6,6,6,6,6: ಮೊಯೀನ್ ಅಲಿ, ಬೈರ್ಸ್ಟೋವ್ ತೂಫಾನ್: ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ
Moeen Ali, Jonny Bairstow: ಮೊಯೀನ್ ಅಲಿ ಹಾಗೂ ಜಾನಿ ಬೈರ್ಸ್ಟೋವ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡವು ಬೃಹತ್ ಮೊತ್ತದತ್ತ ಸಾಗಿತು. ಅಂತಿಮವಾಗಿ ಬೈರ್ಸ್ಟೋವ್ 53 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 3 ಫೋರ್ನೊಂದಿಗೆ 90 ರನ್ ಕಲೆಹಾಕಿದರು.
ENG vs SA 1st T20: ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ (England vs South Africa) ನಡುವೆ ನಡೆದ ಮೊದಲ ಟಿ20 ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಇಂಗ್ಲೆಂಡ್ನ ಬ್ರಿಸ್ಟಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಆಂಗ್ಲರು ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 41 ಆಗುವಷ್ಟರಲ್ಲಿ ಆರಂಭಿಕರಾದ ಜೇಸನ್ ರಾಯ್ (8) ಹಾಗೂ ನಾಯಕ ಜೋಸ್ ಬಟ್ಲರ್ (22) ವಿಕೆಟ್ ಕಳೆದುಕೊಂಡಿತು. ಆದರೆ ಆ ಬಳಿಕ ಬಂದ ಡೇವಿಡ್ ಮಲಾನ್ 23 ಎಸೆತಗಳಲ್ಲಿ ಬಿರುಸಿನ 43 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಮತ್ತೊಂದೆಡೆ ಜಾನಿ ಬೈರ್ಸ್ಟೋವ್ (Jonny Bairstow) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಬೈರ್ಸ್ಟೋವ್ಗೆ ಸಾಥ್ ನೀಡಿದ ಮೊಯೀನ್ ಅಲಿ (Moeen Ali) ಕೂಡ ಆಫ್ರಿಕನ್ ಬೌಲರ್ಗಳ ಬೆಂಡೆತ್ತಿದ್ದರು. ಪರಿಣಾಮ 17ನೇ ಓವರ್ ವೇಳೆ ಇಂಗ್ಲೆಂಡ್ ಮೊತ್ತವು 200ರ ಗಡಿದಾಟಿತು. ಅದರಲ್ಲೂ 17ನೇ ಓವರ್ನಲ್ಲಿ ಬರೋಬ್ಬರಿ 33 ರನ್ ಬಾರಿಸುವ ಮೂಲಕ ವೇಗಿ ಆಂಡಿಲೆ ಫೆಹ್ಲುಕ್ವಾಯೊ (Andile Phehlukwayo) ಅವರ ಬೆಂಡೆತ್ತಿದ್ದರು. ಈ ಓವರ್ನ ಮೊದಲ ಎಸೆತದಲ್ಲಿ ಬೈರ್ಸ್ಟೋವ್ ಸಿಕ್ಸ್ ಸಿಡಿಸಿದರು. 2ನೇ ಎಸೆತದಲ್ಲೂ ಸಿಕ್ಸ್ ಉತ್ತರ ನೀಡಿದರು. ಇದಾದ ಬಳಿಕ ಫೆಹ್ಲುಕ್ವಾಯೊ ಬ್ಯಾಕ್ ಟು ಬ್ಯಾಕ್ ಎರಡು ವೈಡ್ ಎಸೆದರು. ಆ ಬಳಿಕ ಜಾನಿ ಬೈರ್ಸ್ಟೋವ್ ಸಿಂಗಲ್ ತೆಗೆದರು. ಅಂತಿಮ ಮೂರು ಎಸೆತಗಳಲ್ಲಿ ಮೊಯೀನ್ ಅಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸುವ ಮೂಲಕ 33 ರನ್ ಚಚ್ಚಿದರು.
