ಪಾಕ್​ ಕ್ರಿಕೆಟರ್​ಗೆ ವಿಶೇಷ ಉಡುಗೂರೆ ಕಳುಹಿಸಿಕೊಟ್ಟ ಧೋನಿ! ಗಿಫ್ಟ್ ಸ್ವೀಕರಿಸಿದ ಬೌಲರ್​ ಸಂತೋಷಕ್ಕೆ ಪಾರವೇ ಇಲ್ಲ

| Updated By: ಪೃಥ್ವಿಶಂಕರ

Updated on: Jan 07, 2022 | 9:30 PM

MS Dhoni: ಯುವ ವೇಗದ ಬೌಲರ್ ಪಾಕಿಸ್ತಾನದ ಹ್ಯಾರಿಸ್ ರೌಫ್​ಗೆ ಧೋನಿ ತಮ್ಮ ಚೆನ್ನೈ ಸೂಪರ್ ಕಿಂಗ್ಸ್‌ನ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ರೌಫ್ ತಮ್ಮ ಟ್ವಿಟರ್ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದ್ದಾರೆ.

ಪಾಕ್​ ಕ್ರಿಕೆಟರ್​ಗೆ ವಿಶೇಷ ಉಡುಗೂರೆ ಕಳುಹಿಸಿಕೊಟ್ಟ ಧೋನಿ! ಗಿಫ್ಟ್ ಸ್ವೀಕರಿಸಿದ ಬೌಲರ್​ ಸಂತೋಷಕ್ಕೆ ಪಾರವೇ ಇಲ್ಲ
ಹ್ಯಾರಿಸ್ ರೌಫ್
Follow us on

ಭಾರತಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರು ಹೋದಲ್ಲೆಲ್ಲಾ ಅವರಿಗೆ ಅಭಿಮಾನಿಗಳ ಸಂಖ್ಯೆಗೇನೂ ಕೊರತೆಯಿಲ್ಲ. ಎದುರಾಳಿ ತಂಡಗಳು ಕೂಡ ಹೆಚ್ಚು ಗೌರವ ಕೊಡುವ ಕ್ರಿಕೆಟಿಗರಲ್ಲಿ ಧೋನಿ ಕೂಡ ಒಬ್ಬರು. ಅಷ್ಟೇ ಅಲ್ಲದೆ ಇತರ ತಂಡಗಳ ಆಟಗಾರರು ಕೂಡ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿರುತ್ತಾರೆ. ಹೀಗಿರುವಾಗ ಧೋನಿಯಿಂದ ಉಡುಗೊರೆ ಸಿಕ್ಕರೆ ಆ ಆಟಗಾರನ ಸಂತಸಕ್ಕೆ ಪಾರವೇ ಇರುವುದಿಲ್ಲ. ಈಗ ಅಂತಹದ್ದೆ ಒಂದು ಘಟನೆ ನಡೆದಿದೆ. ಯುವ ವೇಗದ ಬೌಲರ್ ಪಾಕಿಸ್ತಾನದ ಹ್ಯಾರಿಸ್ ರೌಫ್​ಗೆ ಧೋನಿ ತಮ್ಮ ಚೆನ್ನೈ ಸೂಪರ್ ಕಿಂಗ್ಸ್‌ನ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ರೌಫ್ ತಮ್ಮ ಟ್ವಿಟರ್ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದ್ದಾರೆ.

ರೌಫ್ ಸಾರ್ವಜನಿಕವಾಗಿ ಟ್ವಿಟರ್‌ನಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದು ಧೋನಿ ನೀಡಿದ ಜೆರ್ಸಿಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್‌ನ ಏಳನೇ ಸಂಖ್ಯೆಯ ಜೆರ್ಸಿಯನ್ನು ರೌಫ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಧೋನಿ ತಮ್ಮ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದಾರೆ.

ಧೋನಿ ಬಗ್ಗೆ ಹೀಗೆ ಹೇಳಿದ್ದಾರೆ
ಈ ಜೆರ್ಸಿಯ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ರೌಫ್ ಧೋನಿಗೆ ಧನ್ಯವಾದ ಹೇಳಿದ್ದಾರೆ. ಲೆಜೆಂಡ್ ಮತ್ತು ಕ್ಯಾಪ್ಟನ್ ಕೂಲ್ ಧೋನಿ ಈ ಸುಂದರವಾದ ಉಡುಗೊರೆಯನ್ನು ನನಗೆ ನೀಡಿದ್ದಾರೆ. ಏಳನೇ ಸಂಖ್ಯೆ ಇನ್ನೂ ತನ್ನ ಅತ್ಯುತ್ತಮ ನಡವಳಿಕೆಯಿಂದ ಜನರ ಹೃದಯವನ್ನು ಗೆಲ್ಲುತ್ತಿದೆ ಎಂದು ಬರೆದುಕೊಂಡಿದ್ದಾರೆ.

ರೌಫ್ ಪ್ರಸ್ತುತ ಬಿಬಿಎಲ್‌ನಲ್ಲಿ ಆಡುತ್ತಿದ್ದಾರೆ
ರೌಫ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡುತ್ತಿದ್ದಾರೆ. ರೌಫ್ ಈ ಋತುವಿನಲ್ಲಿ ಇದುವರೆಗೆ ಈ ತಂಡದ ಪರ ಎರಡು ಪಂದ್ಯಗಳನ್ನು ಆಡಿದ್ದು ಮೂರು ವಿಕೆಟ್ ಪಡೆದಿದ್ದಾರೆ. ಜನವರಿ 2, 2022 ರಂದು ಪರ್ತ್ ಸ್ಕಾರ್ಚರ್ಸ್ ವಿರುದ್ಧದ ಪಂದ್ಯದಲ್ಲಿ ರೌಫ್ 40 ರನ್ಗಳಿಗೆ ಎರಡು ವಿಕೆಟ್ಗಳನ್ನು ಪಡೆದರು. ಇದರ ನಂತರ, ಜನವರಿ 3 ರಂದು ಅವರು ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ 26 ರನ್ಗಳಿಗೆ 1 ವಿಕೆಟ್ ಪಡೆದರು.

ಟೆಸ್ಟ್ ಪದಾರ್ಪಣೆಗಾಗಿ ಕಾಯಲಾಗುತ್ತಿದೆ
ರೌಫ್ ಈಗಷ್ಟೇ ಪಾಕಿಸ್ತಾನ ತಂಡವನ್ನು ಪ್ರವೇಶಿಸಿದ್ದು, ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ಪರ ಆಡಿದ್ದಾರೆ. ಆದರೆ ಇದೀಗ ಅವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ವೇಗದ ಎಸೆತಗಳಿಗೆ ಹೆಸರುವಾಸಿಯಾಗಿರುವ ರೌಫ್ ಪಾಕಿಸ್ತಾನ ಪರ ಇದುವರೆಗೆ 34 ಟಿ20 ಪಂದ್ಯಗಳನ್ನು ಆಡಿದ್ದು, 41 ವಿಕೆಟ್ ಪಡೆದಿದ್ದಾರೆ. 22 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಏಕದಿನದಲ್ಲಿ ಅವರು ಪಾಕಿಸ್ತಾನದ ಪರವಾಗಿ ಎಂಟು ಪಂದ್ಯಗಳನ್ನು ಆಡಿದ್ದಾರೆ ಮತ್ತು 14 ವಿಕೆಟ್ಗಳನ್ನು ಪಡೆದಿದ್ದಾರೆ. ಈ ಸ್ವರೂಪದಲ್ಲಿ 65 ರನ್‌ಗಳಿಗೆ ನಾಲ್ಕು ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.