Mohd Azharuddin: ಭ್ರಷ್ಟಾಚಾರ ಕೊನೆಗೊಳಿಸಲು HCA ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸುವೆ: ಅಝರ್
Mohd Azharuddin: ಅಸೋಸಿಯೇಷನ್‌ನ ನಿಯಮಗಳಿಗೆ ವಿರುದ್ಧವಾಗಿದ್ದ 57 ಕ್ರಿಕೆಟ್ ಕ್ಲಬ್‌ಗಳ ಮೇಲೆ ಸುಪ್ರೀಂ ಕೋರ್ಟ್ನಿಂದ ನೇಮಕಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಲಾವು ನಾಗೇಶ್ವರ ರಾವ್ ಅವರು ಹೇರಿರುವ ನಿಷೇಧವನ್ನು ಅಝರುದ್ದೀನ್ ಸ್ವಾಗತಿಸಿದ್ದಾರೆ.
ಭ್ರಷ್ಟಾಚಾರವನ್ನು ಕೊನೆಗೊಳಿಸಲು ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಹೆಚ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ಮರು ಸ್ಪರ್ಧಿಸುವುದಾಗಿ ಟೀಮ್ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಝರುದ್ದೀನ್ (Mohd Azharuddin) ಘೋಷಿಸಿದ್ದಾರೆ. ಹಿತಾಸಕ್ತಿ ಸಂಘರ್ಷದ ಕಾರಣ 57 ಕ್ಲಬ್‌ಗಳಿಗೆ ಹೆಚ್‌ಸಿಎ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅಥವಾ ಮತ ಚಲಾಯಿಸದಂತೆ ನಿರ್ಬಂಧ ವಿಧಿಸಿದ ಒಂದು ದಿನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಝರುದ್ದೀನ್, ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದಾರೆ.
ಸೆ.15ರಂದು ನಡೆಯಲಿರುವ ಹೆಚ್‌ಸಿಎ ಅಧ್ಯಕ್ಷೀಯ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ. 14 ವರ್ಷಗಳ ವಿವಾದವನ್ನು ಕೊನೆಗೊಳಿಸಲು ಸಂತೋಷವಾಗಿದೆ. ಇಷ್ಟು ವರ್ಷ ಸಂಘ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಆದರೆ ಈಗ ಹಾಗಾಗುವುದಿಲ್ಲ. ನಾನು ಯಾವುದೇ ಕ್ಲಬ್‌ನ ಮಾಲೀಕರಲ್ಲ. ಮಾಜಿ ಅಂತಾರಾಷ್ಟ್ರೀಯ ಆಟಗಾರನಾದ ನನಗೆ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇದೆ. ಸಂಘದಲ್ಲಿನ ಆಟ ಮತ್ತು ಸೌಕರ್ಯಗಳನ್ನು ಸುಧಾರಿಸುವುದು ಈಗ ದೊಡ್ಡ ಸವಾಲಾಗಿದೆ. ಸ್ವಾವಲಂಬನೆಯನ್ನೂ ಅರ್ಥಪೂರ್ಣವಾಗಿ ಸಾಧಿಸಬೇಕು ಎಂದು ಅಝರುದ್ದೀನ್ ಹೇಳಿದರು.
ಅಷ್ಟೇ ಅಲ್ಲದೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯು ಕೇವಲ ಒಂದು ಮೈದಾನವನ್ನು ಹೊಂದಿದೆ. ಇತರ ಸಂಘಗಳಂತೆ ಹೆಚ್ಚಿನ ಮೈದಾನಗಳನ್ನು ಹೊಂದಿರಬೇಕು. ನನ್ನ ಅಧಿಕಾರಾವಧಿಯಲ್ಲಿ 2 ವರ್ಷ ಕಾನೂನು ಹೋರಾಟ ನಡೆಸಿದೆ. ಉಳಿದ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದಾಗಿ ಇದೇ ವೇಳೆ ಅಝರ್ ತಿಳಿಸಿದರು.
