ಐಸಿಸಿ ಟೆಸ್ಟ್ ಬ್ಯಾಟರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ದಿಗ್ಗಜರನ್ನೇ ಹಿಂದಿಕ್ಕಿ ಇಂಗ್ಲೆಂಡ್ ತಂಡದ ಯುವ ದಾಂಡಿಗ ಹ್ಯಾರಿ ಬ್ರೂಕ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಅದು ಕೂಡ ಕೇವಲ 27 ತಿಂಗಳಲ್ಲಿ ಎಂಬುದು ವಿಶೇಷ.
ಅಂದರೆ 2022 ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಹ್ಯಾರಿ ಬ್ರೂಕ್ ಕೇವಲ 23 ಪಂದ್ಯಗಳ ಮೂಲಕ 2280 ರನ್ ಗಳಿಸಿದ್ದಾರೆ. ಈ ವೇಳೆ 8 ಶತಕ ಹಾಗೂ 10 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಭರ್ಜರಿ ಪ್ರದರ್ಶನದೊಂದಿಗೆ 898 ಅಂಕಗಳನ್ನು ಕಲೆಹಾಕಿರುವ ಬ್ರೂಕ್ ಟೆಸ್ಟ್ ಕ್ರಿಕೆಟ್ನ ನಂಬರ್ 1 ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಇಂಗ್ಲೆಂಡ್ನ ಜೋ ರೂಟ್ ದ್ವಿತೀಯ ಸ್ಥಾನದಲ್ಲಿದ್ದು, ಒಟ್ಟು 897 ಅಂಕಗಳನ್ನು ಪಡೆದಿದ್ದಾರೆ. ಹಾಗೆಯೇ 812 ಅಂಕಗಳನ್ನು ಹೊಂದಿರುವ ನ್ಯೂಝಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನ ಅಲಂಕರಿಸಿದ್ದಾರೆ.
4ನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ. ಒಟ್ಟು 811 ಅಂಕಗಳನ್ನು ಹೊಂದಿರುವ ಜೈಸ್ವಾಲ್, ಟಾಪ್-5 ನಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಬ್ಯಾಟ್ಸ್ಮನ್ ಎಂಬುದು ವಿಶೇಷ.
ಇನ್ನು ಅಡಿಲೇಡ್ ಟೆಸ್ಟ್ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್ ಈ ಬಾರಿ 6 ಸ್ಥಾನ ಮೇಲೇರಿದ್ದಾರೆ. ಅದರಂತೆ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ 781 ಅಂಕಗಳೊಂದಿಗೆ 5ನೇ ಸ್ಥಾನ ಅಲಂಕರಿಸಿದ್ದಾರೆ.
ಆರನೇ ಸ್ಥಾನದಲ್ಲಿ ಶ್ರೀಲಂಕಾದ ಕಮಿಂದು ಮೆಂಡಿಸ್ (759) ಇದ್ದರೆ, ಏಳನೇ ಸ್ಥಾನದಲ್ಲಿ ಸೌತ್ ಆಫ್ರಿಕಾದ ಟೆಂಬಾ ಬವುಮಾ (753) ಕಾಣಿಸಿಕೊಂಡಿದ್ದಾರೆ. ಇನ್ನು ನ್ಯೂಝಿಲೆಂಡ್ನ ಡೇರಿಲ್ ಮಿಚೆಲ್ (729) ಎಂಟನೇ ಸ್ಥಾನದಲ್ಲಿದ್ದಾರೆ.
ಒಂಬತ್ತನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕಾಣಿಸಿಕೊಂಡಿದ್ದಾರೆ. ಒಟ್ಟು 724 ಅಂಕಗಳನ್ನು ಹೊಂದಿರುವ ಪಂತ್ ಟಾಪ್-10 ನಲ್ಲಿ ಕಾಣಿಸಿಕೊಂಡ ಎರಡನೇ ಭಾರತೀಯ ಆಟಗಾರ. ಇನ್ನು ಹತ್ತನೇ ಸ್ಥಾನ ಅಲಂಕರಿಸುವಲ್ಲಿ ಪಾಕಿಸ್ತಾನದ ಸೌದ್ ಶಕೀಲ್ (724) ಯಶಸ್ವಿಯಾಗಿದ್ದಾರೆ.
Published On - 2:41 pm, Wed, 11 December 24