ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿ ಮುಕ್ತಾಯಗೊಂಡಿದೆ. ಹೊಸ ತಂಡದವಾದ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ, ಅಭಿಮಾನಿಗಳು ಸೇರಿದಂತೆ ಆಟಗಾರರು ಕೂಡ ಐಪಿಎಲ್ ಗುಂಗಿನಿಂದ ಇನ್ನೂ ಹೊರ ಬಂದಿಲ್ಲ. ಐಪಿಎಲ್ 2022 (IPL 2022) ರಲ್ಲಿ ನಡೆದ ಕೆಲ ಘಟನೆಗಳುನ್ನು ಮೆಲುಕು ಹಾಕುತ್ತಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಮೈದಾನದಲ್ಲೇ ಆಟಗಾರರ ಮಧ್ಯೆ ಅನೇಕ ಬಾರಿ ಮಾತಿನ ಚಕಮಕಿ ನಡೆದಿದೆ. ಇದರಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯದಲ್ಲಿ ನಡೆದಂತಹ ಘಟನೆ. ಇಲ್ಲಿ ರಿಯಾನ್ ಪರಾಗ್ (Riyan Parag), ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ನಡುವೆ ದೊಡ್ಡ ಮಟ್ಟದಲ್ಲಿ ವಾಗ್ವಾದ ನಡೆದಿತ್ತು. ಸದ್ಯ ಈ ಬಗ್ಗೆ ಸ್ವತಃ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರಿಯಾನ್ ಪರಾಗ್ ಮಾತನಾಡಿದ್ದು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.
ಏನಿದು ಘಟನೆ?:
ಆರ್ಆರ್ ವಿರುದ್ಧ ಟಾಸ್ ಗೆದ್ದ ಆರ್ಸಿಬಿ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿತು. ಅದ್ಭುತ ಬೌಲಿಂಗ್ ಮಾಡಿದ ಬೆಂಗಳೂರು ಬೌಲರ್ಸ್ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವುದರಲ್ಲಿದ್ದರು. ಆದರೆ ರಿಯಾನ್ ಪರಾಗ್ ಬೊಂಬಾಟ್ ಬ್ಯಾಟಿಂಗ್ ಮೂಲಕ ರಾಜಸ್ಥಾನ್ ತಂಡ ಮೊತ್ತ 144 ರನ್‌ಗಳಿಗೆ ಏರುವಂತೆ ಮಾಡಿದರು. ಈ ಪಂದ್ಯದಲ್ಲಿ ಪರಾಗ್ 31 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 56 ರನ್ ಸಿಡಿಸಿ ಮಿಂಚಿದರು. ಅದರಲ್ಲೂ ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್‌ನಲ್ಲಿ ಪರಾಗ್ 2 ಸಿಕ್ಸರ್‌ಗಳ ಸಹಿರ 18 ರನ್‌ಗಳನ್ನು ಕಸಿಯುವಲ್ಲಿ ಯಶಸ್ವಿಯಾಗಿದ್ದರು. ಇನ್ನಿಂಗ್ಸ್ ಕೊನೆ ಎಸೆತವನ್ನು ಸಿಕ್ಸ್ ಸಿಡಿಸಿದ ಪರಾಗ್, ಪೆವಿಲಿಯನ್ಗೆ ಮರಳುವಾಗ ಹರ್ಷಲ್ಗೆ ಏನೋ ಕಣಕಿ ಹೋದರು. ಇದರಿಂದ ರೊಚ್ಚಿಗೆದ್ದ ಮೊಹಮ್ಮದ್ ಸಿರಾಜ್, ಪರಾಗ್ ಜೊತೆ ವಾಗ್ವಾದಕ್ಕಿಳಿದರು. ಬಳಿಕ ಹರ್ಷಲ್ ಸಹ ಪರಾಗ್ ವಿರುದ್ಧ ಹರಿಹಾಯ್ದರು. ನಂತರ ಪಂದ್ಯ ಮುಗಿದ ಬಳಿಕ ಎರಡೂ ತಂಡದ ಆಟಗಾರರು ಶೇಕ್ ಹ್ಯಾಂಡ್ ಮಾಡುವಾಗ ಪರಾಗ್ಗೆ ಶೇಕ್ ಹ್ಯಾಂಡ್ ಮಾಡದೆ ನಿರ್ಲಕ್ಷ್ಯ ಮಾಡಿದ್ದರಿ ಹರ್ಷಲ್. ಕೈ ಕುಲುಕಲು ಬಂದ ಪರಾಗ್ ಅವರನ್ನ ನಿರ್ಲಕ್ಷಿಸಿ ಮುಂದಕ್ಕೆ ಹೋದರು. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
India vs South Africa ಟಿ20 ಸರಣಿ ಯಾವಾಗ?, ಎಷ್ಟು ಗಂಟೆಗೆ, ನೇರ ಪ್ರಸಾರ, ಟಿಕೆಟ್ ಮಾರಾಟ: ಇಲ್ಲಿದೆ ಎಲ್ಲ ಮಾಹಿತಿ
ರಿಯಾನ್ ಪರಾಗ್ ಹೇಳಿದ್ದೇನು?:
ಸದ್ಯ ಈ ವಿಚಾರವಾಗಿ ರಿಯಾನ್ ಪರಾಗ್ ಮಾತನಾಡಿದ್ದು ಘಟನೆ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. “ಕಳೆದ ವರ್ಷ ನಾನು ಆರ್ಸಿಬಿ ವಿರುದ್ಧ ಆಡುವಾಗ ಹರ್ಷಲ್ ಪಟೇಲ್ ನನ್ನನ್ನು ಔಟ್ ಮಾಡಿದ್ದರು. ನಾನು ಪೆವಿಲಿಯನ್ ಕಡೆ ಹೋಗುತ್ತಿದ್ದೆ. ಆಗ ಹರ್ಷಲ್ ಹೋಗು ಇಲ್ಲಿಂದ ಎಂಬಂತೆ ಕೈಯಿಂದ ಸನ್ನೆ ಮಾಡಿದರು. ನಾನು ಇದನ್ನು ಆಗಲೇ ಗಮನಿಸಿರಲಿಲ್ಲ. ಪಂದ್ಯ ಮುಗಿದ ಬಳಿಕ ರಿಪ್ಲೇಯಲ್ಲಿ ನೋಡಿದೆ. ಅದು ನನ್ನ ತಲೆಯಲ್ಲೇ ಉಳಿದುಕೊಂಡಿತ್ತು. ಈ ಬಾರಿ ಹರ್ಷಲ್ ಅವರ ಕೊನೆಯ ಓವರ್‌ನಲ್ಲಿ ರನ್ ಗಳಿಸಿದಾಗ ನಾನು ಕೂಡ ಅದೇರೀತಿ ಮಾಡಿದೆಯಷ್ಟೆ”.
ಅಲ್ಲಿ ನಾನು ಯಾರನ್ನೂ ನಿಂದಿಸಿಲ್ಲ. ಆದರೆ, ಮೊಹಮ್ಮದ್ ಸಿರಾಜ್ ನನ್ನನ್ನು ಕರೆದರು. ಹೇ ಇಲ್ಲಿ ಬಾ, ಬಾ ಇಲ್ಲಿ, ನೀನಿನ್ನೂ ಮಗುವಷ್ಟೆ, ಮಗುವಿನಂತೆ ವರ್ತಿಸು ಎಂದರು. ಅದಕ್ಕೆ ನಾನು ಅವರ ಬಳಿ, ಭಯ್ಯ ನಾನು ನಿಮಗೆ ಏನನ್ನು ಹೇಳಲಿಲ್ಲ ಎಂದೆ. ಅತ್ತ ಹರ್ಷಲ್ ಪಟೇಲ್ ಕೂಡ ಏನನ್ನು ಮಾತನಾಡಲಿಲ್ಲ. ಪಂದ್ಯ ಮುಗಿದ ಬಳಿಕ ಶೇಕ್ ಹ್ಯಾಂಡ್ ಕೂಡ ಮಾಡಿಲ್ಲ,” ಎಂದು ಹೇಳಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.