MS Dhoni Birthday: ಸವ್ಯಸಾಚಿ ಧೋನಿಗೆ 42ನೇ ಜನ್ಮದಿನ; ಕ್ಯಾಪ್ಟನ್ ಕೂಲ್ ವೃತ್ತಿ ಪಯಣದ ನೆನಪಿನ ಬುತ್ತಿ ಇಲ್ಲಿದೆ
MS Dhoni Birthday: ಟೀಂ ಇಂಡಿಯಾವನ್ನು ಎಲ್ಲಾ ಮಾದರಿಯಲ್ಲೂ ನಂಬರ್ ಒನ್ ಸ್ಥಾನಕ್ಕೇರಿದ ಶಾಂತ ಮೂರ್ತಿ ಧೋನಿ ಇಂದು ಅಂದರೆ, ಜುಲೈ 7 ರಂದು ತಮ್ಮ 42 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಎಂಎಸ್ ಧೋನಿ (MS Dhoni)… ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ. ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ (Team India) ಅಭಿಮಾನಿಗಳು ನಿರೀಕ್ಷೆಗೂ ಮೀರಿದನ್ನು ಸಾಧಿಸಿ ತೋರಿಸಿದ ಛಲದಂಕಮಲ್ಲ. 21 ನೇ ಶತಮಾನದಲ್ಲಿ ಯಾವುದೇ ಒಬ್ಬ ಆಟಗಾರ ಭಾರತೀಯ ಕ್ರಿಕೆಟ್ ಮೇಲೆ ದೊಡ್ಡ ಪ್ರಭಾವ ಬೀರಿದ್ದರೆ, ಅದು ಧೋನಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕಪಿಲ್ ದೇವ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ನಂತರ ಭಾರತ ಕ್ರಿಕೆಟ್ ಅನ್ನು ಉತ್ತುಂಗಕ್ಕೆ ಕೊಂಡೊಯ್ದ ಶ್ರೇಯ ಕ್ಯಾಪ್ಟನ್ ಕೂಲ್ಗೆ ಸಲ್ಲಬೇಕು. ಟೀಂ ಇಂಡಿಯಾವನ್ನು ಎಲ್ಲಾ ಮಾದರಿಯಲ್ಲೂ ನಂಬರ್ ಒನ್ ಸ್ಥಾನಕ್ಕೇರಿದ ಶಾಂತ ಮೂರ್ತಿ ಧೋನಿ ಇಂದು ಅಂದರೆ, ಜುಲೈ 7 ರಂದು ತಮ್ಮ 42 ನೇ ವರ್ಷಕ್ಕೆ (Birthday) ಕಾಲಿಟ್ಟಿದ್ದಾರೆ. ಕ್ರಿಕೆಟ್ ದುನಿಯಾದ ಶ್ರೇಷ್ಠ ನಾಯಕ ಧೋನಿಯ ಈ ಜನ್ಮದಿನದಂದು ಅವರ ಕ್ರಿಕೆಟ್ ಪಯಣದ ಹೈಲೆಟ್ಸ್ ಇಲ್ಲಿದೆ.
ಧೋನಿ ವೃತ್ತಿಬದುಕಿಗೆ ನಿರೀಕ್ಷಿತ ಆರಂಭವಿರಲಿಲ್ಲ
2007ರಲ್ಲಿ ಟೀಂ ಇಂಡಿಯಾದ ನಾಯಕತ್ವವಹಿಸಿಕೊಳ್ಳುವುದಕ್ಕೂ ಮುನ್ನ ಧೋನಿ ದರ್ಬಾರ್ ಶುರುವಾಗಿದ್ದು ಕೀನ್ಯಾದಲ್ಲಿ. 2003ರಿಂದ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಾರಂಭಿಸಿದ ಮಹೀ ಕೀನ್ಯಾ ನೆಲದಲ್ಲಿ ಭಾರತ ಎ ಪರ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಒಬ್ಬ ಅದ್ಭುತ ವಿಕೆಟ್ ಕೀಪರ್ಗಾಗಿ ಹುಡುಕಾಡುತ್ತಿದ್ದ ಭಾರತ ಕ್ರಿಕೆಟ್ಗೆ ಸಂಜೀವಿನಿಯಂತ್ತಾದರು ಧೋನಿ. ಆದರೆ ಧೋನಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನ ಆರಂಭ ಶುಭಕರವಾಗಿರಲಿಲ್ಲ.
