ಮೊಹಮ್ಮದ್ ಸಿರಾಜ್ ಹಾಗೂ ಮಾರ್ನಸ್ ಲಾಬುಶೇನ್ ನಡುವೆ ಬೇಲ್ಸ್ ಬದಲಾಟ..!

| Updated By: ಝಾಹಿರ್ ಯೂಸುಫ್

Updated on: Dec 15, 2024 | 8:23 AM

Australia vs India, 3rd Test: ಬ್ರಿಸ್ಬೇನ್​ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಆಡುತ್ತಿರುವ ಆಸ್ಟ್ರೇಲಿಯಾ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು 43 ಓವರ್​​ಗಳ ಮುಕ್ತಾಯದ ವೇಳೆಗ 3 ವಿಕೆಟ್ ಕಳೆದುಕೊಂಡು 104 ರನ್ ಕಲೆಹಾಕಿದೆ.

ಮೊಹಮ್ಮದ್ ಸಿರಾಜ್ ಹಾಗೂ ಮಾರ್ನಸ್ ಲಾಬುಶೇನ್ ನಡುವೆ ಬೇಲ್ಸ್ ಬದಲಾಟ..!
Mohammed Siraj - Labuschagne
Follow us on

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಕೂಡ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದೆ. ಬ್ರಿಸ್ಬೇನ್​ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಮಳೆಯ ಕಾರಣ ಮೊದಲ ದಿನದಾಟವು ಕೇವಲ 13.2 ಓವರ್​​ಗಳಿಗೆ ಸೀಮಿತವಾಗಿತ್ತು. ಇನ್ನು ದ್ವಿತೀಯ ದಿನದಾಟ ಆರಂಭಿಸಿದ ಟೀಮ್ ಇಂಡಿಯಾಗೆ ಜಸ್​ಪ್ರೀತ್ ಬುಮ್ರಾ ಮೊದಲ ಯಶಸ್ಸು ತಂದುಕೊಟ್ಟರು.

31 ರನ್​ಗೆ ಉಸ್ಮಾನ್ ಖ್ವಾಜಾ (21) ವಿಕೆಟ್ ಕಬಳಿಸುವಲ್ಲಿ ಬುಮ್ರಾ ಯಶಸ್ವಿಯಾದರು. ಈ ವೇಳೆ ಕಣಕ್ಕಿಳಿದ ಮಾರ್ನಸ್ ಲಾಬುಶೇನ್ ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಒತ್ತು ನೀಡಿದರು. ಇತ್ತ ಸತತ ಓವರ್​ಗಳಿಂದ ಟೀಮ್ ಇಂಡಿಯಾ ಬೌಲರ್​​ಗಳು ಸಹ ಹೈರಾಣರಾದರು.

ಅದರಲ್ಲೂ ಲಾಬುಶೇನ್ ವಿಕೆಟ್ ಪಡೆಯಲು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಬೇಲ್ಸ್ ಟ್ರಿಕ್ ಮೊರೆ ಹೋದರು. 33ನೇ ಓವರ್​ ವೇಳೆ ಸಿರಾಜ್ ಸ್ಟಂಪ್ ಬೇಲ್ಸ್ ಅನ್ನು ಅದಲು ಬದಲು ಮಾಡಿ ಬೌಲಿಂಗ್ ಮಾಡಲು ಮುಂದಾದರು.

ಇದನ್ನು ಗಮನಿಸಿದ ಮಾರ್ನಸ್ ಲಾಬುಶೇನ್ ಮತ್ತೆ ಬೇಲ್ಸ್​ ಅನ್ನು ಮೊದಲಿದಂತೆ ಇಟ್ಟರು. ಆದರೆ ಇದನ್ನು ಸಿರಾಜ್ ಗಮನಿಸಿರಲಿಲ್ಲ. ಇದೀಗ ಲಾಬುಶೇನ್ ಹಾಗೂ ಸಿರಾಜ್ ನಡುವಣ ಬೇಲ್ಸ್ ಬದಲಾಟದ ವಿಡಿಯೋ ವೈರಲ್ ಆಗಿದೆ.

ಬೇಲ್ಸ್ ಟ್ರಿಕ್ ವಿಡಿಯೋ:

ಬೇಲ್ಸ್ ಬದಲಿಸುವುದು ಏಕೆ?

ಟೆಸ್ಟ್ ಕ್ರಿಕೆಟ್​ನಲ್ಲಿ ಬೇಲ್ಸ್ ಟ್ರಿಕ್ ಪರಿಚಯಿಸಿದ್ದು ಇಂಗ್ಲೆಂಡ್ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್. ಎದುರಾಳಿ ತಂಡದ ವಿಕೆಟ್ ಬೀಳದಿದ್ದಾಗ ಬ್ರಾಡ್ ಬೇಲ್ಸ್ ಅನ್ನು ಅದಲು ಬದಲು ಮಾಡಿ ಬೌಲಿಂಗ್ ಮಾಡುತ್ತಿದ್ದರು.

ವಿಶೇಷ ಎಂದರೆ ಇಂತಹದೊಂದು ಟ್ರಿಕ್ ಬಳಸಿದ ಬಳಿಕ ಬ್ರಾಡ್ ಹಲವು ಬಾರಿ ವಿಕೆಟ್ ಪಡೆದಿದ್ದರು. ಇದನ್ನೇ ಆಸ್ಟ್ರೇಲಿಯಾ ವಿರುದ್ಧ ಪ್ರಯೋಗಿಸಲು ಮೊಹಮ್ಮದ್ ಸಿರಾಜ್ ಮುಂದಾಗಿದ್ದರು.  ಆದರೆ ಬೇಲ್ಸ್ ಟ್ರಿಕ್  ಬಗ್ಗೆ ಭಯ ಹೊಂದಿದ್ದ ಮಾರ್ನಸ್ ಲಾಬುಶೇನ್ ಕೂಡಲೇ ಮತ್ತೆ ಮೊದಲಿದ್ದಂತೆ ಬೇಲ್ಸ್ ಅನ್ನು ಇಡುವ ಮೂಲಕ ಗಮನ ಸೆಳೆದರು.

ಇದನ್ನೂ ಓದಿ: ಶಾರ್ಪ್​ ಕ್ಯಾಚ್ ಹಿಡಿದು ದಾಖಲೆ ಬರೆದ ವಿರಾಟ್ ಕೊಹ್ಲಿ

ಶತಕ ಪೂರೈಸಿದ ಆಸ್ಟ್ರೇಲಿಯಾ:

ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟ್ ಮಾಡುತ್ತಿರುವ ಆಸ್ಟ್ರೇಲಿಯಾ ತಂಡವು ಭೋಜನಾ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 104 ರನ್ ಕಲೆಹಾಕಿದೆ. ಟೀಮ್ ಇಂಡಿಯಾ ಪರ ಜಸ್​ಪ್ರೀತ್ ಬುಮ್ರಾ 2 ವಿಕೆಟ್ ಪಡೆದರೆ, ನಿತೀಶ್ ಕುಮಾರ್ ರೆಡ್ಡಿ ಒಂದು ವಿಕೆಟ್ ಕಬಳಿಸಿದ್ದಾರೆ. ಸದ್ಯ ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ (25) ಹಾಗೂ ಟ್ರಾವಿಸ್ ಹೆಡ್ (20) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.