ಟೀಮ್ ಇಂಡಿಯಾದ ಅತ್ಯುತ್ತಮ ವೇಗಿಗಳಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಮುಂಚೂಣಿಯಲ್ಲಿದ್ದಾರೆ. ಈ ಇಬ್ಬರು ಜೊತೆಗೂಡಿದರೆ ಬ್ಯಾಟರ್ಗಳಿಗೆ ನಡುಕವಂತು ಶುರುವಾಗುತ್ತದೆ. ಇದಕ್ಕೆ ಸಾಕ್ಷಿ 2023ರ ಏಕದಿನ ವಿಶ್ವಕಪ್. ಈ ವಿಶ್ವಕಪ್ನಲ್ಲಿ ಇಬ್ಬರು ಜೊತೆಗೂಡಿ ಅತ್ಯುತ್ತಮ ದಾಳಿ ಸಂಘಟಿಸಿದ್ದರು. ಈ ಜುಗಲ್ಬಂಧಿಯ ಬೆನ್ನಲ್ಲೇ ಮೂಡಿದ ಪ್ರಶ್ನೆಯೆಂದರೆ ಇವರಿಬ್ಬರಲ್ಲಿ ಯಾರು ಬೆಸ್ಟ್ ಎಂಬುದು. ಈ ಪ್ರಶ್ನೆಗೆ ವೆಸ್ಟ್ ಇಂಡೀಸ್ನ ಮಾಜಿ ವೇಗದ ಬೌಲರ್ ಆ್ಯಂಡಿ ರಾಬರ್ಟ್ಸ್ ಉತ್ತರ ನೀಡಿದ್ದಾರೆ.
70 ಮತ್ತು 80 ರ ದಶಕದಲ್ಲಿ ಬ್ಯಾಟರ್ಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದ ಆ್ಯಂಡಿ ರಾಬರ್ಟ್ಸ್, ಮೊಹಮ್ಮದ್ ಶಮಿ ಅವರನ್ನು ಭಾರತದ ಅತ್ಯುತ್ತಮ ಬೌಲರ್ ಎಂದು ಬಣ್ಣಿಸಿದ್ದಾರೆ. ಬುಮ್ರಾ ವಿಕೆಟ್ ಕಬಳಿಸಿದರೂ, ಶಮಿಯೇ ಬೆಸ್ಟ್ ಎಂದಿದ್ದಾರೆ.
ಮಿಡ್ ಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆ್ಯಂಡಿ ರಾಬರ್ಟ್ಸ್, ಪ್ರಸ್ತುತ ಟೀಮ್ ಇಂಡಿಯಾದ ಅತ್ಯುತ್ತಮ ವೇಗಿಗಳಲ್ಲಿ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು. ಇವರಿಬ್ಬರಲ್ಲಿ ಯಾರು ಉತ್ತಮ ವೇಗಿ ಎಂಬ ಪ್ರಶ್ನೆಗೆ, ಶಮಿ ಎಂದು ಉತ್ತರಿಸಿದ್ದಾರೆ. ಇದಕ್ಕೆ ಕಾರಣವನ್ನೂ ಸಹ ನೀಡಿದ್ದಾರೆ.
ಮೊಹಮ್ಮದ್ ಶಮಿ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಅವರಷ್ಟು ವಿಕೆಟ್‌ಗಳನ್ನು ಕಬಳಿಸದಿದ್ದರೂ, ಅವರು ಸಂಪೂರ್ಣ ಪ್ಯಾಕೇಜ್ ಬೌಲರ್. ಏಕೆಂದರೆ ಅವರ ಶೈಲಿಯಲ್ಲಿ ಸ್ಥಿರತೆ ಇದೆ. ಶಮಿ ಚೆಂಡನ್ನು ಸೀಮಿಂಗ್ ಮತ್ತು ಸ್ವಿಂಗ್ ಮಾಡುವುದರಲ್ಲಿ ಸಮರ್ಥರು.
ಇದಲ್ಲದೇ ಶಮಿ ಬೌಲಿಂಗ್‌ನಲ್ಲಿ ಬುಮ್ರಾ ಅವರಂತೆ ನಿಯಂತ್ರಣವೂ ಇದೆ. ಹೀಗಾಗಿಯೇ ನಾನು ಮೊಹಮ್ಮದ್ ಶಮಿ ಅತ್ಯುತ್ತಮ ಬೌಲರ್ ಎಂದು ಹೇಳಬಲ್ಲೆ ಎಂದು ಆ್ಯಂಡಿ ರಾಬರ್ಟ್ಸ್ ತಿಳಿಸಿದ್ದಾರೆ.
ಇನ್ನು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ಟೀಮ್ ಇಂಡಿಯಾ ಮೊಹಮ್ಮದ್ ಶಮಿ ಅವರನ್ನು ಕರೆಸಿಕೊಳ್ಳುವುದು ಉತ್ತಮ. ಏಕೆಂದರೆ ಅಲ್ಲಿನ ಪರಿಸ್ಥಿತಿಯಲ್ಲಿ ಶಮಿ ಅತ್ಯುತ್ತಮ ದಾಳಿ ಸಂಘಟಿಸಬಲ್ಲರು. ಹೀಗಾಗಿ ಉಳಿದ ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿಯಬೇಕೆಂದು ಬಯಸುವುದಾಗಿ ರಾರ್ಬಟ್ಸ್ ಹೇಳಿದ್ದಾರೆ.
ಸದ್ಯ ಮೊಹಮ್ಮದ್ ಶಮಿ ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ ಪರ ಆಡುತ್ತಿದ್ದಾರೆ. ಗಾಯದ ಕಾರಣ ಕಳೆದ ಒಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಹೀಗಾಗಿ ಅವರ ಕಾರ್ಯಕ್ಷಮತೆಯ ಪರೀಕ್ಷೆಗಾಗಿ ದೇಶೀಯ ಟೂರ್ನಿ ಆಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಕೋಟಿ ಕೋಟಿ ಎಣಿಸಿದ್ದ ವಿನೋದ್ ಕಾಂಬ್ಳಿಯ ಇಂದಿನ ಆದಾಯ ಎಷ್ಟು ಗೊತ್ತೇ?
ಅದರಂತೆ ಇದೀಗ ಬಂಗಾಳ ಪರ ಭರ್ಜರಿ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್ ಶಮಿ ಅವರ ಫಿಟ್ನೆಸ್ ಮೇಲೆ ಎನ್ಸಿಎ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಅಲ್ಲದೆ ಅವರ ಫಿಟ್ನೆಸ್ನಲ್ಲಿ ಯಾವುದೇ ಸಮಸ್ಯೆ ಕಂಡು ಬರದಿದ್ದರೆ ಆಸ್ಟ್ರೇಲಿಯಾಗೆ ಹೋಗಲು ಗ್ರೀನ್ ಸಿಗ್ನಲ್ ನೀಡಲಿದ್ದಾರೆ. ಅದರಂತೆ ಆಸ್ಟ್ರೇಲಿಯಾ ವಿರುದ್ಧದ ಕೊನೆಯ 2 ಟೆಸ್ಟ್ ಪಂದ್ಯಗಳಲ್ಲಿ ಮೊಹಮ್ಮದ್ ಶಮಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.