ವಿಶ್ರಾಂತಿಯ ಇಲ್ಲಾ ಗೇಟ್ ಪಾಸಾ? ದೇಶೀಯ ಅಂಗಳದಲ್ಲಿ ಸಿರಾಜ್..!
Mohammed Siraj: ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಪರ ಈವರೆಗೆ 46 ಏಕದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಅವರು 73 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದಾಗ್ಯೂ ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಸಿರಾಜ್ ಅವರನ್ನು ಆಯ್ಕೆ ಮಾಡಿರಲಿಲ್ಲ.

ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆ ಮಾಡಲಾದ 15 ಸದಸ್ಯರುಗಳ ಭಾರತ ತಂಡದಲ್ಲಿ ಮೊಹಮ್ಮದ್ ಸಿರಾಜ್ ಹೆಸರು ಕಾಣಿಸಿಕೊಂಡಿರಲಿಲ್ಲ. ವಿಶ್ರಾಂತಿಯ ಕಾರಣ ಸಿರಾಜ್ ಅವರನ್ನು ಏಕದಿನ ತಂಡದಿಂದ ಹೊರಗಿಡಲಾಗಿದೆ ಎನ್ನಲಾಗಿತ್ತು. ಆದರೀಗ ಅದೇ ಮೊಹಮ್ಮದ್ ಸಿರಾಜ್ ದೇಶೀಯ ಟೂರ್ನಿ ಆಡುತ್ತಿದ್ದಾರೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದಿಂದ ಸಿರಾಜ್ಗೆ ಗೇಟ್ ಪಾಸ್ ನೀಡಲಾಗಿದೆಯಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಹಿರಿಯ ಆಟಗಾರರಿಗೆ ಭಿನ್ನಾಭಿಪ್ರಾಯಗಳಿವೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇದರ ನಡುವೆ ಮೊಹಮ್ಮದ್ ಸಿರಾಜ್ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ಅವರನ್ನು ಬೇಕಂತಲೇ ತಂಡದಿಂದ ಹೊರಗಿಡಲಾಗಿದೆಯಾ? ಎಂಬ ಅನುಮಾನಗಳು ಹುಟ್ಟಿಕೊಂಡಿದೆ. ಏಕೆಂದರೆ ವಿಶ್ರಾಂತಿ ನೀಡಿದ್ದರೆ ಸಿರಾಜ್ ದೇಶೀಯ ಟಿ20 ಟೂರ್ನಿ ಆಡುವ ಅಗತ್ಯವಿರಲಿಲ್ಲ. ಅಲ್ಲದೆ ಸಿರಾಜ್ ಅವರನ್ನು ಕಳೆದ ಕೆಲ ತಿಂಗಳಿಂದ ಭಾರತ ಟಿ20 ತಂಡದ ಆಯ್ಕೆಗೆ ಪರಿಗಣಿಸಲಾಗುತ್ತಿಲ್ಲ.
ಇದಾಗ್ಯೂ ಏಕದಿನ ಸರಣಿ ವೇಳೆ ಸಿರಾಜ್ ಟಿ20 ಪಂದ್ಯವಾಡುತ್ತಿರುವುದು ಏಕೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಸಿರಾಜ್ ಅವರನ್ನು ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ಕೈ ಬಿಟ್ಟಿರುವುದರಿಂದಲೇ ಅವರು ದೇಶೀಯ ಟೂರ್ನಿ ಆಡುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.
ಇತ್ತ ಮೊಹಮ್ಮದ್ ಸಿರಾಜ್ ಅವರನ್ನು ಹೊರಗಿಟ್ಟು ಸೌತ್ ಆಫ್ರಿಕಾ ಸರಣಿಗೆ ಆಯ್ಕೆ ಮಾಡಿರುವುದು ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಅವರನ್ನು ಇಲ್ಲಿ ಉಲ್ಲೇಖಾರ್ಹ.
ಒಟ್ಟಿನಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಆಯ್ಕೆ ಬಗ್ಗೆ ಪ್ರಶ್ನೆಗಳೆದ್ದಿವೆ. ಇದರ ನಡುವೆ ಮೊಹಮ್ಮದ್ ಸಿರಾಜ್ ಅವರನ್ನು ಏಕದಿನ ಸರಣಿಯಿಂದ ಕೈ ಬಿಡಲಾಗಿರುವುದು ಕೂಡ ಬಹಿರಂಗವಾಗಿದೆ. ಹೀಗಾಗಿಯೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ಸಿರಾಜ್ ಮಿಂಚಿನ ದಾಳಿ:
ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಹೈದರಾಬಾದ್ ಪರ ಕಣಕ್ಕಿಳಿದ ಮೊಹಮ್ಮದ್ ಸಿರಾಜ್ ಮಿಂಚಿನ ದಾಳಿ ಮೂಲಕ ಗಮನ ಸೆಳೆದಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಉತ್ತರ ಪ್ರದೇಶ್ ತಂಡವು 19.2 ಓವರ್ಗಳಲ್ಲಿ 127 ರನ್ಗಳಿಸಿ ಆಲೌಟ್ ಆಗಿತ್ತು.
ಹೈದರಾಬಾದ್ ಪರ ಕರಾರುವಾಕ್ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ 4 ಓವರ್ಗಳಲ್ಲಿ ನೀಡಿದ್ದು ಕೇವಲ 16 ರನ್ಗಳು ಮಾತ್ರ. ಅಲ್ಲದೆ ಒಂದು ವಿಕೆಟ್ ಕೂಡ ಕಬಳಿಸಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 15 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ರಿಎಂಟ್ರಿ
ಇನ್ನು ಉತ್ತರ ಪ್ರದೇಶ್ ನೀಡಿದ 128 ರನ್ಗಳ ಗುರಿಯನ್ನು ಹೈದರಾಬಾದ್ ತಂಡವು 17.1 ಓವರ್ಗಳಲ್ಲಿ ಚೇಸ್ ಮಾಡಿ 3 ವಿಕೆಟ್ಗಳ ಜಯ ಸಾಧಿಸಿದೆ.
