ಟೆಸ್ಟ್ ಕ್ರೇಝ್… 200 ದಿನಗಳ ಮುಂಚೆಯೇ ಭಾರತ vs ಇಂಗ್ಲೆಂಡ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್
England vs India Test: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2025ರ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇಂಗ್ಲೆಂಡ್ನಲ್ಲಿ ನಡೆಯಲಿರುವ ಈ ಪಂದ್ಯಗಳೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2027ರ ಸರಣಿ ಆರಂಭವಾಗಲಿದೆ. ಹೀಗಾಗಿ ಈ ಸರಣಿಯು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು.
ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಆರಂಭಕ್ಕೆ ಇನ್ನೂ 6 ತಿಂಗಳುಗಳಿವೆ. ಅದಕ್ಕೂ ಮುನ್ನವೇ ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದ 4 ದಿನದಾಟಗಳ ಟಿಕೆಟ್ ಸಂಪೂರ್ಣ ಮಾರಾಟವಾಗಿದೆ. ಈ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ 5 ಟೆಸ್ಟ್ ಪಂದ್ಯಗಳನ್ನಾಡಲಿದೆ. ಇಂಗ್ಲೆಂಡ್ನಲ್ಲಿ ನಡೆಯಲಿರುವ ಈ ಸರಣಿಯ ಕ್ರೇಝ್ ಈಗಲೇ ಶುರುವಾಗಿದ್ದು, ಇದೀಗ 200 ದಿನಕ್ಕೂ ಮುಂಚಿತವಾಗಿ ಪಂದ್ಯಗಳ ಟಿಕೆಟ್ಗಳು ಬಿಕರಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿ ಎಂದರೆ ಬಿಕರಿಯಾಗಿರುವುದು ಎರಡನೇ ಟೆಸ್ಟ್ ಪಂದ್ಯದ ಟಿಕೆಟ್ಗಳು ಎಂಬುದು ವಿಶೇಷ. ಅಂದರೆ ಬರ್ಮಿಂಗ್ಹ್ಯಾಮ್ನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ಜುಲೈ 2 ರಿಂದ ಆರಂಭವಾಗಲಿರುವ ಪಂದ್ಯದ ಟಿಕೆಟ್ಗಳು ಆರು ತಿಂಗಳಿಗೂ ಮುಂಚಿತವಾಗಿ ಮಾರಾಟವಾಗುತ್ತಿದೆ. ಹೀಗಾಗಿ ಸರಣಿ ಆರಂಭಕ್ಕೂ ಮುನ್ನವೇ ಎಲ್ಲಾ ಪಂದ್ಯಗಳ ಟಿಕೆಟ್ ಬಿಕರಿಯಾಗುವ ನಿರೀಕ್ಷೆಯಲ್ಲಿದ್ದಾರೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್.
ಇನ್ನು ಈ ಸರಣಿಯೊಂದಿಗೆ 2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಶುರುವಾಗಲಿದೆ. ಏಕೆಂದರೆ ಜೂನ್ 11 ರಂದು 2025ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಜೂನ್ 20 ರಂದು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.
ಈ ಟೆಸ್ಟ್ ಸರಣಿಯ ಮೊದಲ ಪಂದ್ಯವು ಲೀಡ್ಸ್ನಲ್ಲಿ ನಡೆದರೆ, ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಬರ್ಮಿಂಗ್ಹ್ಯಾಮ್ ಆತಿಥ್ಯವಹಿಸಲಿದೆ. ಇನ್ನು ಮೂರನೇ ಟೆಸ್ಟ್ ಪಂದ್ಯವು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಹಾಗೆಯೇ ನಾಲ್ಕನೇ ಪಂದ್ಯವು ಮ್ಯಾಚೆಂಸ್ಟರ್ನಲ್ಲಿ ನಡೆಯಲಿದ್ದು, ಐದನೇ ಪಂದ್ಯವು ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಜರುಗಲಿದೆ.
ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
- ಮೊದಲ ಟೆಸ್ಟ್: 20-24 ಜೂನ್, 2025 – ಹೆಡ್ಲಿಂಗ್ಲಿ, ಲೀಡ್ಸ್
- ಎರಡನೇ ಟೆಸ್ಟ್: 2-6 ಜುಲೈ, 2025 – ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್
- ಮೂರನೇ ಟೆಸ್ಟ್: 10-14 ಜುಲೈ, 2025 – ಲಾರ್ಡ್ಸ್, ಲಂಡನ್
- ನಾಲ್ಕನೇ ಟೆಸ್ಟ್: 23-27 ಜುಲೈ, 2025 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
- ಐದನೇ ಟೆಸ್ಟ್: 31 ಜುಲೈ-4 ಆಗಸ್ಟ್, 2025 – ಓವಲ್, ಲಂಡನ್
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಯಾವಾಗ?
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025ರ ಫೈನಲ್ ಪಂದ್ಯವು ಜೂನ್ 11 ರಿಂದ 15 ರವರಗೆ ನಡೆಯಲಿದೆ. ಈ ಪಂದ್ಯಕ್ಕೆ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನ ಆತಿಥ್ಯವಹಿಸಲಿದ್ದು, ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಇದನ್ನೂ ಓದಿ: RCB ಟಾರ್ಗೆಟ್ ಲಿಸ್ಟ್ ಔಟ್: ಕನ್ನಡಿಗನನ್ನು ಕಡೆಗಣಿಸಿರುವುದು ಬಹಿರಂಗ..!
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಸೌತ್ ಆಫ್ರಿಕಾ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಈ ಮೂರು ತಂಡಗಳಲ್ಲಿ ಯಾರು ಫೈನಲ್ನಲ್ಲಿ ಮುಖಾಮುಖಿಯಾಗಲಿದೆ ಎಂಬ ಕುತೂಹಲ ಮೂಡಿದೆ.