MLC 2023: ಐಪಿಎಲ್ ನಂತರ ಅಮೆರಿಕದಲ್ಲೂ ಅಬ್ಬರಿಸಿದ ಸೂಪರ್ ಕಿಂಗ್ಸ್; ಡುಪ್ಲೆಸಿಸ್ ತಂಡಕ್ಕೆ ಶುಭಾರಂಭ

|

Updated on: Jul 14, 2023 | 1:41 PM

MLC 2023: ಮೇಜರ್ ಲೀಗ್ ಕ್ರಿಕೆಟ್‌ನ ಮೊದಲ ಸೀಸನ್​ನ ಮೊದಲ ಪಂದ್ಯವನ್ನು ಗೆಲುವುದರೊಂದಿಗೆ ಫಾಫ್ ಡುಪ್ಲೆಸಿ ನಾಯಕತ್ವದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ ಲೀಗ್​ನಲ್ಲಿ ಶುಭಾರಂಭ ಮಾಡಿದೆ.

MLC 2023: ಐಪಿಎಲ್ ನಂತರ ಅಮೆರಿಕದಲ್ಲೂ ಅಬ್ಬರಿಸಿದ ಸೂಪರ್ ಕಿಂಗ್ಸ್; ಡುಪ್ಲೆಸಿಸ್ ತಂಡಕ್ಕೆ ಶುಭಾರಂಭ
ಮೇಜರ್ ಲೀಗ್ ಕ್ರಿಕೆಟ್‌
Follow us on

ಅಮೆರಿಕದಲ್ಲಿ ಮೊದಲ ಬಾರಿಗೆ ಆಯೋಜನೆಯಾಗುತ್ತಿರುವ ಮೇಜರ್ ಲೀಗ್ ಕ್ರಿಕೆಟ್‌ನ (Major league cricket) ಮೊದಲ ಸೀಸನ್​ನ ಮೊದಲ ಪಂದ್ಯವನ್ನು ಗೆಲ್ಲುವುದರೊಂದಿಗೆ ಫಾಫ್ ಡುಪ್ಲೆಸಿ (faf du plessis) ನಾಯಕತ್ವದ ಟೆಕ್ಸಾಸ್ ಸೂಪರ್ ಕಿಂಗ್ಸ್ (Texas super kings) ತಂಡ ಲೀಗ್​ನಲ್ಲಿ ಶುಭಾರಂಭ ಮಾಡಿದೆ. ಐಪಿಎಲ್ (IPL) ಫ್ರಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ ಒಡೆತನದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ (Los Angeles Knight Riders) ತಂಡವನ್ನು 69 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೆಕ್ಸಾಸ್ ಆರು ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಾಸ್ ಏಂಜಲೀಸ್ ತಂಡ 14 ಓವರ್‌ಗಳಲ್ಲಿ ಕೇವಲ 112 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ಸೋಲೊಪ್ಪಿಕ್ಕೊಂಡಿತು.

ಇನ್ನು ಚೊಚ್ಚಲ ಆವೃತ್ತಿ MLC ಲೀಗ್​ನಲ್ಲಿ ಒಟ್ಟು ಆರು ತಂಡಗಳಿದ್ದು, ಅದರಲ್ಲಿ ನಾಲ್ಕು ತಂಡಗಳು ಐಪಿಎಲ್ ಫ್ರಾಂಚೈಸಿಗಳ ಒಡೆತನದ ತಂಡಗಳಾಗಿವೆ. ಲೀಗ್​ನ ಮೊದಲ ಪಂದ್ಯ ಐಪಿಎಲ್ ಫ್ರಾಂಚೈಸಿಗಳ ಒಡೆತನದ ತಂಡಗಳ ನಡುವೆ ನಡೆದಿದ್ದು, ಐಪಿಎಲ್‌ನಲ್ಲಿ ಆರ್​ಸಿಬಿ ತಂಡದ ನಾಯಕತ್ವವಹಿಸಿಕೊಂಡಿರುವ ಡುಪ್ಲೆಸ್ಸಿ, ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಪರ ದೀರ್ಘಕಾಲ ಆಡಿದ್ದರು.

Faf Du Plessis: ಮತ್ತೆ ಸೂಪರ್ ಕಿಂಗ್ಸ್ ತಂಡ ಸೇರಿಕೊಂಡ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್..!

ಕಾನ್ವೆ, ಮಿಲ್ಲರ್ ಅರ್ಧಶತಕ

ಈ ಪಂದ್ಯದಲ್ಲಿ ಡೆವೊನ್ ಕಾನ್ವೆ ಮತ್ತು ಡೇವಿಡ್ ಮಿಲ್ಲರ್ ಸೂಪರ್ ಕಿಂಗ್ಸ್ ಪರ ಅರ್ಧಶತಕ ಸಿಡಿಸಿದರು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಕಾನ್ವೆ 37 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 55 ರನ್ ಚಚ್ಚಿದರು. ಹಾಗೆಯೇ ಡೇವಿಡ್ ಮಿಲ್ಲರ್ 42 ಎಸೆತಗಳಲ್ಲಿ ಎರಡು ಬೌಂಡರಿ, 4 ಸಿಕ್ಸರ್ ನೆರವಿನಿಂದ 61 ರನ್ ಕಲೆಹಾಕಿದರು. ನಾಯಕ ಫಾಫ್ ಡುಪ್ಲೆಸಿ ವಿಶೇಷ ಏನನ್ನೂ ಮಾಡಲಾಗದೆ ಎರಡನೇ ಓವರ್​ನ ಎರಡನೇ ಎಸೆತದಲ್ಲಿ ಖಾತೆ ತೆರೆಯದೆ ಲಾಕಿ ಫರ್ಗುಸನ್​ಗೆ ಬಲಿಯಾದರು. ಆ ಬಳಿಕ ಬಂದ ಲಹಿರು ಕುಮಾರ್ ಕೇವಲ ಎರಡು ರನ್ ಗಳಿಸಲಷ್ಟೇ ಶಕ್ತರಾದರು.

