MLC 2023: ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 12ನೇ ಪಂದ್ಯದಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಸಿಯಾಟಲ್ ಓರ್ಕಾಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೈಟ್ ರೈಡರ್ಸ್ ತಂಡದ ನಾಯಕ ಸುನಿಲ್ ನರೈನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಯಾಟಲ್ ಓರ್ಕಾಸ್ ತಂಡಕ್ಕೆ ನೌಮಾನ್ ಅನ್ವರ್ (32) ಉತ್ತಮ ಆರಂಭ ಒದಗಿಸಿದ್ದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶೆಹನ್ ಜಯಸೂರ್ಯ 45 ಎಸೆತಗಳಲ್ಲಿ 7 ಫೋರ್ ಹಾಗೂ 1 ಸಿಕ್ಸ್ ಸಿಡಿಸಿದರು. ಈ ಮೂಲಕ ಅಜೇಯ 60 ರನ್ ಬಾರಿಸಿ ತಂಡದ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 170 ಕ್ಕೆ ತಂದು ನಿಲ್ಲಿಸಿದರು.
171 ರನ್ಗಳ ಕಠಿಣ ಗುರಿ ಪಡೆದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಆಟಗಾರರಾದ ಜೇಸನ್ ರಾಯ್ (2) ಹಾಗೂ ಜಸ್ಕರನ್ ಮಲ್ಹೋತ್ರ (2) ಬೇಗನೆ ನಿರ್ಗಮಿಸಿದರೆ, ಆ ಬಳಿಕ ಬಂದ ಗಜಾನಂದ್ ಸಿಂಗ್ (3) 3 ಎಸೆತಗಳಲ್ಲೇ ಇನಿಂಗ್ಸ್ ಅಂತ್ಯಗೊಳಿಸಿದರು.
ಇತ್ತ 8 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಕ್ಕೆ ರಿಲೀ ರೊಸ್ಸೊವ್ ಆಸರೆಯಾಗಿ ನಿಂತರು. ಆರಂಭದಲ್ಲಿ ತುಸು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ರೊಸ್ಸೊವ್ ಆ ಬಳಿಕ ಸಿಡಿಲಬ್ಬರ ಶುರು ಮಾಡಿದರು.
ರೊಸ್ಸೊವ್ ಸಿಡಿಲಬ್ಬರದ ಮುಂದೆ ಸಿಯಾಟಲ್ ಓರ್ಕಾಸ್ ಬೌಲರ್ಗಳು ಲಯ ತಪ್ಪಿದರು. ಇದರ ಸಂಪೂರ್ಣ ಲಾಭ ಪಡೆದ ರಿಲೀ ರೊಸ್ಸೊವ್ 7 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳನ್ನು ಬಾರಿಸಿದರು.
ಅಲ್ಲದೆ ಕೇವಲ 38 ಎಸೆತಗಳಲ್ಲಿ ಅಜೇಯ 78 ರನ್ ಬಾರಿಸುವ ಮೂಲಕ 19.1 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಇನ್ನು ಸ್ಪೋಟಕ ಬ್ಯಾಟಿಂಗ್ ಮೂಲಕ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರಿಲೀ ರೊಸ್ಸೊವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ವಿಶೇಷ ಎಂದರೆ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಇದು ಮೊದಲ ಜಯ. ಅಂದರೆ ಮೊದಲ 4 ಪಂದ್ಯಗಳಲ್ಲಿ ಸತತ ಸೋಲನುಭವಿಸಿದ್ದ ಶಾರುಖ್ ಖಾನ್ ಒಡೆತನದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡದ ಅಭಿಯಾನ ಅಂತ್ಯವಾಗಿದೆ.
ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಪ್ಲೇಯಿಂಗ್ 11: ಜೇಸನ್ ರಾಯ್ , ಗಜಾನಂದ್ ಸಿಂಗ್ , ರಿಲೀ ರೊಸ್ಸೌವ್ , ಸೈಫ್ ಬದರ್ , ಜಸ್ಕರನ್ ಮಲ್ಹೋತ್ರಾ (ವಿಕೆಟ್ ಕೀಪರ್) , ಆಂಡ್ರೆ ರಸೆಲ್ , ಸುನಿಲ್ ನರೈನ್ (ನಾಯಕ) , ಶಾಡ್ಲಿ ವ್ಯಾನ್ ಶಾಲ್ಕ್ವಿಕ್ , ಆ್ಯಡಂ ಝಂಪಾ , ಅಲಿ ಖಾನ್ , ಸ್ಪೆನ್ಸರ್ ಜಾನ್ಸನ್.
ಇದನ್ನೂ ಓದಿ: Team India: 13 ಸೋಲು…ನಾಕೌಟ್ನಲ್ಲಿ ಮುಗ್ಗರಿಸುವ ಟೀಮ್ ಇಂಡಿಯಾ
ಸಿಯಾಟಲ್ ಓರ್ಕಾಸ್ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ನೌಮನ್ ಅನ್ವರ್ , ಹೆನ್ರಿಕ್ ಕ್ಲಾಸೆನ್ , ದಾಸುನ್ ಶನಕ , ಶೆಹನ್ ಜಯಸೂರ್ಯ , ಇಮಾದ್ ವಾಸಿಮ್ , ಶುಭಂ ರಂಜನೆ , ಕ್ಯಾಮೆರಾನ್ ಗ್ಯಾನನ್ , ವೇಯ್ನ್ ಪಾರ್ನೆಲ್ (ನಾಯಕ) , ಹರ್ಮೀತ್ ಸಿಂಗ್ , ಆಂಡ್ರ್ಯೂ ಟೈ.