗಳ ಟಾರ್ಗೆಟ್ ಪಡೆದ ಎಂಐ ನ್ಯೂಯಾರ್ಕ್ ಪರ ಟಿಮ್ ಡೇವಿಡ್ ಕ್ರೀಸ್​ನಲ್ಲಿದ್ದರು.

ಇತ್ತ ಅಂತಿಮ ಓವರ್ ಎಸೆದ ಡೇನಿಯಲ್ ಸ್ಯಾಮ್ಸ್ ಎಸೆತಕ್ಕೆ ಟಿಮ್ ಡೇವಿಡ್ ಭರ್ಜರಿ ಸಿಕ್ಸ್ ಸಿಡಿಸುವ ಪ್ರಯತ್ನ ಮಾಡಿದ್ದರು. ಆದರೆ ಚೆಂಡು ಮುಗಿಲೆತ್ತರಕ್ಕೆ ಹಾರಿತು. ಇದೇ ವೇಳೆ ಬೌಂಡರಿ ಲೈನ್​ನಿಂದ ಓಡಿ ಬಂದ ಫಾಫ್ ಡುಪ್ಲೆಸಿಸ್ ಅಧ್ಭುತವಾಗಿ ಡೈವ್ ಹೊಡೆದು ಚೆಂಡನ್ನು ಹಿಡಿದರು.

39ನೇ ವಯಸ್ಸಿನಲ್ಲೂ ಅತ್ಯಧ್ಭುತ ಕ್ಯಾಚ್ ಹಿಡಿದು ಫಾಫ್ ಡುಪ್ಲೆಸಿಸ್ ನೆರೆದಿದ್ದ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದರು. ಇದೀಗ ಡುಪ್ಲೆಸಿಸ್ ಅವರ ಈ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನು ಟಿಮ್ ಡೇವಿಡ್ ಅವರ ಈ ಔಟ್​ನೊಂದಿಗೆ ಟೆಕ್ಸಾಸ್ ಸೂಪರ್ ಕಿಂಗ್ಸ್​ ತಂಡವು ಈ ಪಂದ್ಯವನ್ನು 17 ರನ್​ಗಳಿಂದ ಗೆದ್ದುಕೊಂಡಿತು.