ಅಂತಿಮವಾಗಿ ಮಿಚೆಲ್ ಸ್ಯಾಂಟ್ನರ್ 14 ಎಸೆತಗಳಲ್ಲಿ 21 ರನ್, ಡ್ವೇನ್ ಬ್ರಾವೋ ಆರು ಎಸೆತಗಳಲ್ಲಿ 16 ರನ್ ಗಳಿಸಿ ತಂಡವನ್ನು ಬಲಿಷ್ಠ ಸ್ಕೋರ್​ಗೆ ಕೊಂಡೊಯ್ದರು. ಲಾಸ್ ಏಂಜಲೀಸ್ ಪರ ಅಲಿ ಖಾನ್ ಮತ್ತು ಲಾಕಿ ಫರ್ಗುಸನ್ ತಲಾ ಎರಡು ವಿಕೆಟ್ ಪಡೆದರು.

ರಸೆಲ್ ಏಕಾಂಗಿ ಹೋರಾಟಕ್ಕೆ ಗೆಲುವು ಸಿಗಲಿಲ್ಲ

ಇನ್ನು ಈ ಗುರಿ ಬೆನ್ನಟ್ಟಿದ ಲಾಸ್ ಏಂಜಲೀಸ್‌ ತಂಡದ ಪರ ಆಂಡ್ರೆ ರಸೆಲ್ ಗೆಲುವಿಗಾಗಿ ಸಾಕಷ್ಟು ಪ್ರಯತ್ನಿಸಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ತಮ್ಮ ಇನ್ನಿಂಗ್ಸ್​ನಲ್ಲಿ 34 ಎಸೆತಗಳನ್ನು ಎದುರಿಸಿದ ರಸೆಲ್ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 55 ರನ್ ಗಳಿಸಿದರು. ಆದರೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮಾರ್ಟಿನ್ ಗಪ್ಟಿಲ್ ಖಾತೆ ತೆರೆಯದೆ ಔಟಾದರೆ, ಉನ್ಮುಕ್ತ್ ಚಂದ್, ಮತ್ತು ರಿಲೆ ರುಸ್ಸೋ ತಲಾ ನಾಲ್ಕು ರನ್‌ಗಳನ್ನು ದಾಟಲು ಸಾಧ್ಯವಾಗಲಿಲ್ಲ. ನಿತೀಶ್ ಕುಮಾರ್ ಕೂಡ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಲಾಸ್ ಏಂಜಲೀಸ್ ಕೇವಲ 20 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು.

ಇಲ್ಲಿಂದ ಮತ್ತೆ ರಸೆಲ್ ಮತ್ತು ಜಸ್ಕರನ್ ಮಲ್ಹೋತ್ರಾ ತಂಡದ ಇನ್ನಿಂಗ್ಸ್ ಜವಬ್ದಾರಿ ನಿರ್ವಹಿಸಲು ಪ್ರಯತ್ನಿಸಿದರು. ಮಲ್ಹೋತ್ರಾ 11 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 22 ರನ್ ಗಳಿಸಿ ಔಟಾದರೆ, ನಾಯಕ ಸುನಿಲ್ ನರೈನ್ (15) ರಸೆಲ್‌ಗೆ ಬೆಂಬಲ ನೀಡಲು ಪ್ರಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಬಳಿಕ ಅರ್ಧಶತಕ ಸಿಡಿಸಿದ ರಸೆಲ್ ಕೂಡ ತಂಡದ ಮೊತ್ತ ಒಟ್ಟು 109 ರನ್​ಗಳಿರುವಾಗ ಪೆವಿಲಿಯನ್ ಸೇರಿಕೊಂಡರು.

ಪಾಕ್ ವೇಗಿಯ ಮ್ಯಾಜಿಕ್

ಸೂಪರ್ ಕಿಂಗ್ಸ್ ಪರ ಮೊಹಮ್ಮದ್ ಮೊಹ್ಸಿನ್ ಅದ್ಭುತ ಬೌಲಿಂಗ್ ಮಾಡಿದರು. ತಮ್ಮ ಖೋಟಾದಲ್ಲಿ ಮೂರು ಓವರ್​ ಬೌಲ್ ಮಾಡಿದ ಮೊಹ್ಸಿನ್, ಎಂಟು ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಮೊಹ್ಸಿನ್ ಪಾಕಿಸ್ತಾನದ ಆಟಗಾರನಾಗಿದ್ದು, ಪೇಶಾವರ ಅವರ ಜನನ ಸ್ಥಳವಾಗಿದೆ. ಇವರನ್ನು ಹೊರತುಪಡಿಸಿ, ರಸ್ಟಿ ಥರಾನ್ ಮತ್ತು ಜೆರಾಲ್ಡ್ ಕೋಟ್ಜಿ ತಲಾ ಎರಡು ವಿಕೆಟ್ ಪಡೆದರೆ, ಕಾಲ್ವಿನ್ ಸಾವೇಜ್ ಮತ್ತು ಬ್ರಾವೋ ತಲಾ ಒಂದು ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:40 pm, Fri, 14 July 23