ಡಿಸೆಂಬರ್ 2004 ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಪರ ಕಣಕ್ಕಿಳಿದಿದ್ದ ಉದ್ದ ಕೂದಲಿನ ಧೋನಿ ಒಂದೇ ಒಂದು ಚೆಂಡನ್ನು ಆಡದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಬಿಟ್ಟಿದ್ದರು. ಇದರ ಹೊರತಾಗಿಯೂ, ಧೋನಿಗೆ ತಂಡದಲ್ಲಿ ಅನೇಕ ಅವಕಾಶಗಳು ಸಿಕ್ಕವು. ಅಂತಿಮವಾಗಿ 2005 ರಲ್ಲಿ, ಪಾಕಿಸ್ತಾನ ವಿರುದ್ಧ ವಿಶಾಖಪಟ್ಟಣಂ ನಡೆದ ಏಕದಿನ ಪಂದ್ಯದಲ್ಲಿ 148 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಮಹೀ, ಟೀಂ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿಬಿಟ್ಟರು.
ಈ ಸ್ಮರಣೀಯ ಇನ್ನಿಂಗ್ಸ್ ನಂತರ ಇಡೀ ಭಾರತ ಕ್ರಿಕೆಟ್ ಧೋನಿ ಮಯವಾಗಿಬಿಟ್ಟಿತು. ಭಾರತ ಕ್ರಿಕೆಟ್ ಒಬ್ಬ ಪಾದರಸದಂತಹ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ತಂಡಕ್ಕೆ ಸಿಕ್ಕ ಎಂಬ ಸಂತಸದಲ್ಲಿದ್ದರೆ, ಇತ್ತ ಧೋನಿಯ ಹೆಲಿಕಾಪ್ಟರ್ ಶಾಟ್, ಅವರ ಹೇರ್ ಸ್ಟೈಲ್ಗೆ ಫಿದಾ ಆಗಿದ್ದ ಅದೇಷ್ಟೋ ಅಭಿಮಾನಿಗಳು ಧೋನಿ ನೋಡಲೆಂದೆ ಮೈದಾನಕ್ಕೆ ಬರಲಾರಂಭಿಸಿದರು.
IPL 2023: ‘ಬೇಸರವಾಗಿರಬಹುದು’! ಧೋನಿ- ಜಡೇಜಾ ಫೈಟ್ ಬಗ್ಗೆ ಕೊನೆಗೂ ಮೌನ ಮುರಿದ ಸಿಎಸ್ಕೆ ಸಿಇಒ
2007 ರಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ
2007 ನಿಜವಾದ ಅರ್ಥದಲ್ಲಿ ಧೋನಿ ಮತ್ತು ಭಾರತೀಯ ಕ್ರಿಕೆಟ್ ಚಿತ್ರವನ್ನು ಬದಲಾಯಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿತು. ತಂಡದ ದಿಗ್ಗಜ ಆಟಗಾರರೆಲ್ಲ ಟಿ20 ಮಾದರಿ ನಮಗೆ ಸರಿ ಹೊಂದುವುದಿಲ್ಲ ಎಂದು ಟಿ20 ವಿಶ್ವಕಪ್ ಆಡಲು ನಿರಾಕರಿಸಿದಾಗ ಯುವ ಪಡೆಯನ್ನೇ ಕಟ್ಟಿಕೊಂಡು ಕ್ರಿಕೆಟ್ ರಣಭೂಮಿಯಲ್ಲಿ ಹೋರಾಟ ಮಾಡಿದ ಧೋನಿ ಭಾರತಕ್ಕೆ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಟ್ಟರು. ಅದೂ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಎಂಬುದು ಇನ್ನಷ್ಟು ರೋಮಾಂಚಕ. ವಿಶೇಷವೆಂದರೆ, ಒಂದು ಬದಿಯಲ್ಲಿ ಪಾಕ್ ಗೆಲುವಿಗೆ ಶತಪ್ರಯತ್ನ ಮಾಡುತ್ತಿದ್ದ ಮಿಸ್ಬಾ ಉಲ್ ಹಕ್ಗೆ ಯುವ ವೇಗಿಯಿಂದ ಚಳ್ಳೆ ಹಣ್ಣು ತಿನ್ನಿಸಿದ್ದ ಧೋನಿಗೆ ಧೋನಿಯೇ ಸಾಟಿ ಎಂದು ವಿಶ್ವ ಕ್ರಿಕೆಟ್ಟೆ ಅಂದು ಹೊಗಳಿಬಿಟ್ಟಿತ್ತು.