ಈ 33 ರನ್ಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ ಓವರ್ವೊಂದರಲ್ಲಿ ಅತೀ ಹೆಚ್ಚು ರನ್ ನೀಡಿದ ನಾಲ್ಕನೇ ಬೌಲರ್ ಎಂಬ ಕೆಟ್ಟ ದಾಖಲೆ ಆಂಡಿಲೆ ಫೆಹ್ಲುಕ್ವಾಯೊ ಪಾಲಾಯಿತು. ಅಲ್ಲದೆ ಸೌತ್ ಆಫ್ರಿಕಾದ ಅತ್ಯಂತ ದುಬಾರಿ ಬೌಲರ್ ಎಂಬ ಹಣೆಪಟ್ಟಿ ಕೂಡ ಅವರಿಗೆ ಲಭಿಸಿತು.
ಅದರಂತೆ ಮೊಯೀನ್ ಅಲಿ ಹಾಗೂ ಜಾನಿ ಬೈರ್ಸ್ಟೋವ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡವು ಬೃಹತ್ ಮೊತ್ತದತ್ತ ಸಾಗಿತು. ಅಂತಿಮವಾಗಿ ಬೈರ್ಸ್ಟೋವ್ 53 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 3 ಫೋರ್ನೊಂದಿಗೆ 90 ರನ್ ಕಲೆಹಾಕಿದರೆ, ಮೊಯೀನ್ ಅಲಿ ಕೇವಲ 18 ಎಸೆತಗಳಲ್ಲಿ 6 ಸಿಕ್ಸ್ನೊಂದಿಗೆ 52 ರನ್ ಚಚ್ಚಿದ್ದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಇಂಗ್ಲೆಂಡ್ ಮೊತ್ತವು 6 ವಿಕೆಟ್ ನಷ್ಟಕ್ಕೆ 234 ಕ್ಕೆ ಬಂದು ನಿಂತಿತು.
235 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್ (57) ಹಾಗೂ ಟ್ರಿಸ್ಟನ್ ಸ್ಟಬ್ಸ್ ಅಬ್ಬರಿಸಿದರು. ಅದರಲ್ಲೂ ಕೇವಲ 28 ಎಸೆತಗಳಲ್ಲಿ 8 ಸಿಕ್ಸ್ನೊಂದಿಗೆ 72 ರನ್ ಬಾರಿಸುವ ಮೂಲಕ ಸ್ಟಬ್ಸ್ ಸೌತ್ ಆಫ್ರಿಕಾಗೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಇಂಗ್ಲೆಂಡ್ ಬೌಲರ್ಗಳ ಕರಾರುವಾಕ್ ದಾಳಿ ಪರಿಣಾಮ ಸೌತ್ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 193 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಇಂಗ್ಲೆಂಡ್ ತಂಡವು 41 ರನ್ಗಳ ಭರ್ಜರಿ ಜಯ ಸಾಧಿಸಿತು. ಸ್ಪೋಟಕ ಅರ್ಧಶತಕ ಹಾಗೂ 1 ವಿಕೆಟ್ ಕಬಳಿಸಿದ್ದ ಮೊಯೀನ್ ಅಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಮತ್ತೊಂದೆಡೆ ಆಂಡಿಲೆ ಫೆಹ್ಲುಕ್ವಾಯೊ ಸೌತ್ ಆಫ್ರಿಕಾ ಪರ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ನೀಡಿದ ಬೌಲರ್ ಎನಿಸಿಕೊಂಡರು. ಅಲ್ಲದೆ ಟಿ20 ಕ್ರಿಕೆಟ್ನ ನಾಲ್ಕನೇ ದುಬಾರಿ ಓವರ್ ಎಂಬ ಕೆಟ್ಟ ದಾಖಲೆ ಕೂಡ ಫೆಹ್ಲುಕ್ವಾಯೊ ಎಸೆದ 17ನೇ ಓವರ್ ಪಾಲಾಯಿತು.