ಎಂಎಸ್ ಧೋನಿ (MS Dhoni)…. ವಿಶ್ವ ಕ್ರಿಕೆಟ್ನಲ್ಲಿ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನ ಚಾಣಕ್ಯ ನಾಯಕತ್ವದ ನಿರ್ಧಾರಗಳಿಂದ ಟೀಂ ಇಂಡಿಯಾವನ್ನು (Team India) ವಿಶ್ವಮಟ್ಟದಲ್ಲಿ ಉತ್ತುಂಗಕ್ಕೆ ಏರಿಸಿದ ಕೀರ್ತಿ ಧೋನಿಗೆ ಸಲ್ಲುತ್ತದೆ. ತನ್ನ ನಾಯಕತ್ವದಲ್ಲಿ ಪ್ರಮುಖ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ಟೀಂ ಇಂಡಿಯಾ ನಾಯಕ ಧೋನಿ. ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ ಧೋನಿ, ಐಪಿಎಲ್ನಲ್ಲಿ (IPL) ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಕ್ರಿಕೆಟ್‌ನಿಂದ ಹಂತ ಹಂತವಾಗಿ ದೂರವಾಗುತ್ತಿರುವ ಧೋನಿ, ತಮ್ಮ ಭವಿಷ್ಯದ ಜೀವನದತ್ತ ಗಮನ ಹರಿಸಲಾರಂಭಿಸಿದ್ದಾರೆ. ಧೋನಿಗೆ ಕ್ರಿಕೆಟ್ ಹೊರತುಪಡಿಸಿ ಕೃಷಿ ಎಂದರೆ ಬಲು ಅಚ್ಚುಮೆಚ್ಚು. ಹೀಗಾಗಿಯೇ ಧೋನಿ ತಮ್ಮ ಫಾರ್ಮ್ ಹೌಸ್‌ನಲ್ಲಿ ಭಿನ್ನ ವಿಭಿನ್ನ ಬೆಳೆಗಳನ್ನು ಬೆಳೆದು ವಿದೇಶಗಳಿಗೆ ರಫ್ತು ಮಾಡುತ್ತಾರೆ. ಸದ್ಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ ತಮ್ಮ ಫಾರ್ಮ್ ಹೌಸ್‌ನಲ್ಲಿ ಟ್ರ್ಯಾಕ್ಟರ್ ಏರಿ ಹೊಲ ಉಳುಮೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಾಸ್ತವವಾಗಿ ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿಲ್ಲ. ಆಗೊಮ್ಮೆ ಈಗೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಧೋನಿ ಪ್ರತಿ ಬಾರಿಯೂ ಸಖತ್ ಸದ್ದು ಮಾಡುತ್ತಾರೆ. ಇದೀಗ 2 ವರ್ಷಗಳ ನಂತರ ಧೋನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದನ್ನು ಹಂಚಿಕೊಂಡಿದ್ದು, ಧೋನಿಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ.
ಧೋನಿ, ಕೊಹ್ಲಿ, ರೋಹಿತ್ ಪುತ್ರಿಯರ ಬಗ್ಗೆ ಅಶ್ಲೀಲವಾಗಿ ಕಾಮೆಂಟ್; FIR ದಾಖಲಿಸಿದ ದೆಹಲಿ ಪೊಲೀಸ್
ಧೋನಿ ಸುಮಾರು 2 ವರ್ಷಗಳ ನಂತರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಧೋನಿ ತಮ್ಮ ಫಾರ್ಮ್ ಹೌಸ್‌ನಲ್ಲಿ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೂ ಮೊದಲು ಧೋನಿ ಜನವರಿ 8, 2021 ರಂದು ಕೊನೆಯ ಬಾರಿಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು.
ಧೋನಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಧೋನಿ ನಾಯಕತ್ವದಲ್ಲಿ ಸಿಎಸ್ಕೆ ತಂಡ ಒಟ್ಟು 4 ಬಾರಿ ಚಾಂಪಿಯನ್ ಆಗಿದೆ. ಧೋನಿ ಈ ವರ್ಷವೂ ಚೆನ್ನೈ ಪರ ಆಡಲಿದ್ದಾರೆ. 2022 ರ ಐಪಿಎಲ್ ಆರಂಭಕ್ಕೂ ಮುನ್ನ ಧೋನಿ ಚೆನ್ನೈ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಹೀಗಾಗಿ ರವೀಂದ್ರ ಜಡೇಜಾಗೆ ತಂಡದ ನಾಯಕತ್ವವನ್ನು ನೀಡಲಾಗಿತ್ತು. ಆದರೆ ಜಡೇಜಾ ಸೀಸನ್ ಮಧ್ಯದಲ್ಲಿಯೇ ನಾಯಕತ್ವದಿಂದ ಕೆಳಗಿಳಿದಿದ್ದರಿಂದ ಮತ್ತೊಮ್ಮೆ ನಾಯಕತ್ವದ ಜವಾಬ್ದಾರಿಯನ್ನು ಧೋನಿ ವಹಿಸಿಕೊಂಡರು. ಆದರೂ ಸಿಎಸ್ಕೆ ತಂಡ ಕಳೆದ ಬಾರಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ. ಇದೀಗ ಹೊಸ ಆವೃತ್ತಿಗೆ ಸಜ್ಜಾಗುತ್ತಿರುವ ಧೋನಿಗೆ ಇದು ಕೊನೆಯ ಸೀಸನ್ ಎಂದೇ ಹೇಳಲಾಗುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Thu, 9 February 23