ಆ ನಂತರ 2008 ರಲ್ಲಿ ಕ್ರಿಕೆಟ್ನ ಎಲ್ಲಾ ಮೂರು ಸ್ವರೂಪಗಳಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಧೋನಿಯ ಟೆಸ್ಟ್ ಮತ್ತು ಟಿ20 ಯಶಸ್ಸಿನ ಗ್ರಾಫ್ ಮತ್ತು ಧೋನಿಯ ಬ್ಯಾಟಿಂಗ್ ಪ್ರದರ್ಶನ ಏರಿಳಿತಗಳಿಂದ ತುಂಬಿತ್ತು. ಆದರೆ ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ಛಾಪು ಮೂಡಿಸಿದ ಧೋನಿಯ ಏಕದಿನ ಯಶಸ್ಸಿನ ಪಯಣ 2008 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ VB ಸರಣಿಯ ಫೈನಲ್ ಗೆಲ್ಲುವುದರೊಂದಿಗೆ ಪ್ರಾರಂಭವಾಯಿತು. ಬಳಿಕ ಅದು 2011 ರ ವಿಶ್ವಕಪ್ ಗೆಲ್ಲುವವರೆಗೂ ಮುಂದುವರೆಯಿತು.
28 ವರ್ಷಗಳ ಬರ ನೀಗಿಸಿದ್ದ ಧೋನಿ
1983ರಲ್ಲಿ ಕಪಿಲ್ ದೇವ್ ಚೊಚ್ಚಲ ವಿಶ್ವಕಪ್ ಗೆದ್ದ ಬಳಿಕ ಭಾರತ ಒಂದೇ ಒಂದು ಏಕದಿನ ವಿಶ್ವಕಪ್ ಗೆದ್ದಿರಲಿಲ್ಲ. ಈ ಬರ ಬರೋಬ್ಬರಿ 28 ವರ್ಷಗಳವರೆಗೂ ಮುಂದುವರೆದಿತ್ತು. ನಾಯಕತ್ವವಹಿಸಿಕೊಂಡ ಬಳಿಕ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಬೀಗಿದ್ದ ಧೋನಿಯ ಮೇಲೆ 2011ರ ಏಕದಿನ ವಿಶ್ವಕಪ್ ಗೆಲ್ಲಲೇಬೇಕೆಂಬ ಒತ್ತಡವೂ ಸಾಕಷ್ಟಿತ್ತು. ಏಕದಿನ ವಿಶ್ವಕಪ್ ಗೆದ್ದು ಬಹಳ ವರ್ಷಗಳೇ ಕಳೆದಿರುವ ಒತ್ತಡ ಒಂದೆಡೆಯಾದರೆ, ಭಾರತದಲ್ಲೇ ಈ ವಿಶ್ವಕಪ್ ನಡೆಯುತ್ತಿರುವುದು ಧೋನಿಗೆ ಸಾಕಷ್ಟು ಸವಾಲಗಳನ್ನು ಮುಂದಿಟ್ಟಿತ್ತು. ಆದರೆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತ ಧೋನಿ ನಾಯಕತ್ವದ ಟೀಂ ಇಂಡಿಯಾ ಎಲ್ಲಾ ಬಲಿಷ್ಠ ತಂಡಗಳ ಬೆನ್ನೆಲುಬು ಮುರಿದು ಫೈನಲ್ಗೆ ಲಗ್ಗೆ ಇಟ್ಟಿತ್ತು.
MS Dhoni Video: ಐಪಿಎಲ್ಗೆ ಧೋನಿ ವಿದಾಯ? ಭಾವನಾತ್ಮಕ ವಿಡಿಯೋ ಹಂಚಿಕೊಂಡ ಸಿಎಸ್ಕೆ..!
