Virat Kohli: ‘ನಾನು ಕೊಹ್ಲಿಗಿಂತ ಹೆಚ್ಚು ಕ್ರಿಕೆಟ್ ಆಡಿದ್ದೇನೆ’ ಅಂತ ಸೌರವ್ ಗಂಗೂಲಿ ಹೇಳಿದ್ದು ಯಾಕೆ?
Sourav Ganguly: ಪ್ರತಿಯೊಬ್ಬರೂ ಮಾಧ್ಯಮಗಳ ಟೀಕೆಗೆ ಬಲಿಯಾಗಬೇಕಾಗುತ್ತದೆ. ನಾನು ಎಲ್ಲವನ್ನೂ ಓದದ ಕಾರಣ ಅರ್ಧದಷ್ಟು ವಿಷಯಗಳು ನನಗೆ ತಿಳಿದಿಲ್ಲ.
ವಿರಾಟ್ ಕೊಹ್ಲಿ (Virat Kohli) ಟೀಮ್ ಇಂಡಿಯಾ (Team India) ಟೆಸ್ಟ್ ನಾಯಕತ್ವವನ್ನು ತೊರೆದ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ನಡುವೆ ಭಿನ್ನಾಭಿಪ್ರಾಯವಿದೆ ಎಂದು ವರದಿಯಾಗಿತ್ತು. ಅಲ್ಲದೆ ಇಬ್ಬರು ತದ್ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಚರ್ಚೆಗೀಡಾಗಿದ್ದರು. ಇದರ ನಡುವೆ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ವಿಷಯ ಕೂಡ ಮುನ್ನಲೆಗೆ ಬಂದಿತ್ತು. ಆದರೆ ಇದೀಗ ಏಷ್ಯಾಕಪ್ ಟೂರ್ನಿಯ ಮೂಲಕ ಕೊಹ್ಲಿ ಫಾರ್ಮ್ಗೆ ಮರಳಿದ್ದಾರೆ. ಇಂತಹದೊಂದು ಕಂಬ್ಯಾಕ್ ಅನ್ನು ಇದೀಗ ಸೌರವ್ ಗಂಗೂಲಿಗೆ ಹೋಲಿಸಲಾಗುತ್ತಿದೆ. ಏಕೆಂದರೆ ಈ ಹಿಂದೆ ದಾದಾ ಕೂಡ ಹಲವು ರೀತಿಯ ಟೀಕೆಗಳನ್ನು ಎದುರಿಸಿದ್ದರೂ, ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಆಕ್ರಮಣಕಾರಿ ಆಟದೊಂದಿಗೆ ಫಾರ್ಮ್ ಕಂಡುಕೊಂಡಿದ್ದರು. ಇದೀಗ ಭಾರತ ಕಂಡಂತಹ ಇಬ್ಬರು ಆಕ್ರಮಣಕಾರಿ ಆಟಗಾರರನ್ನು ಹೋಲಿಕೆ ಮಾಡಲಾಗುತ್ತಿದೆ.
ಈ ಹೋಲಿಕೆಯನ್ನು ಸೌರವ್ ಗಂಗೂಲಿಗೆ ತಿಳಿಸಿದಾಗ ಅವರು ಅಚ್ಚರಿಯ ಹೇಳಿಕೆ ನೀಡಿರುವುದು ವಿಶೇಷ. ವಿರಾಟ್ ಕೊಹ್ಲಿ ಹೆಚ್ಚು ಕ್ರಿಕೆಟ್ ಆಡಿರುವ ಕಾರಣಕ್ಕೆ ಅವರನ್ನು ಹೋಲಿಸಲು ಸಾಧ್ಯವಿಲ್ಲ. ಹೋಲಿಕೆ ಮಾಡಬೇಕಾದರೆ ಅದು ಆಡುವ ಪ್ರತಿಭೆಯ ಮೇಲೆ ಇರಬೇಕು ಎಂದರು. ಅವನು ನನಗಿಂತ ಉತ್ತಮ ಆಟಗಾರ ಎಂದು ನಾನು ಭಾವಿಸುತ್ತೇನೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ನಾವು ವಿವಿಧ ಸಮಯಗಳಲ್ಲಿ ಆಡಿದ್ದೇವೆ. ನನ್ನ ಅವಧಿಯಲ್ಲಿ ನಾನು ಅನೇಕ ಪಂದ್ಯಗಳನ್ನು ಆಡಿದ್ದೇನೆ. ಈಗ ಅವರು ಆಡುತ್ತಿದ್ದಾರೆ ಮತ್ತು ಆಡುವುದನ್ನು ಮುಂದುವರಿಸುತ್ತಾರೆ. ಈ ಸಮಯದಲ್ಲಿ ಅವರು ನನಗಿಂತ ಕಡಿಮೆ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರು ನನ್ನನ್ನು ಮೀರಿಸುತ್ತಾರೆ ಎಂದು ನನಗೆ ತಿಳಿದಿದೆ. ಏಕೆಂದರೆ ಅವರೊಬ್ಬ ಅತ್ಯುತ್ತಮ ಆಟಗಾರ ಎಂದು ಇದೇ ವೇಳೆ ಗಂಗೂಲಿ ತಿಳಿಸಿದರು.
