ಟೀಮ್ ಇಂಡಿಯಾದಲ್ಲಿ ಬಲಗೈ ಬಂಟರದ್ದೇ ಕಾರುಬಾರು..!
Team India: 2011 ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಒಟ್ಟು ಮೂವರು ಎಡಗೈ ದಾಂಡಿಗರಿದ್ದರು. ಅಂದು ಸೆಹ್ವಾಗ್ ಹಾಗೂ ಸಚಿನ್ ಆರಂಭಿಕರಾಗಿ ಕಣಕ್ಕಿಳಿದರೆ, 3ನೇ ಕ್ರಮಾಂಕದಲ್ಲಿ ಎಡಗೈ ದಾಂಡಿಗನಾಗಿ ಗೌತಮ್ ಗಂಭೀರ್ ಬ್ಯಾಟ್ ಬೀಸಿದ್ದರು.
ಏಷ್ಯಾಕಪ್ಗೆ ಆಯ್ಕೆ ಮಾಡಲಾಗಿರುವ ಟೀಮ್ ಇಂಡಿಯಾದಲ್ಲಿ ಬಲಗೈ ದಾಂಡಿಗರೇ ಕಾಣಿಸಿಕೊಂಡಿದ್ದಾರೆ. ಇತ್ತ ಎಡಗೈ ದಾಂಡಿಗರ ಕೊರತೆಯು ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಏಕೆಂದರೆ ಟೀಮ್ ಇಂಡಿಯಾದ ಆರಂಭಿಕರಿಂದ 6ನೇ ಕ್ರಮಾಂಕದವರೆಗೆ ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ಗಳೇ ಕಾಣಿಸಿಕೊಳ್ಳಲಿದ್ದಾರೆ.
ಇಲ್ಲಿ ಆರಂಭಿಕರಾಗಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಕಣಕ್ಕಿಳಿಯುವುದು ಬಹುತೇಕ ಖಚಿತ. ಇನ್ನು 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಅಂದರೆ ಅಗ್ರ ಮೂರು ಕ್ರಮಾಂಕದಲ್ಲೂ ಬಲಗೈ ಬ್ಯಾಟ್ಸ್ಮನ್ಗಳು ಕಣಕ್ಕಿಳಿಯಲಿದ್ದಾರೆ.
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡುವ ಸಾಧ್ಯತೆ ಹೆಚ್ಚು. 5ನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕೆಎಲ್ ರಾಹುಲ್ ಕಣಕ್ಕಿಳಿಯಬಹುದು. 6ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟ್ ಬೀಸಲಿದ್ದಾರೆ.
ಅಂದರೆ ಟೀಮ್ ಇಂಡಿಯಾ ಪರ ಎಡಗೈ ದಾಂಡಿಗನಾಗಿ ರವೀಂದ್ರ ಜಡೇಜಾ ಅವರು ಕಣಕ್ಕಿಳಿಯಲು 7ನೇ ಕ್ರಮಾಂಕದವರೆಗೆ ಕಾಯಬೇಕಾಗುತ್ತದೆ. ಇತ್ತ ಅಗ್ರ ಕ್ರಮಾಂಕಗಳಲ್ಲಿ ಎಡಗೈ ದಾಂಡಿಗರ ಕೊರತೆಯು ಟೀಮ್ ಇಂಡಿಯಾ ಪಾಲಿಗೆ ಮುಳುವಾಗುವ ಸಾಧ್ಯತೆಯಿದೆ.
ಯಾಕೆ ಎಡಗೈ ದಾಂಡಿಗರು ಬೇಕು?
ಬ್ಯಾಕ್ ಟು ಬ್ಯಾಕ್ ಬಲಗೈ ದಾಂಡಿಗರು ಕಣಕ್ಕಿಳಿಯುವುದರಿಂದ ಎದುರಾಳಿ ತಂಡವು ಫೀಲ್ಡಿಂಗ್ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರುವುದಿಲ್ಲ. ಹಾಗೆಯೇ ಬೌಲರ್ ಕೂಡ ಒಂದೇ ಲೈನ್ ಅ್ಯಂಡ್ ಲೆಂಗ್ತ್ನಲ್ಲಿ ಕರಾರುವಾಕ್ ದಾಳಿ ರೂಪಿಸಲು ಸಾಧ್ಯವಾಗುತ್ತದೆ.