ಸಿಂಹಳಿಯರ ಸೊಕ್ಕು ಮುರಿದಿದ್ದ ಮಹೇಂದ್ರ
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಂದು ಬಲಿಷ್ಠ ತಂಡವೆನಿಸಿಕೊಂಡಿದ್ದ ಶ್ರೀಲಂಕಾವನ್ನು ಭಾರತ ತಂಡ ಎದುರಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಲಂಕನ್ನರು ಜಯವರ್ಧನೆಯ ಶತಕದ ನೆರವಿನಿಂದಾಗಿ 274 ರನ್‌ಗಳ ಸವಾಲನ್ನು ಮುಂದಿಟ್ಟರು. ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಶಾಕ್ ಮೇಲೆ ಶಾಕ್. ಮೊದಲ ಓವರ್ನಲ್ಲೇ ಸೆಹ್ವಾಗ್ ಸುಸ್ತಾದರೆ, ಆ ಬಳಿಕ ಕೊಹ್ಲಿ, ಸಚಿನ್ರಂತಹ ಆಟಗಾರರು ಬೇಗನೇ ಇನ್ನಿಂಗ್ಸ್ ಮುಗಿಸಿಬಿಟ್ಟರು. ಆದರೆ ಆರಂಭಿಕ ಗಂಭೀರ್ ಜೊತೆಯಾದ ಧೋನಿ, ನಾನು ಎಂತಹ ಗೇಮ್ ಫಿನಿಶರ್ ಎಂಬುದನ್ನು ಮತ್ತೊಮ್ಮೆ ವಿಶ್ವ ಕ್ರಿಕೆಟ್ಗೆ ತೋರಿಸಿಕೊಟ್ಟುಬಿಟ್ಟರು. ಫೈನಲ್ ಪಂದ್ಯದಲ್ಲಿ 93 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದ ಧೋನಿ, ಸಿಕ್ಸರ್ ಬಾರಿಸುವ ಮೂಲಕ ಭಾರತದ 28 ವರ್ಷಗಳ ಕಾಯುವಿಕೆಗೆ ಮುಕ್ತಿ ಹಾಡಿದ್ದರು.
ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ಕಿರೀಟ
ಧೋನಿ ಯಶಸ್ವಿ ನಾಯಕನಷ್ಟೇ ಅಲ್ಲ, ಶಾಂತ ಸ್ವಭಾವದಿಂದಲೇ ‘ಕ್ಯಾಪ್ಟನ್ ಕೂಲ್’ ಆದವರು. ಎರಡು ವರ್ಷಗಳ ನಂತರ, ಧೋನಿ ಇಲ್ಲಿಯವರೆಗೆ ಕ್ರಿಕೆಟ್‌ನಲ್ಲಿ ಯಾವುದೇ ನಾಯಕ ಮಾಡಲು ಸಾಧ್ಯವಾಗದ ಸಾಧನೆಯನ್ನು ಸಹ ಮಾಡಿಬಿಟ್ಟರು. 2013 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಚಾಂಪಿಯನ್ ಮಾಡಿದ ಧೋನಿ, ಎಲ್ಲಾ ಮೂರು ಐಸಿಸಿ ಪಂದ್ಯಾವಳಿಗಳನ್ನು ಗೆದ್ದ ಮೊದಲ ನಾಯಕರೆನಿಸಿಕೊಂಡರು. ಆದರೆ ಈ ಐಸಿಸಿ ಈವೆಂಟ್ ಗೆದ್ದ ಬಳಿಕ ಭಾರತ ಇದುವರೆಗೂ ಯಾವುದೇ ಐಸಿಸಿ ಪ್ರಶಸ್ತಿ ಗೆದ್ದಿಲ್ಲ ಎಂಬುದು ವಿಷಾದಕರ. ಧೋನಿ ನಾಯಕತ್ವದಲ್ಲಿ 2014 ರ ಟಿ20 ವಿಶ್ವಕಪ್‌ನ ಫೈನಲ್ ಆಡಿದ್ದ ಭಾರತ ಇದುವರೆಗೂ ಹಲವು ಐಸಿಸಿ ಈವೆಂಟ್ಗಳಲ್ಲಿ ಪ್ರಶಸ್ತಿ ಸನಿಹಕ್ಕೆ ಹೋಗಿದೆಯಾದರೂ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿಲ್ಲ.
