IPL 2025: SRH ತಂಡದಿಂದ ಉಮ್ರಾನ್ ಮಲಿಕ್ ಔಟ್?
IPL 2025: ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬಹುದು. ಅದಕ್ಕೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಯುವ ವೇಗಿ ಉಮ್ರಾನ್ ಮಲಿಕ್ ಅವರನ್ನು ತಂಡದಿಂದ ಕೈ ಬಿಡಲು ಚಿಂತಿಸಿದೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಜಮ್ಮು ಎಕ್ಸ್ಪ್ರೆಸ್ ಖ್ಯಾತಿ ಉಮ್ರಾನ್ ಎಸ್ಆರ್ಹೆಚ್ ತಂಡದಲ್ಲಿ ಕಾಣಿಸಿಕೊಳ್ಳುವುದು ಡೌಟ್.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೂ ಮುನ್ನ ಉಮ್ರಾನ್ ಮಲಿಕ್ ಅವರನ್ನು ತಂಡದಿಂದ ಕೈ ಬಿಡಲು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬಯಸಿದೆ. ಎಸ್ಆರ್ಹೆಚ್ ಫ್ರಾಂಚೈಸಿಯು ಮೆಗಾ ಹರಾಜಿಗಾಗಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು, ಈ ವೇಳೆ ಜಮ್ಮು ಕಾಶ್ಮೀರದ ವೇಗಿಯನ್ನು ಕೈ ಬಿಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
2021ರ ಹರಾಜಿನ ಮೂಲಕ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು 2 ಕೊಟಿ ರೂ.ಗೆ ಉಮ್ರಾನ್ ಮಲಿಕ್ ಅವರನ್ನು ಖರೀದಿಸಿತ್ತು. ಅದರಂತೆ ಮೊದಲ ಸೀಸನ್ನಲ್ಲಿ ಆಡಿದ್ದು ಕೇವಲ 3 ಪಂದ್ಯಗಳು ಮಾತ್ರ.
ಇದಾಗ್ಯೂ 2022ರ ಹರಾಜಿಗೂ ಮುನ್ನ ಉಮ್ರಾನ್ ಮಲಿಕ್ ಅವರನ್ನು 4 ಕೋಟಿ ರೂ. ನೀಡಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಉಳಿಸಿಕೊಂಡಿತ್ತು. ಅದರಂತೆ ಐಪಿಎಲ್ 2022 ರಲ್ಲಿ ಕಣಕ್ಕಿಳಿದ ಯುವ ವೇಗಿ ತನ್ನ ಮಾರಕ ವೇಗದಿಂದ ಗಮನ ಸೆಳೆದರು. ಅಲ್ಲದೆ 14 ಪಂದ್ಯಗಳಿಂದ 22 ವಿಕೆಟ್ ಕಬಳಿಸಿ ಸಂಚಲನ ಸೃಷ್ಟಿಸಿದ್ದರು.
ಹೀಗಾಗಿಯೇ 2023 ರಲ್ಲೂ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮಲಿಕ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ಈ ಸೀಸನ್ನಲ್ಲಿ 8 ಪಂದ್ಯಗಳಲ್ಲಿ ಕಣಕ್ಕಿಳಿದರೂ ಪಡೆದದ್ದು ಕೇವಲ 5 ವಿಕೆಟ್ ಮಾತ್ರ.
ಇನ್ನು ಐಪಿಎಲ್ 2024 ರಲ್ಲಿ ಉಮ್ರಾನ್ ಮಲಿಕ್ ಕೇವಲ 1 ಪಂದ್ಯದಲ್ಲಿ ಮಾತ್ರ ಅವಕಾಶ ಪಡೆದಿದ್ದರು. ಕಳೆದ ಸೀಸನ್ನಲ್ಲಿ ಕೇವಲ ಒಂದು ಪಂದ್ಯವಾಡಿದ ಆಟಗಾರನನ್ನು ಹರಾಜಿಗೂ ಮುನ್ನ ಕೈ ಬಿಡಲು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಒಟ್ಟು 26 ಪಂದ್ಯಗಳನ್ನಾಡಿರುವ ಉಮ್ರಾನ್ ಮಲಿಕ್ 493 ಎಸೆತಗಳನ್ನು ಎಸೆದಿದ್ದು, ಈ ವೇಳೆ 772 ರನ್ ನೀಡಿ 29 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ಚಿಂತೆ ಹೆಚ್ಚಿಸಿದ ಸ್ಟಾರ್ ಆಟಗಾರರು
ವೇಗದೂತ ದಾಖಲೆ:
ಐಪಿಎಲ್ ಇತಿಹಾಸದಲ್ಲೇ ಅತೀ ವೇಗವಾಗಿ ಚೆಂಡೆಸೆದ ಭಾರತೀಯ ಬೌಲರ್ ಎಂಬ ದಾಖಲೆ ಉಮ್ರಾನ್ ಮಲಿಕ್ ಹೆಸರಿನಲ್ಲಿದೆ. ಐಪಿಎಲ್ 2022 ರಲ್ಲಿ ಮಲಿಕ್ 157 kmph ವೇಗದಲ್ಲಿ ಚೆಂಡೆಸೆಯುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ. ಹೀಗಾಗಿ ಜಮ್ಮು ಎಕ್ಸ್ಪ್ರೆಸ್ ಖ್ಯಾತಿಯ ಉಮ್ರಾನ್ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ಕೆಲ ಫ್ರಾಂಚೈಸಿಗಳು ಅವರು ಖರೀದಿಗೆ ಆಸಕ್ತಿವಹಿಸುವ ಸಾಧ್ಯತೆಯಿದೆ.
Published On - 2:01 pm, Wed, 24 July 24