T20 World Cup 2024: ಈ ಬಾರಿ ‘ಡಾಟ್ ಬಾಲ್’ ವಿಶ್ವಕಪ್..!
T20 World Cup 2024: ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತೀ ಹೆಚ್ಚು ಡಾಟ್ ಬಾಲ್ಗಳ ದಾಖಲೆ ಸೌತ್ ಆಫ್ರಿಕಾ ಮತ್ತು ಶ್ರೀಲಂಕಾ ನಡುವಣ ಪಂದ್ಯದ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ನೆದರ್ಲ್ಯಾಂಡ್ಸ್ ಮತ್ತು ಝಿಂಬಾಬ್ವೆ ತಂಡದ ಹೆಸರಿನಲ್ಲಿತ್ತು. 2022 ರ ಟಿ20 ವಿಶ್ವಕಪ್ನಲ್ಲಿ ಝಿಂಬಾಬ್ವೆ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಜೊತೆಯಾಗಿ ಒಟ್ಟು 121 ಡಾಟ್ ಬಾಲ್ ಆಡಿದ್ದರು. ಈ ಬಾರಿಯ ವಿಶ್ವಕಪ್ನ ಆರಂಭದಲ್ಲೇ ಈ ದಾಖಲೆಯನ್ನು ಅಳಿಸಿ ಹಾಕಲಾಗಿದೆ.
T20 World Cup 2024: ಟಿ20 ಕ್ರಿಕೆಟ್ ಅಂದ್ರೆನೇ ಅಲ್ಲಿ ಸಿಕ್ಸ್-ಫೋರ್ಗಳ ಸುರಿಮಳೆಯಾಗುತ್ತಿರುತ್ತವೆ. ಇದಕ್ಕೆ ತಾಜಾ ಸಾಕ್ಷಿ ಈ ಬಾರಿಯ ಐಪಿಎಲ್. ಏಕೆಂದರೆ ಐಪಿಎಲ್ ಸೀಸನ್ 17 ರಲ್ಲಿ ಬರೋಬ್ಬರಿ 1260 ಸಿಕ್ಸ್ಗಳು ಸಿಡಿದಿದ್ದವು. ಆದರೆ ಇದೇ ಸಿಡಿಲಬ್ಬರವನ್ನು ಟಿ20 ವಿಶ್ವಕಪ್ನಲ್ಲಿ ನಿರೀಕ್ಷಿಸುವಂತಿಲ್ಲ. ಏಕೆಂದರೆ ಟಿ20 ವಿಶ್ವಕಪ್ನ ಮೊದಲ 6 ಪಂದ್ಯಗಳಲ್ಲೇ ಎರಡು ಮ್ಯಾಚ್ಗಳು ಡಾಟ್ ಬಾಲ್ಗಳಿಂದಲೇ ಗಮನ ಸೆಳೆದಿವೆ.
ಅಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತೀ ಹೆಚ್ಚು ಡಾಟ್ ಎಸೆದಿರುವ ದಾಖಲೆ ಸೌತ್ ಆಫ್ರಿಕಾ-ಶ್ರೀಲಂಕಾ ತಂಡಗಳ ಪಾಲಾಗಿದೆ. ಈ ಬಾರಿಯ ಟಿ20 ವಿಶ್ವಕಪ್ನ 4ನೇ ಪಂದ್ಯದಲ್ಲಿ ಬರೋಬ್ಬರಿ 127 ಡಾಟ್ ಬಾಲ್ಗಳನ್ನು ಆಡಲಾಗಿದೆ. ನ್ಯೂಯಾರ್ಕ್ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 19.1 ಓವರ್ಗಳಲ್ಲಿ ಕೇವಲ 77 ರನ್ ಗಳಿಸಿ ಆಲೌಟ್ ಆಗಿತ್ತು. ಇನ್ನು 78 ರನ್ಗಳ ಗುರಿ ಬೆನ್ನತ್ತಲು ಸೌತ್ ಆಫ್ರಿಕಾ 16.2 ಓವರ್ಗಳನ್ನು ತೆಗೆದುಕೊಂಡಿದ್ದರು.
ಅಂದರೆ ಉಭಯ ತಂಡಗಳು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡುವ ಮೂಲಕ ಒಟ್ಟು 35.3 ಓವರ್ಗಳಲ್ಲಿ ಬರೋಬ್ಬರಿ 127 ಡಾಟ್ ಬಾಲ್ಗಳನ್ನು ಆಡಿದ್ದರು. ಇದುವೇ ಈಗ ವಿಶ್ವ ದಾಖಲೆಯಾಗಿ ಮಾರ್ಪಟ್ಟಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಬಲಿಷ್ಠ ದಾಂಡಿಗರನ್ನು ಹೊಂದಿರುವ ಸೌತ್ ಆಫ್ರಿಕಾ ತಂಡವೇ ಈ ಡಾಟ್ ಬಾಲ್ ದಾಖಲೆಯಲ್ಲಿ ಪಾಲುದಾರರಾಗಿರುವುದು.
ಹಾಗೆಯೇ ಈ ಬಾರಿಯ ವಿಶ್ವಕಪ್ನಲ್ಲಿ ನಡೆದ ನಮೀಬಿಯಾ ಹಾಗೂ ಒಮಾನ್ ನಡುವಣ ಪಂದ್ಯದಲ್ಲೂ ಡಾಟ್ ಬಾಲ್ಗಳದ್ದೇ ಕಾರು ಬಾರು. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಒಮಾನ್ ತಂಡ 19.4 ಓವರ್ಗಳಲ್ಲಿ 109 ರನ್ ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಲು ನಮೀಬಿಯಾ 20 ಓವರ್ಗಳನ್ನು ತೆಗೆದುಕೊಂಡಿದ್ದರು.
ಅಂದರೆ ಒಟ್ಟು 39.4 ಓವರ್ಗಳ ಈ ಪಂದ್ಯದಲ್ಲಿ ಒಟ್ಟು 123 ಡಾಟ್ ಬಾಲ್ಗಳು ಮೂಡಿಬಂದಿದ್ದವು. ಅಂದರೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಆಡಲಾದ ಎರಡು ಪಂದ್ಯಗಳು ಟಿ20 ವಿಶ್ವಕಪ್ನ ಅತೀ ಹೆಚ್ಚು ಡಾಟ್ ಬಾಲ್ಗಳ ಮ್ಯಾಚ್ಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್ ಆಡಲು ಹೋಗಿ ದಂಧೆಗಿಳಿದ ಪಾಕಿಸ್ತಾನ್ ತಂಡ
ಹೀಗಾಗಿ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಮತ್ತು ಬಾರ್ಬಡೋಸ್ ಮೈದಾನದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ಪಂದ್ಯಗಳಲ್ಲಿ ಮತ್ತಷ್ಟು ಡಾಟ್ ಬಾಲ್ಗಳನ್ನು ನಿರೀಕ್ಷಿಸಬಹುದು. ಅಲ್ಲದೆ ಈ ಬಾರಿ ಬರೀ ಹೊಡಿಬಡಿ ಆಟವನ್ನು ಸಹ ನಿರೀಕ್ಷಿಸುವಂತಿಲ್ಲ. ಬದಲಾಗಿ ಡಾಟ್ ಬಾಲ್ಗಳ ಮೂಲಕ ಬೌಲರ್ಗಳು ಕೂಡ ಇಡೀ ಪಂದ್ಯದ ಚಿತ್ರಣವನ್ನು ಬದಲಿಸುವುದನ್ನು ಎದುರು ನೋಡಬಹುದು.