ಇದೇ ರೈಟ್ ಅ್ಯಂಡ್ ಲೆಫ್ಟ್ ಕಾಂಬಿನೇಶನ್ನಲ್ಲಿ ಬ್ಯಾಟರ್ಗಳು ಕಣಕ್ಕಿಳಿದರೆ ಬೌಲರ್ಗಳ ತಂತ್ರಗಳು ಬದಲಾಗಲಿದೆ. ಅದರಲ್ಲೂ ಪದೇ ಪದೇ ಫೀಲ್ಡಿಂಗ್ ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಳಿ ತಂಡದ ನಾಯಕನಿಗೆ ಇರಲಿದೆ. ಇಂತಹ ಸಮಯದಲ್ಲಿ ಬೌಲರ್ಗಳು ಅಥವಾ ನಾಯಕರುಗಳು ಮಾಡುವ ಸಣ್ಣ ತಪ್ಪುಗಳೇ ಬ್ಯಾಟಿಂಗ್ ತಂಡಕ್ಕೆ ವರದಾನವಾಗಬಹುದು. ಹೀಗಾಗಿಯೇ ಹೆಚ್ಚಿನ ತಂಡಗಳು ಪ್ಲೇಯಿಂಗ್ ಇಲೆವೆನ್ನಲ್ಲಿ ಬಲಗೈ-ಎಡಗೈ ಬ್ಯಾಟರ್ಗಳ ಕಾಂಬಿನೇಶನ್ ಅನ್ನು ಬಳಸಿಕೊಳ್ಳುತ್ತಾರೆ.
2011 ರ ಏಕದಿನ ವಿಶ್ವಕಪ್ನಲ್ಲೂ ರೈಟ್-ಲೆಫ್ಟ್ ಕಾಂಬೊ:
2011 ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಒಟ್ಟು ಮೂವರು ಎಡಗೈ ದಾಂಡಿಗರಿದ್ದರು. ಅಂದು ಸೆಹ್ವಾಗ್ ಹಾಗೂ ಸಚಿನ್ ಆರಂಭಿಕರಾಗಿ ಕಣಕ್ಕಿಳಿದರೆ, 3ನೇ ಕ್ರಮಾಂಕದಲ್ಲಿ ಎಡಗೈ ದಾಂಡಿಗನಾಗಿ ಗೌತಮ್ ಗಂಭೀರ್ ಬ್ಯಾಟ್ ಬೀಸಿದ್ದರು.
ಇನ್ನು ಫೈನಲ್ ಪಂದ್ಯದಲ್ಲಿ ಸಚಿನ್, ಸೆಹ್ವಾಗ್ ಹಾಗೂ ವಿರಾಟ್ ಕೊಹ್ಲಿ ಔಟಾದಾಗ ಯುವರಾಜ್ ಸಿಂಗ್ ಬದಲು ಧೋನಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಇದಕ್ಕೆ ಮುಖ್ಯ ಕಾರಣ ಕ್ರೀಸ್ನಲ್ಲಿ ಎಡಗೈ ದಾಂಡಿಗನಾಗಿ ಗೌತಮ್ ಗಂಭೀರ್ ಇದ್ದದ್ದು. ಅಂದರೆ ಅಂದು ಯುವರಾಜ್ ಸಿಂಗ್ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರೆ ಇಬ್ಬರು ಎಡಗೈ ದಾಂಡಿಗರು ಕ್ರೀಸ್ನಲ್ಲಿರುತ್ತಿದ್ದರು. ಇದನ್ನು ತಪ್ಪಿಸಲೆಂದೇ ಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು.
