MLC 2023: ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 7ನೇ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಎಂಐ ನ್ಯೂಯಾರ್ಕ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೆಕ್ಸಾಸ್ ಸೂಪರ್ ಕಿಂಗ್ಸ್ಗೆ ಆರಂಭಿಕ ಆಟಗಾರ ಡೆವೊನ್ ಕಾನ್ವೆ ಉತ್ತಮ ಆರಂಭ ಒದಗಿಸಿದ್ದರು. ಆರಂಭದಲ್ಲಿ ತುಸು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕಾನ್ವೆ ಆ ಬಳಿಕ ಬಿರುಸಿನ ಆಟಕ್ಕೆ ಒತ್ತು ನೀಡಿದ್ದರು.
ಆದರೆ ಮತ್ತೊಂದೆಡೆ ಫಾಫ್ ಡುಪ್ಲೆಸಿಸ್ (8) ರಬಾಡ ಎಸೆತದಲ್ಲಿ ಔಟಾದರೆ, ಕೋಡಿ ಚೆಟ್ಟಿ (12) ಪೊಲಾರ್ಡ್ಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಡೇವಿಡ್ ಮಿಲ್ಲರ್ (17) ವಿಕೆಟ್ ಪಡೆಯುವಲ್ಲಿ ರಬಾಡ ಯಶಸ್ವಿಯಾದರು.
ಇದಾಗ್ಯೂ ಡೆವೊನ್ ಕಾನ್ವೆ ಅಬ್ಬರ ಮಾತ್ರ ಮುಂದುವರೆಯಿತು. 55 ಎಸೆತಗಳನ್ನು ಎದುರಿಸಿದ ಕಾನ್ವೆ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 74 ರನ್ ಬಾರಿಸಿದರು. ಈ ಹಂತದಲ್ಲಿ ರಶೀದ್ ಖಾನ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಡೆವೊನ್ ಕಾನ್ವೆ ಕ್ಲೀನ್ ಬೌಲ್ಡ್ ಆದರು.
ಇನ್ನು ಅಂತಿಮ ಹಂತದಲ್ಲಿ ಕೇವಲ 13 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 27 ರನ್ ಬಾರಿಸುವ ಮೂಲಕ ಮಿಚೆಲ್ ಸ್ಯಾಂಟ್ನರ್ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 154 ಕ್ಕೇರಿಸಿದರು.
155 ರನ್ಗಳ ಸುಲಭ ಗುರಿ ಬೆನ್ನತ್ತಿದ ಎಂಐ ನ್ಯೂಯಾರ್ಕ್ ಉತ್ತಮ ಆರಂಭ ಪಡೆದಿರಲಿಲ್ಲ. 2ನೇ ಓವರ್ನಲ್ಲೇ ಮೊನಾಂಕ್ ಪಟೇಲ್ (0) ವಿಕೆಟ್ ಉರುಳಿಸಿ ಮೊಹಮ್ಮದ್ ಮೊಹ್ಸಿನ್ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಮತ್ತೊಂದೆಡೆ ಶಯಾನ್ ಜಹಾಂಗೀರ್ 38 ಎಸೆತಗಳನ್ನು ಎದುರಿಸಿ ಕೇವಲ 41 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಆ ಬಳಿಕ ಬಂದ ಸ್ಟೀವನ್ ಟೇಲ್ (15) ಹಾಗೂ ನಿಕೋಲಸ್ ಪೂರನ್ (19) ಬೇಗನೆ ನಿರ್ಗಮಿಸಿದರು. ಇನ್ನು ಟಿಮ್ ಡೇವಿಡ್ 24 ರನ್ಗಳಿಸಲಷ್ಟೇ ಶಕ್ತರಾದರು. ಹಾಗೆಯೇ ನಾಯಕ ಕೀರನ್ ಪೊಲಾರ್ಡ್ ಶೂನ್ಯಕ್ಕೆ ಔಟಾಗುವುದರೊಂದಿಗೆ ನ್ಯೂಯಾರ್ಕ್ ತಂಡಕ್ಕೆ ಸೋಲು ಖಚಿತವಾಯಿತು.
ಅಂತಿಮವಾಗಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ಗಳಿಸಿ ಎಂಐ ನ್ಯೂಯಾರ್ಕ್ ತಂಡವು 17 ರನ್ಗಳಿಂದ ಸೋಲೊಪ್ಪಿಕೊಂಡಿತು. ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಮೊಹಮ್ಮದ್ ಮೊಹ್ಸಿನ್ ಹಾಗೂ ಡೇನಿಯಲ್ ಸ್ಯಾಮ್ಸ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
ಟೆಕ್ಸಾಸ್ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ಫಾಫ್ ಡು ಪ್ಲೆಸಿಸ್ (ನಾಯಕ) , ಡೆವೊನ್ ಕಾನ್ವೆ (ವಿಕೆಟ್ ಕೀಪರ್) , ಕೋಡಿ ಚೆಟ್ಟಿ , ಡೇವಿಡ್ ಮಿಲ್ಲರ್ , ಮಿಲಿಂದ್ ಕುಮಾರ್ , ಮಿಚೆಲ್ ಸ್ಯಾಂಟ್ನರ್ , ಡ್ವೇನ್ ಬ್ರಾವೋ , ಡೇನಿಯಲ್ ಸಾಮ್ಸ್ , ಮೊಹಮ್ಮದ್ ಮೊಹ್ಸಿನ್ , ರಸ್ಟಿ ಥರಾನ್ , ಜಿಯಾ-ಉಲ್-ಹಕ್.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯುವ 10 ತಂಡಗಳು ಫೈನಲ್
ಎಂಐ ನ್ಯೂಯಾರ್ಕ್ ಪ್ಲೇಯಿಂಗ್ 11: ಸ್ಟೀವನ್ ಟೇಲರ್ , ಶಯಾನ್ ಜಹಾಂಗೀರ್ , ಮೊನಾಂಕ್ ಪಟೇಲ್ , ಹಮ್ಮದ್ ಅಜಮ್ , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ಕೀರಾನ್ ಪೊಲಾರ್ಡ್ (ನಾಯಕ) , ಟಿಮ್ ಡೇವಿಡ್ , ರಶೀದ್ ಖಾನ್ , ಕಗಿಸೊ ರಬಾಡ , ಟ್ರೆಂಟ್ ಬೌಲ್ಟ್ , ಎಹ್ಸಾನ್ ಆದಿಲ್.