ಇನ್ನು ಟೀಕೆಗಳ ಕುರಿತು ಮಾತನಾಡಿದ ಗಂಗೂಲಿ, ‘ಪ್ರತಿಯೊಬ್ಬರೂ ಮಾಧ್ಯಮಗಳ ಟೀಕೆಗೆ ಬಲಿಯಾಗಬೇಕಾಗುತ್ತದೆ. ನಾನು ಎಲ್ಲವನ್ನೂ ಓದದ ಕಾರಣ ಅರ್ಧದಷ್ಟು ವಿಷಯಗಳು ನನಗೆ ತಿಳಿದಿಲ್ಲ. ಹೋಟೆಲ್‌ಗೆ ಹೋದಾಗ, ನನಗೆ ಪತ್ರಿಕೆಗಳು ಬೇಡ ಎಂದು ನಾನು ಹೇಳುತ್ತೇನೆ. ಈಗ ಅದು ಪತ್ರಿಕೆ ಮಾತ್ರವಲ್ಲ, ಸಾಮಾಜಿಕ ಮಾಧ್ಯಮದಲ್ಲೂ ಟೀಕೆಗಳು ಬರುತ್ತಿವೆ.
ಆದರೆ ಅದರ ಬಗ್ಗೆ ಹೆಚ್ಚು ಚಿಂತೆ ಮಾಡಬಾರದರು. ಕೆಲವು ಒಳ್ಳೆಯ ದಿನಗಳಿರುತ್ತವೆ. ಮತ್ತೆ ಕೆಲ ದಿನಗಳು ಕೆಟ್ಟದಾಗಿರುತ್ತವೆ. ಕೆಲವೊಮ್ಮೆ ನನ್ನ ಮೇಲೆ ಒತ್ತಡ ಹೆಚ್ಚಿರುತ್ತದೆ, ಕೆಲವೊಮ್ಮೆ ಕಡಿಮೆ ಇರುತ್ತದೆ. ನಾನು ಈಗ ಅದನ್ನು ಮಾಡಬಲ್ಲೆ ಏಕೆಂದರೆ ನನಗೆ ಅನುಭವವಿದೆ. ಯುವ ಆಟಗಾರರು ಇದನ್ನು ಅವಕಾಶವಾಗಿ ನೋಡಬೇಕು ಮತ್ತು ಕಲಿಯಬೇಕು ಮತ್ತು ಮುಂದುವರಿಯಬೇಕು ಎಂದು ಸೌರವ್ ಗಂಗೂಲಿ ಕಿವಿಮಾತು ಹೇಳಿದರು.
ಇದೇ ವೇಳೆ ವಿರಾಟ್ ಕೊಹ್ಲಿ ಹೆಚ್ಚು ಕೌಶಲ್ಯಶಾಲಿ ಬ್ಯಾಟ್ಸ್ಮನ್ ಎಂದು ಹೊಗಳಿದ ಗಂಗೂಲಿ, ಆತ ನನಗಿಂತ ಮುಂದೆ ಸಾಗಲಿದ್ದಾರೆ ಎಂದು ದಾದಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.