ಅಷ್ಟೇ ಅಲ್ಲದೆ ಗಂಭೀರ್ ಔಟಾಗುತ್ತಿದ್ದಂತೆ ಯುವರಾಜ್ ಸಿಂಗ್ ಕಣಕ್ಕಿಳಿದರು. ಆ ಮೂಲಕ ಎಡಗೈ-ಬಲಗೈ ಕಾಂಬಿನೇಶನ್ನ್ನು ಮುಂದುವರೆಸಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿತ್ತು. ಅಲ್ಲದೆ ಅಂದು ಸುರೇಶ್ ರೈನಾ ಕೂಡ ಎಡಗೈ ದಾಂಡಿಗನಾಗಿ ಕೆಳ ಕ್ರಮಾಂಕದಲ್ಲಿದ್ದರು. ಅಂದರೆ 2011 ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಮೂವರು ಎಡಗೈ ದಾಂಡಿಗರು ಕಾಣಿಸಿಕೊಂಡಿದ್ದರು.
ನಾಲ್ವರು ಎಡಗೈ ದಾಂಡಿಗರು ಆಯ್ಕೆ:
ಏಷ್ಯಾಕಪ್ಗಾಗಿ ಆಯ್ಕೆ ಮಾಡಲಾದ 17 ಸದಸ್ಯರಲ್ಲಿ ನಾಲ್ವರು ಎಡಗೈ ದಾಂಡಿಗರು ಕಾಣಿಸಿಕೊಂಡಿದ್ದಾರೆ. ಆದರೆ ಇವರು ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬುದೇ ಪ್ರಶ್ನೆ. ಏಕೆಂದರೆ ಎಡಗೈ ದಾಂಡಿಗನಾಗಿ ರವೀಂದ್ರ ಜಡೇಜಾಗೆ 7ನೇ ಸ್ಥಾನ ಫಿಕ್ಸ್ ಎನ್ನಬಹುದು.
ಇನ್ನು ಚೊಚ್ಚಲ ಅವಕಾಶ ಪಡೆದಿರುವ ಎಡಗೈ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಆಡಿಸಿದ್ರೆ ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಡಬೇಕಾಗುತ್ತದೆ. ಹಾಗೆಯೇ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಅವರಿಗೆ ಅವಕಾಶ ನೀಡಿದರೆ ಕೆಎಲ್ ರಾಹುಲ್ ಹೊರಗುಳಿಯಬೇಕಾಗುತ್ತದೆ.
ಇವರೆಲ್ಲರ ನಡುವೆ ಅಕ್ಷರ್ ಪಟೇಲ್ ಅವರನ್ನು ಆಲ್ರೌಂಡರ್ ಆಗಿ ಕಣಕ್ಕಿಳಿಸಲು ಬಯಸಿದರೆ ತಂಡದಲ್ಲಿರುವ ಏಕೈಕ ಪೂರ್ಣ ಪ್ರಮಾಣದ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡಬೇಕಾಗುತ್ತದೆ. ಇದೇ ಕಾರಣದಿಂದಾಗಿ ಇದೀಗ ಬ್ಯಾಟಿಂಗ್ ಲೈನಪ್ನಲ್ಲಿ ರೈಟ್-ಲೆಫ್ಟ್ ಕಾಂಬಿನೇಷನ್ ಬಳಸುವುದು ಹೇಗೆ ಎಂಬ ಚಿಂತೆಯೊಂದು ಟೀಮ್ ಇಂಡಿಯಾಗೆ ಶುರುವಾಗಿದೆ. ಈ ಸಮಸ್ಯೆಗೆ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ಹೇಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.
ಇದನ್ನೂ ಓದಿ: RCB ಯಿಂದ ಇಬ್ಬರು, CSK ಯಿಂದ ಒಬ್ಬರು: ತಂಡದಲ್ಲಿ ಮುಂಬೈ ಅವರದ್ದೇ ದರ್ಬಾರು..!
ಏಷ್ಯಾಕಪ್ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).