IND vs WI: ಇದು ಆರಂಭವಷ್ಟೇ; ಶತಕದ ಬಳಿಕ ಭಾವುಕರಾದ ಯಶಸ್ವಿ ಜೈಸ್ವಾಲ್ ಹೇಳಿದ್ದೇನು ಗೊತ್ತಾ?
Yashashvi Jaiswal Statement: ಎರಡನೇ ದಿನದಾಟದ ಅಂತ್ಯಕ್ಕೆ 143 ರನ್ ಗಳಿಸಿ ಅಜೇಯರಾಗಿ ಉಳಿದಿರುವ ಯಶಸ್ವಿ, ಮೂರನೇ ದಿನದಲ್ಲಿ ಬೃಹತ್ ಇನ್ನಿಂಗ್ಸ್ ಆಡುವ ಸೂಚನೆ ನೀಡಿದ್ದಾರೆ. ಹಾಗೆಯೇ ತನ್ನ ಚೊಚ್ಚಲ ಟೆಸ್ಟ್ ಶತಕದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಡೊಮಿನಿಕಾದ ವಿಂಡ್ಸರ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ (India vs West Indies) ಚೊಚ್ಚಲ ಪಂದ್ಯವನ್ನಾಡುತ್ತಿರುವ ಯಶಸ್ವಿ ಜೈಸ್ವಾಲ್ (Yashasvi Jaiswal) ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಂಡೀಸ್ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಯಶಸ್ವಿ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿ, ಟೀಂ ಇಂಡಿಯಾದಲ್ಲಿ (Team India) ತನ್ನ ಸ್ಥಾನವನ್ನು ಖಾಯಂಗೊಳಿಸಿಕೊಳ್ಳಲು ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ. ಅಲ್ಲದೆ ಎರಡನೇ ದಿನದಾಟದ ಅಂತ್ಯಕ್ಕೆ 143 ರನ್ ಗಳಿಸಿ ಅಜೇಯರಾಗಿ ಉಳಿದಿರುವ ಯಶಸ್ವಿ, ಮೂರನೇ ದಿನದಲ್ಲಿ ಬೃಹತ್ ಇನ್ನಿಂಗ್ಸ್ ಆಡುವ ಸೂಚನೆ ನೀಡಿದ್ದಾರೆ. ಹಾಗೆಯೇ ತನ್ನ ಚೊಚ್ಚಲ ಟೆಸ್ಟ್ ಶತಕದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ, ಆತಿಥೇಯ ತಂಡದ ಬ್ಯಾಟ್ಸ್‌ಮನ್‌ಗಳು ವಿಶೇಷ ಏನನ್ನೂ ಮಾಡಲಾಗದೆ ಕೇವಲ 150 ರನ್ಗಳಿಗೆ ಆಲೌಟ್ ಆಯಿತು. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 312 ರನ್ ಕಲೆಹಾಕಿದೆ.
Yashasvi Jaiswal Century: ಚೊಚ್ಚಲ ಶತಕ ಸಿಡಿಸಿ ಯಶಸ್ವಿ ಜೈಸ್ವಾಲ್ ಬರೆದ ದಾಖಲೆಗಳಿವು
ತಂಡದಲ್ಲಿ ಅವಕಾಶ ಸಿಗುವುದು ತುಂಬಾ ಕಷ್ಟ
ಎರಡನೆ ದಿನದಾಟದ ಅಂತ್ಯದ ನಂತರ ಮಾತನಾಡಿದ ಯಶಸ್ವಿ, ‘ಈ ಇನ್ನಿಂಗ್ಸ್ ನನಗೆ ತುಂಬಾ ಭಾವುಕವಾಗಿತ್ತು. ತಾನು ಮುಕ್ತವಾಗಿ ಆಡಲು ಮೈದಾನಕ್ಕೆ ಹೋಗಿದ್ದೆ ಅದರಲ್ಲಿ ಯಶಸ್ವಿಯಾಗಿದ್ದೇನೆ. ಶತಕ ಬಾರಿಸಿದ್ದು ನನ್ನ ಪಾಲಿಗೆ ಭಾವನಾತ್ಮಕ ಕ್ಷಣವಾಗಿದ್ದು, ಇದಕ್ಕೆ ನಾನು ಹೆಮ್ಮೆಪಡುತ್ತೇನೆ. ಇದು ಆರಂಭವಷ್ಟೇ, ಮುಂದೆ ಹೋಗಲು ಎಲ್ಲವನ್ನೂ ಮಾಡುತ್ತೇನೆ. ಭಾರತ ತಂಡದಲ್ಲಿ ಅವಕಾಶ ಸಿಗುವುದು ತುಂಬಾ ಕಷ್ಟ. ನಾಯಕ ರೋಹಿತ್ ಶರ್ಮಾ, ಹಾಗೂ ಮ್ಯಾನೇಜ್ಮೆಂಟ್ ನನ್ನ ವೃತ್ತಿ ಬದುಕಿಗೆ ಸಾಕಷ್ಟು ಬೆಂಬಲ ನೀಡಿದೆ’ ಎಂದು ಯಶಸ್ವಿ ಹೇಳಿದ್ದಾರೆ.
