ಪಾಕಿಸ್ತಾನ್ ತಂಡದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ (Mohammad Rizwan) ಅದ್ಭುತ ಫಾರ್ಮ್ನಲ್ಲಿದ್ದಾರೆ. ಅವರ ಈ ಭರ್ಜರಿ ಪ್ರರ್ದಶನದಿಂದಾಗಿ ಇದೀಗ ಪಾಕಿಸ್ತಾನ ತಂಡ ಏಷ್ಯಾಕಪ್‌ನಲ್ಲಿ ಫೈನಲ್ ತಲುಪಿದೆ. ಭಾನುವಾರ ದುಬೈ ಮೈದಾನದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಪಾಕ್ ತಂಡವು ಶ್ರೀಲಂಕಾವನ್ನು ಎದುರಿಸಲಿದೆ. ಫೈನಲ್ನಲ್ಲೂ ಪಾಕ್ ಪಾಲಿಗೆ ರಿಜ್ವಾನ್ ಟ್ರಂಪ್ ಕಾರ್ಡ್. ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಪಾಕ್ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದೆ ರಿಜ್ವಾನ್. ಹೀಗಾಗಿ ಕೊನೆಯ ಮ್ಯಾಚ್ನಲ್ಲೂ ಪಾಕ್ ತಂಡ ಅವರನ್ನೇ ಅವಲಂಭಿಸಲಿದೆ. ಈ ಫೈನಲ್‌ಗೂ ಮುನ್ನ ರಿಜ್ವಾನ್ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಆಡುವಾಗ ತುಂಬಾ ಭಯಪಡುತ್ತಿದ್ದ ನೆನಪುಗಳನ್ನು ಸ್ಮರಿಸಿಕೊಂಡಿದ್ದಾರೆ.
ವಿಶೇಷ ಎಂದರೆ ಮೊಹಮ್ಮದ್ ರಿಜ್ವಾನ್ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ. ಕ್ರಿಕ್‌ಬಜ್‌ನ ಸುದ್ದಿಯ ಪ್ರಕಾರ, ರಿಜ್ವಾನ್ ಅವರು ಬಾಲ್ಯದಲ್ಲಿ ಸಚಿನ್ ಅವರನ್ನು ಇಷ್ಟಪಡುತ್ತಿದ್ದರು. ಆದರೆ ಸಚಿನ್ ಪಾಕಿಸ್ತಾನದ ವಿರುದ್ಧ ರನ್ ಗಳಿಸಿದಾಗ ಅದನ್ನು ಹೇಗೆ ಆಚರಿಸುವುದು ಎಂಬ ಸಂದಿಗ್ಧತೆ ಸೃಷ್ಟಿಯಾಗುತ್ತಿತ್ತು ಎಂದು ರಿಜ್ವಾನ್ ಹೇಳಿದ್ದಾರೆ. ಹೀಗಾಗಿ ಸಚಿನ್ ತೆಂಡೂಲ್ಕರ್ ಪಾಕ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾಗ ನಾನು ಭಯಪಡುತ್ತಿದ್ದೆ ಎಂದಿದ್ದಾರೆ.
ಸಚಿನ್ ತೆಂಡೂಲ್ಕರ್ ಬಗ್ಗೆ ಮಾತನಾಡಿದ ರಿಜ್ವಾನ್, ಪಾಕಿಸ್ತಾನದ ವಿರುದ್ಧ ಅವರ ದಾಖಲೆ ತುಂಬಾ ಚೆನ್ನಾಗಿದೆ. 2003 ಮತ್ತು 2011ರ ವಿಶ್ವಕಪ್‌ನಲ್ಲಿ ಪಾಕ್ ವಿರುದ್ದ ಸಚಿನ್ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ಆದರೆ ನನಗೆ ಅದನ್ನು ಸಂಭ್ರಮಿಸಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಸೋತಿರುವುದು ನಮ್ಮ ತಂಡ ಅಲ್ಲವೇ ಎಂದು ಮೊಹಮ್ಮದ್ ರಿಜ್ವಾನ್ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಈ ಬಾರಿಯ ಏಷ್ಯಾಕಪ್‌ನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ರಿಜ್ವಾನ್, ಸೂಪರ್-4 ಹಂತದಲ್ಲಿ ಭಾರತದ ವಿರುದ್ಧ 71 ಬಾರಿಸಿ ಮಿಂಚಿದ್ದರು. ಹಾಗೆಯೇ ಗ್ರೂಪ್ ಹಂತದಲ್ಲಿ ಭಾರತದ ವಿರುದ್ಧ 43 ರನ್ ಗಳಿಸಿದ್ದರು. ಈ ಅತ್ಯುತ್ತಮ ಇನ್ನಿಂಗ್ಸ್‌ಗಳ ಆಧಾರದ ಮೇಲೆ, ರಿಜ್ವಾನ್ ವಿಶ್ವದ ನಂಬರ್ ಒನ್ ಟಿ20 ಬ್ಯಾಟ್ಸ್‌ಮನ್ ಆಗಿದ್ದಾರೆ. ಇದೀಗ ಒಟ್ಟು 226 ರನ್ ಗಳಿಸಿರುವ ಪಾಕ್ ಆರಂಭಿಕ ಆಟಗಾರ ಈ ಬಾರಿಯ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಸದ್ಯ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದು, ಫೈನಲ್‌ನಲ್ಲಿ ಕನಿಷ್ಠ 51 ರನ್ ಬಾರಿಸಿದರೆ ವಿರಾಟ್ ಕೊಹ್ಲಿಯನ್ನು ಮೊಹಮ್ಮದ್ ರಿಜ್ವಾನ್ ಹಿಂದಿಕ್ಕಲಿದ್ದಾರೆ.