ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕಳೆದ ಕೆಲ ದಿನಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದ ಶಮಿ ಪಾಕ್ ಮಾಜಿ ಕ್ರಿಕೆಟಿಗರು ನೀಡಿದ ಹೇಳಿಕೆಗಳಿಗೆ ಖಡಕ್ ಪ್ರತ್ಯುತ್ತರ ನೀಡಿದ್ದರು. ಇದೀಗ ಗೆಳೆಯ ಉಮೇಶ್ ಕುಮಾರ್ ಬಹಿರಂಗಪಡಿಸಿದ ಆಘಾತಕಾರಿ ವಿಚಾರಗಳಿಂದ ಮೊಹಮ್ಮದ್ ಶಮಿ ಮತ್ತೆ ಸುದ್ದಿಯಾಗಿದ್ದಾರೆ.
ಶುಭಂಕರ್ ಮಿಶ್ರಾ ಅವರ ಪಾಡ್ಕಾಸ್ಟ್ನಲ್ಲಿ ಕಾಣಿಸಿಕೊಂಡ ಉಮೇಶ್ ಕುಮಾರ್ ಗೆಳೆಯ ಶಮಿ ಬಗ್ಗೆ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲಿ ಶಮಿ ಅವರ ವೈಯುಕ್ತಿಕ ಜೀವನದ ಕೆಲ ವಿಚಾರಗಳು ಕೂಡ ಒಳಗೊಂಡಿವೆ.
ಈ ಸಂದರ್ಶನದಲ್ಲಿ ಮಾತನಾಡಿದ ಉಮೇಶ್ ಕುಮಾರ್, ನಾನು ಶಮಿ ತುಂಬಾ ಆಪ್ತರು. ನನಗೆ ಅವರು ಏನೆಂದು ಚೆನ್ನಾಗಿ ಗೊತ್ತು. ಅಂದು ಅವರ ಪತ್ನಿ ಹಸಿನ್ ಜಹಾನ್ ಮಾಡಿರುವ ಆಘಾತಕಾರಿ ಆರೋಪಗಳಿಂದ ನಿಜಕ್ಕೂ ಶಮಿ ಸಂಪೂರ್ಣ ನಲುಗಿ ಹೋಗಿದ್ದರು.
ಮೊಹಮ್ಮದ್ ಶಮಿ ಮ್ಯಾಚ್ ಫಿಕ್ಸಿಂಗ್ ಮಾಡುತ್ತಾರೆ ಎಂದು ಹಸಿನ್ ಜಹಾನ್ ಮಾಧ್ಯಮದ ಮುಂದೆ ಗಂಭೀರ ಆರೋಪ ಮಾಡಿದ್ದರು. ಈ ವೇಳೆ ಶಮಿ ನನ್ನ ಮನೆಯಲ್ಲಿಯೇ ಇದ್ದರು. ಈ ಸುದ್ದಿ ಕೇಳಿ ಅವರಲ್ಲಿ ಉಂಟಾದ ಮಾನಸಿಕ ತಳಮಳಗಳನ್ನು ನಾನು ನೋಡಿದ್ದೇನೆ.
ಈ ಗಂಭೀರ ಆರೋಪದಿಂದಾಗಿ ಮೊಹಮ್ಮದ್ ಶಮಿ ಅವರ ನೆಮ್ಮದಿಯೇ ಹಾಳಾಗಿತ್ತು. ನಿದ್ದೆಯಿಲ್ಲದೆ ರಾತ್ರಿಗಳನ್ನು ಕಳೆಯುತ್ತಿದ್ದರು. ಏಕೆಂದರೆ ಯಾವುದೇ ತಪ್ಪು ಮಾಡದ ಶಮಿ ವಿರುದ್ಧ ಪಾಕಿಸ್ತಾನ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡುತ್ತಾರೆ ಎಂದು ಹಸಿನ್ ಗಂಭೀರ ಆರೋಪ ಹೊರಿಸಿದ್ದರು.