Maidaan ➡️ Maiden Test 50* @ybj_19 has arrived! .
.#WIvIND #INDvWIonFanCode pic.twitter.com/CSYGdDh2xA
— FanCode (@FanCode) July 13, 2023
ಬ್ಯಾಟಿಂಗ್ ಕಷ್ಟಕರವಾಗಿತ್ತು
ಮುಂದುವರೆದು ಮಾತನಾಡಿದ ಜೈಸ್ವಾಲ್, ‘ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಏಕೆಂದರೆ ಪಿಚ್ ತುಂಬಾ ನಿಧಾನವಾಗಿದೆ ಮತ್ತು ಔಟ್‌ಫೀಲ್ಡ್ ಕೂಡ ನಿಧಾನವಾಗಿದೆ. ಅಲ್ಲದೆ ಹವಾಮಾನವೂ ತುಂಬಾ ಬಿಸಿಯಾಗಿರುತ್ತದೆ. ಹೀಗಾಗಿ ನಾನು ಒಂದೊಂದು ಚೆಂಡನ್ನು ಆಡುವುದರತ್ತ ಹೆಚ್ಚು ಗಮನ ಹರಿಸುತ್ತೇನೆ. ನಾನು ಟೆಸ್ಟ್ ಕ್ರಿಕೆಟ್ ಅನ್ನು ಇಷ್ಟಪಡುತ್ತೇನೆ, ಈ ಮಾದರಿಯ ಸವಾಲುಗಳನ್ನು ಇಷ್ಟಪಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.
A special dedication after a special start in international cricket! ?#TeamIndia | #WIvIND | @ybj_19 pic.twitter.com/Dsiwln3rwt
— BCCI (@BCCI) July 14, 2023
ಹಲವು ದಾಖಲೆ ಬರೆದ ಯಶಸ್ವಿ
ಈ ಇನ್ನಿಂಗ್ಸ್‌ನಿಂದ ಹಲವು ದಾಖಲೆಗಳನ್ನು ಬರೆದಿರುವ ಯಶಸ್ವಿ, ವಿದೇಶಿ ನೆಲದಲ್ಲಿ ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಸಿಡಿಸಿದ ಅತಿದೊಡ್ಡ ಸ್ಕೋರ್ ಇದಾಗಿದೆ. ಈ ವಿಚಾರದಲ್ಲಿ ಜೈಸ್ವಾಲ್, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿಯನ್ನು ಹಿಂದಿಕ್ಕಿದ್ದಾರೆ. 1996ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗಂಗೂಲಿ 133 ರನ್ ಸಿಡಿಸಿದ್ದರು. ಇದು ಇದುವರೆಗಿನ ದಾಖಲೆಯಾಗಿತ್ತು. ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ಮೂರನೇ ಆರಂಭಿಕ ಆಟಗಾರನೆಂಬ ಹೆಗ್ಗಳಿಕೆಗೆ ಯಶಸ್ವಿ ಪಾತ್ರರಾಗಿದ್ದಾರೆ. ಈ ಹಿಂದೆ ಶಿಖರ್ ಧವನ್ ಮತ್ತು ಪೃಥ್ವಿ ಶಾ ಈ ಸಾಧನೆ ಮಾಡಿದ್ದರು. ಅಲ್ಲದೆ ಯಶಸ್ವಿ, ರೋಹಿತ್ ಜೊತೆ ಮೊದಲ ವಿಕೆಟ್‌ಗೆ 229 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಇದು ಏಷ್ಯಾದ ಹೊರಗೆ ಭಾರತದ ಪರ ಬಂದ ಅತಿದೊಡ್ಡ ಆರಂಭಿಕ ಪಾಲುದಾರಿಕೆಯಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:06 am, Fri, 14 July 23