‘ಡಿವಿಲಿಯರ್ಸ್ ಅವರನ್ನು ಔಟ್ ಮಾಡಿದ್ದಕ್ಕೆ ಧೋನಿ ನನಗೆ ಬೈದಿದ್ದರು’..! ಈಶ್ವರ್ ಪಾಂಡೆ ಶಾಕಿಂಗ್ ಹೇಳಿಕೆ
ಐಪಿಎಲ್ ಪಂದ್ಯದ ವೇಳೆ ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ಎಬಿ ಡಿವಿಲಿಯರ್ಸ್ ಅವರನ್ನು ಔಟ್ ಮಾಡಿದ್ದಕ್ಕಾಗಿ ಸಿಎಸ್‌ಕೆ ನಾಯಕ ಎಂಎಸ್ ಧೋನಿ ನನ್ನನ್ನು ತೀವ್ರವಾಗಿ ನಿಂದಿಸಿದ್ದರು ಎಂಬ ಶಾಕಿಂಗ್ ಹೇಳಿಕೆಯನ್ನು ಪಾಂಡೆ ನೀಡಿದ್ದಾರೆ.
ಇತ್ತೀಚೆಗೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ಬೌಲರ್ ಈಶ್ವರ್ ಪಾಂಡೆ ಈಗ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ವಿದಾಯ ಪ್ರಕಟಿಸಿದ್ದ ಪಾಂಡೆ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಬಗ್ಗೆಯೂ ಆರೋಪ ಹೊರಿಸಿದ್ದರು. ಧೋನಿ ನನಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಲಿಲ್ಲ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದ ಈ ಬೌಲರ್ ಈಗ ಮತ್ತೊಂದು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಸದ್ಯ ಅವರ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದ್ದು, ಇದೊಂದು ವಿಷಯ ಎಲ್ಲಡೆ ಹೊಸ ಸಂಚಲನ ಮೂಡಿಸಿದೆ.
ಐಪಿಎಲ್ ಪಂದ್ಯದ ವೇಳೆ ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ಎಬಿ ಡಿವಿಲಿಯರ್ಸ್ ಅವರನ್ನು ಔಟ್ ಮಾಡಿದ್ದಕ್ಕಾಗಿ ಸಿಎಸ್‌ಕೆ ನಾಯಕ ಎಂಎಸ್ ಧೋನಿ ನನ್ನನ್ನು ತೀವ್ರವಾಗಿ ನಿಂದಿಸಿದ್ದರು ಎಂಬ ಶಾಕಿಂಗ್ ಹೇಳಿಕೆಯನ್ನು ಪಾಂಡೆ ನೀಡಿದ್ದಾರೆ.
ದೈನಿಕ್ ಭಾಸ್ಕರ್ ಜೊತೆಗಿನ ಸಂಭಾಷಣೆಯಲ್ಲಿ ಈ ಹೇಳಿಕೆ ನೀಡಿದ ಈಶ್ವರ್, ನಾನು ಆಗ ಸಿಎಸ್‌ಕೆ ತಂಡದಲ್ಲಿ ಆಡುತ್ತಿದೆ. ಆ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ಎಬಿ ಡಿವಿಲಿಯರ್ಸ್ ಅವರನ್ನು ನಾನು ಯಾರ್ಕರ್ ಎಸೆದು ಔಟ್ ಮಾಡಿದ್ದೆ. ಇದನ್ನು ನೋಡಿದ MS ಧೋನಿ ನನ್ನನ್ನು ತೀವ್ರವಾಗಿ ನಿಂದಿಸಿದರು ಎಂಬ ಮಾಹಿತಿಯನ್ನು ಪಾಂಡೆ ಬಹಿರಂಗಪಡಿಸಿದ್ದಾರೆ.
ಮುಂದುವರೆದು ಮಾತನಾಡಿದ ಪಾಂಡೆ, ಅದು ಐಪಿಎಲ್ 2015 ರ ಆವೃತ್ತಿಯ 37 ನೇ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ ತಂಡ 8 ವಿಕೆಟ್ ಕಳೆದುಕೊಂಡು ಕೇವಲ 148 ರನ್ಗಳನಷ್ಟೇ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಆರ್ಸಿಬಿ ಪರ ಡಿವಿಲಿಯರ್ಸ್ 13 ಎಸೆತಗಳಲ್ಲಿ 21 ರನ್ ಗಳಿಸಿ ಆಡುತ್ತಿದ್ದರು. ಅಷ್ಟರಲ್ಲಾಗಲೇ ಎಬಿಡಿ ಬರೋಬ್ಬರಿ ಐದು ಬೌಂಡರಿಗಳನ್ನು ಬಾರಿಸಿದ್ದರು.
ಆ ಬಳಿಕ ಮಹಿ ಭಾಯ್ ನನಗೆ ಬೌಲಿಂಗ್ ಮಾಡಲು ಚೆಂಡನ್ನು ನೀಡಿದ್ದರು. ಜೊತೆಗೆ ಯಾರ್ಕರ್ ಮಾಡಬೇಡಿ, ಚೆನ್ನಾಗಿ ಬೌಲ್ ಮಾಡಿ ಎಂದು ಧೋನಿಯೇ ಹೇಳಿದ್ದರು. ಹಾಗಾಗಿ ನಾನು ಡಿವಿಲಿಯರ್ಸ್ಗೆ ಮೂರು ಅಥವಾ ನಾಲ್ಕು ಎಸೆತಗಳನ್ನು ಡಾಟ್ ಮಾಡಿಸಿದೆ. ಆದರೆ ಐದನೇ ಎಸೆತದಲ್ಲಿ ಎಬಿಡಿ ಬೌಂಡರಿ ಬಾರಿಸಿದ್ದರು. ಹಾಗಾಗಿ ಕೊನೆಯ ಎಸೆತದಲ್ಲಿ ನಾನು ಯಾರ್ಕರ್ ಹೊಡೆಯಬೇಕು ಎಂದುಕೊಂಡೆ.
ಅಂದುಕೊಂಡಂತೆಯೇ ನಾನು ಯಾರ್ಕರ್ ಬೌಲ್ ಮಾಡಿದೆ, ಆದರೆ ಅದು ಲೋ ಫುಲ್ ಟಾಸ್ ಆಯಿತು. ಡಿವಿಲಿಯರ್ಸ್ ಅದೇ ಎಸೆತದಲ್ಲಿ ಔಟಾದರು. ವಿಕೆಟ್ ಪಡೆದ ನಂತರ ನನ್ನ ಬಳಿಗೆ ಬಂದ ಧೋನಿ ಯಾರ್ಕರ್ ಬೌಲ್ ಮಾಡಬೇಡಿ ಎಂದು ನಾನು ಹೇಳಿದ್ದೇ ತಾನೇ ಎಂದರು. ಜೊತೆಗೆ ನನ್ನ ಬೆನ್ನು ತಟ್ಟುತ್ತಾ ಪರವಾಗಿಲ್ಲ, ಆಗೇ ಸೇ ಧ್ಯಾನ್ ರಖನಾ, ( ಮುಂದೆ ಗಮನವಿಟ್ಟು ಬೌಲಿಂಗ್ ಮಾಡಿ) ಎಂದಿದ್ದರು ಎಂಬುದನ್ನು ಪಾಂಡೆ ಹೇಳಿಕೊಂಡಿದ್ದಾರೆ.
Published On - 5:26 pm, Fri, 16 September 22