ನನ್ನ ಪ್ರಕಾರ ಮೊಹಮ್ಮದ್ ಶಮಿ ಎಲ್ಲವನ್ನೂ ಸಹಿಸಿಕೊಳ್ಳಬಲ್ಲರು. ಆದರೆ ದೇಶಕ್ಕೆ ಮೋಸ ಮಾಡುವಂತಹ ಕೆಲಸಕ್ಕೆ ಕೈ ಹಾಕಲ್ಲ, ಅಂತಹ ಆರೋಪವನ್ನು ಸಹ ಸಹಿಸಿಕೊಳ್ಳಲ್ಲ. ಹೀಗಾಗಿಯೇ ಫಿಕ್ಸಿಂಗ್ ಆರೋಪದಿಂದ ಅವರು ವಿಚಲಿತರಾದರು. ಅದನ್ನು ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗೆ ಹಸಿನ್ ಜಹಾನ್ ಬೇಕಾಬಿಟ್ಟಿ ಮಾಡಿದ ಆರೋಪದಿಂದ ಶಮಿ ಸಂಪೂರ್ಣ ಕುಗ್ಗಿ ಹೋಗಿದ್ದರು ಎಂದು ಉಮೇಶ್ ಕುಮಾರ್ ತಿಳಿಸಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಆರೋಪದ ಬೆನ್ನಲ್ಲೇ ಶಮಿ ಮಾನಸಿಕ ಸಮತೋಲನ ಕಳೆದುಕೊಂಡಿದ್ದರು. ಅಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದರು.
ಅದೊಂದು ದಿನ ಬೆಳಗಿನ ಜಾವ 4 ಗಂಟೆಯಾಗಿರಬೇಕು. ನಾನು ನೀರು ಕುಡಿಯಲೆಂದು ಅಡುಗೆ ಮನೆಗೆ ಹೋಗಿದ್ದೆ. ಅಂದು ಶಮಿ ಕೂಡ ನಮ್ಮ ಮನೆಯಲ್ಲಿಯೇ ಇದ್ದರು.
ನಾನು ನೀರು ಕುಡಿಯಲು ಹೋಗುವಾಗ ನೋಡಿದ್ರೆ ಶಮಿ 19ನೇ ಮಹಡಿಯ ಬಾಲ್ಕನಿಯಲ್ಲಿ ನಿಂತಿದ್ದರು. ಅಲ್ಲಿ ನಿಂತು ಅವರು ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿದ್ದರು. ಅದೊಂದು ರಾತ್ರಿಯನ್ನು ಯೋಚಿಸಲು ಕೂಡ ಸಾಧ್ಯವಾಗಿಲ್ಲ. ಅದಷ್ಟೊಂದು ದೀರ್ಘ ಮತ್ತು ಭಯಾನಕವಾಗಿತ್ತು ಎಂದು ಉಮೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ಚಿಂತೆ ಹೆಚ್ಚಿಸಿದ ಸ್ಟಾರ್ ಆಟಗಾರರು
ಫಿಕ್ಸಿಂಗ್ ಆರೋಪದಿಂದ ಕುಗ್ಗಿ ಹೋಗಿದ್ದ ಮೊಹಮ್ಮದ್ ಶಮಿ ಮತ್ತೆ ಉತ್ಸುಕರಾಗಿದ್ದ ಕ್ಲೀನ್ ಚಿಟ್ ಪಡೆದ ಬಳಿಕವಷ್ಟೇ. ಅದೊಂದು ದಿನ ಅವರ ಮೊಬೈಲ್ಗೆ ಫಿಕ್ಸಿಂಗ್ ಆರೋಪದಿಂದ ಕ್ಲೀನ್ ಚಿಟ್ ಸಿಕ್ಕಿದೆ ಎಂಬ ಸಂದೇಶ ಬಂದಿತ್ತು. ಮೊಹಮ್ಮದ್ ಶಮಿ ಅಂದು ಎಷ್ಟು ಖುಷಿಪಟ್ಟಿದ್ದರು ಎಂಬುದನ್ನು ನೀವು ಊಹಿಸಲು ಸಾಧ್ಯವಿಲ್ಲ. ಅವರು ವಿಶ್ವಕಪ್ ಗೆದ್ದಂತೆ ಖುಷಿಪಟ್ಟಿದ್ದರು ಎಂದು ಉಮೇಶ್ ಕುಮಾರ್ ಹೇಳಿದ್ದಾರೆ.