ವಿದಾಯವೆಂಬ ಶಾಕ್ ನೀಡಿದ್ದ ಧೋನಿ
ನಾಯಕನಾಗಿ ಮತ್ತು ಆಟಗಾರನಾಗಿ ಟೀಂ ಇಂಡಿಯಾವನ್ನು ಉತ್ತುಂಗಕ್ಕೇರಿಸಿದ ಧೋನಿಯ ವಿದಾಯ ಮಾತ್ರ ಯಾರೂ ನಿರೀಕ್ಷಿಸದ ರೀತಿಯಲ್ಲಿ ನಡೆದುಹೋಯಿತು. 2014 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಟೆಸ್ಟ್ ಸೋತ ನಂತರ ಧೋನಿ ಈ ಸ್ವರೂಪಕ್ಕೆ ಹಠಾತ್ ನಿವೃತ್ತ ಘೋಷಿಸಿಬಿಟ್ಟರು. ನಂತರ 2019 ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ರನ್ ಔಟ್ಗೆ ಬಲಿಯಾದ ಧೋನಿ, ಭಾರತದ ಮತ್ತೊಂದು ವಿಶ್ವಕಪ್ ಕನಸಿಗೂ ಫುಲ್ ಸ್ಟಾಪ್ ಇಟ್ಟಿಬಿಟ್ಟಿದ್ದರು. ಆ ಬಳಿಕ ಮತ್ತೆಂದು ಭಾರತ ಏಕದಿನ ತಂಡದಲ್ಲಿ ಕಾಣಿಸಿಕೊಳ್ಳದ ಮಹೀ ಇದ್ದಕ್ಕಿದ್ದಂತೆ, 15 ಆಗಸ್ಟ್ 2020 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿಬಿಟ್ಟರು.
ಇನ್ನು ಟೀಂ ಇಂಡಿಯಾ ಮಾತ್ರವಲ್ಲದೆ, ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಧೋನಿ, ತಮ್ಮ 42ನೇ ಹುಟ್ಟುಹಬ್ಬಕ್ಕೆ ಸುಮಾರು ಒಂದೂವರೆ ತಿಂಗಳ ಮುಂಚೆಯೇ ಚೆನ್ನೈ ತಂಡವನ್ನು ಐದನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದರು. ಇದು ಧೋನಿ ಎಂತಹ ಅದ್ಭುತ ನಾಯಕನೆಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
ಧೋನಿ ಕ್ರಿಕೆಟ್ ವೃತ್ತಿಬದುಕು
ಧೋನಿ ಅವರ ಒಟ್ಟಾರೆ ಅಂತರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ನಲ್ಲಿ ಸರ್ವ ಶ್ರೇಷ್ಠ ಪ್ರದರ್ಶನ ನೀಡಿರುವ ಮಹೀ, ಭಾರತದ ಪರ 90 ಟೆಸ್ಟ್‌ಗಳಲ್ಲಿ 6 ಶತಕ ಸೇರಿದಂತೆ 38 ಸರಾಸರಿಯಲ್ಲಿ 4876 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ ಮಾದರಿಯಲ್ಲಿ 350 ಪಂದ್ಯಗಳನ್ನಾಡಿರುವ ಧೋನಿ, 50 ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿ 10773 ರನ್ ಬಾರಿಸಿದ್ದಾರೆ. ಇದರಲ್ಲಿ 10 ಶತಕಗಳೂ ಸೇರಿವೆ. ಟಿ20ಯಲ್ಲಿ 98 ಪಂದ್ಯಗಳನ್ನಾಡಿರುವ ಕ್ಯಾಪ್ಟನ್ ಕೂಲ್, ಈ ಮಾದರಿಯಲ್ಲಿ 1617 ರನ್ ಬಾರಿಸಿದ್ದಾರೆ. ಮುಖ್ಯವಾಗಿ ಮಧ್ಯಮ ಮತ್ತು ಕೆಳ ಕ್ರಮಾಂಕದಲ್ಲಿ ಅವರು ಇಷ್ಟು ರನ್ ಗಳಿಸಿದ್ದಾರೆ ಎಂದರೆ ನಂಬುವುದು ಕಷ್ಟ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:01 am, Fri, 7 July 23