ಅಸೋಸಿಯೇಷನ್‌ನ ನಿಯಮಗಳಿಗೆ ವಿರುದ್ಧವಾಗಿದ್ದ 57 ಕ್ರಿಕೆಟ್ ಕ್ಲಬ್‌ಗಳ ಮೇಲೆ ಸುಪ್ರೀಂ ಕೋರ್ಟ್ನಿಂದ ನೇಮಕಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಲಾವು ನಾಗೇಶ್ವರ ರಾವ್ ಅವರು ಹೇರಿರುವ ನಿಷೇಧವನ್ನು ಅಝರುದ್ದೀನ್ ಸ್ವಾಗತಿಸಿದ್ದಾರೆ.
ಲಾವು ನಾಗೇಶ್ವರ ರಾವ್ ನೇತೃತ್ವದ ಸಮಿತಿ ಹೊರಡಿಸಿರುವ ತೀರ್ಪುಗಳ ಪ್ರಕಾರ, ಮೂರು ವರ್ಷಗಳ ಅವಧಿಗೆ ಈ ಕ್ಲಬ್ಗಳು ಸಂಘದ ಯಾವುದೇ ಕಚೇರಿಯನ್ನು ಹೊಂದಿರಬಾರದು. ಅಲ್ಲದೆ ಆಯಾ ಕ್ಲಬ್‌ಗಳಿಗೆ ಮತದಾನದ ಹಕ್ಕು ಇರುವುದಿಲ್ಲ. ಇದರ ಹೊರತಾಗಿಯೂ ಈ ಕ್ಲಬ್‌ಗಳ ತಂಡಗಳಿಗೆ ಅಸೋಸಿಯೇಷನ್ ಲೀಗ್‌ಗಳು ಮತ್ತು ಪಂದ್ಯಾವಳಿಗಳಲ್ಲಿ ಆಡಲು ಅವಕಾಶ ನೀಡಲಾಗುತ್ತದೆ.
ಈ ನಿಷೇಧದಿಂದಾಗಿ ಮಾಜಿ ಕ್ರಿಕೆಟಿಗರಾದ ಅರ್ಷದ್ ಅಯೂಬ್, ವಂಕ ಪ್ರತಾಪ್, ಮಾಜಿ ಕಾರ್ಯದರ್ಶಿ ಆರ್. ವಿಜಯಾನಂದ್, ಮಾಜಿ ಉಪಾಧ್ಯಕ್ಷ ಕೆ.ಜಾನ್ ಮನೋಜ್, ಟಿ. ಶೇಷನಾರಾಯಣ, ಪಿ. ಯಾದಗಿರಿ, ಸುದರ್ಶನರಾಜು ಅವರಂತಹ ಹಲವರು ಸಂಘದ ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಂಡಿದ್ದಾರೆ.
ಇದನ್ನೂ ಓದಿ: Ishan Kishan: ಧೋನಿಯ ವಿಶೇಷ ದಾಖಲೆ ಸರಿಗಟ್ಟಿದ ಇಶಾನ್ ಕಿಶನ್
ಅಝರುದ್ದೀನ್ ಅವರನ್ನು 2019 ರಲ್ಲಿ ಹೆಚ್‌ಸಿಎ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ ಈ ವರ್ಷದ ಆರಂಭದಲ್ಲಿ ಲಾವು ನಾಗೇಶ್ವರ ರಾವ್ ಅವರ ನೇಮಕಾತಿಯೊಂದಿಗೆ ಅಝರ್ ಅವರ ಅಧಿಕಾರಾವಧಿ ಕೊನೆಗೊಂಡಿತ್ತು. ಇದೀಗ ಮುಂಬರುವ ಹೈದರಾಬಾದ್ ಕ್ರಿಕೆಟ್ ಅಸೋಷಿಯೇಷನ್ನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಹೆಚ್ಸಿಎನಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸುವುದಾಗಿ ಅಝರ್ ಭರವಸೆ ನೀಡಿದ್ದಾರೆ.