IND vs AUS: ನಾಗ್ಪುರ ಪಿಚ್​ನಲ್ಲಿ ಅಂದಿಗೂ ಇಂದಿಗೂ ಟೀಮ್ ಇಂಡಿಯಾದ್ದೇ ದರ್ಬಾರ್

| Updated By: ಝಾಹಿರ್ ಯೂಸುಫ್

Updated on: Feb 11, 2023 | 3:57 PM

IND vs AUS 1st Test: ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು ವಿಸಿಎ ಮೈದಾನದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ರವೀಂದ್ರ ಜಡೇಜಾ ಅವರ ಸ್ಪಿನ್ ದಾಳಿಗೆ ನಲುಗಿ ಕೇವಲ 177 ರನ್​ಗಳಿಗೆ ಆಲೌಟ್ ಆಯಿತು.

IND vs AUS: ನಾಗ್ಪುರ ಪಿಚ್​ನಲ್ಲಿ ಅಂದಿಗೂ ಇಂದಿಗೂ ಟೀಮ್ ಇಂಡಿಯಾದ್ದೇ ದರ್ಬಾರ್
Team India
Follow us on

India vs Australia 1st Test: ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಇನಿಂಗ್ಸ್ ಹಾಗೂ 131 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ವಿದರ್ಭ ಕ್ರಿಕೆಟ್​ ಮೈದಾನದಲ್ಲಿ ಮತ್ತೊಮ್ಮೆ ಜಯದ ಪಾತಾಕೆಯನ್ನು ಹಾರಿಸಿದೆ. ವಿಶೇಷ ಎಂದರೆ ಭಾರತದ ಪಾಲಿಗೆ ಇದು ನಿರೀಕ್ಷಿತ ಗೆಲುವು. ಏಕೆಂದರೆ ವಿದರ್ಭ ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡ ಟೆಸ್ಟ್​​ನಲ್ಲಿ ಸೋತಿದ್ದು ಕೇವಲ 1 ಬಾರಿ ಮಾತ್ರ. ಅಂದರೆ 2008 ರಲ್ಲಿ ನವೀಕರಣಗೊಂಡ ವಿದರ್ಭ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಪಾರುಪತ್ಯ ಮೆರೆಯುತ್ತಾ ಬಂದಿದೆ. ವಿದರ್ಭ ಮೈದಾನದಲ್ಲಿ ಟೀಮ್ ಇಂಡಿಯಾದ ಇದುವರೆಗಿನ ಪ್ರದರ್ಶನ ಹೇಗಿತ್ತು ಎಂಬುದರ ಸಂಕ್ತಿಪ್ತ ನೋಟ ಇಲ್ಲಿದೆ…

ಭಾರತ-ಆಸ್ಟ್ರೇಲಿಯಾ: ವಿದರ್ಭ ಮೈದಾನ ನವೀಕರಣಗೊಂಡ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾಗಿದ್ದು ಭಾರತ-ಆಸ್ಟ್ರೇಲಿಯಾ ತಂಡಗಳು. ಅಂದು ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 441 ರನ್​ ಕಲೆಹಾಕಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ 355 ರನ್ ಪೇರಿಸಿತ್ತು. ಇನ್ನು 2ನೇ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 295 ರನ್​ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್​ ಹಿನ್ನಡೆಯೊಂದಿಗೆ ಬೃಹತ್ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 209 ರನ್​ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಟೀಮ್ ಇಂಡಿಯಾ 172 ರನ್​ಗಳ ಭರ್ಜರಿ ಜಯ ಸಾಧಿಸಿತು. ಅಂದು ಟೀಮ್ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ ಶತಕ ಬಾರಿಸಿ ಮಿಂಚಿದರೆ, ಹರ್ಭಜನ್ ಸಿಂಗ್ 7 ವಿಕೆಟ್ ಕಬಳಿಸಿದ್ದರು.

ಭಾರತ-ಸೌತ್ ಆಫ್ರಿಕಾ: ಫೆಬ್ರವರಿ 6, 2010 ರಲ್ಲಿ ಇದೇ ಮೈದಾನದಲ್ಲಿ ಭಾರತ-ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 6 ವಿಕೆಟ್ ನಷ್ಟಕ್ಕೆ 558 ರನ್​ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಕೇವಲ 233 ರನ್​ಗಳಿಗೆ ಆಲೌಟ್ ಆಯಿತು. ಆ ಬಳಿಕ ಫಾಲೋಆನ್​ ಹೇರಿದ ಸೌತ್ ಆಫ್ರಿಕಾ ಭಾರತ ತಂಡವನ್ನು ಮತ್ತೆ ದ್ವಿತೀಯ ಇನಿಂಗ್ಸ್​ಗೆ ಆಹ್ವಾನಿಸಿತು. ಆದರೆ 2ನೇ ಇನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ತಂಡವು 319 ರನ್​ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಸೌತ್ ಆಫ್ರಿಕಾ ತಂಡವು ಇನಿಂಗ್ಸ್ ಹಾಗೂ 6 ರನ್​ಗಳ ಭರ್ಜರಿ ಜಯ ಸಾಧಿಸಿತು. ವಿಶೇಷ ಎಂದರೆ ಇದು ವಿದರ್ಭ ಮೈದಾನದಲ್ಲಿ ಟೀಮ್ ಇಂಡಿಯಾ ಕಂಡಂತಹ ಮೊದಲ ಸೋಲಾಗಿದೆ.

ಇದನ್ನೂ ಓದಿ
ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Shubman Gill: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಶುಭ್​ಮನ್ ಗಿಲ್
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

ಭಾರತ-ನ್ಯೂಜಿಲೆಂಡ್: 2010 ರಲ್ಲಿ ಇದೇ ಮೈದಾನದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 193 ರನ್​ಗಳಿಗೆ ಆಲೌಟ್ ಆಗಿತ್ತು. ಇನ್ನು ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 566 ರನ್​ಗಳ ಬೃಹತ್ ಮೊತ್ತ ಪೇರಿಸಿತು. ದ್ವಿತೀಯ ಇನಿಂಗ್ಸ್​ನಲ್ಲೂ ಟೀಮ್ ಇಂಡಿಯಾ ಬೌಲರ್​ಗಳ ದಾಳಿಗೆ ತತ್ತರಿಸಿದ ಕಿವೀಸ್ ಪಡೆ ಕೇವಲ 175 ರನ್​ಗಳಿಗೆ ಸರ್ವಪತನ ಕಂಡಿತು. ಅಂದು ಭಾರತ ತಂಡವು ಇನಿಂಗ್ಸ್ ಹಾಗೂ 198 ರನ್​ಗಳ ಭರ್ಜರಿ ಜಯ ಸಾಧಿಸಿ ದಾಖಲೆ ಬರೆಯಿತು.

ಭಾರತ-ಇಂಗ್ಲೆಂಡ್: 2012 ರಲ್ಲಿ ಇದೇ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 330 ರನ್​ ಪೇರಿಸಿದರೆ, ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 326 ರನ್​ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡವು 4 ವಿಕೆಟ್ ನಷ್ಟಕ್ಕೆ 352 ರನ್​ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಅಷ್ಟರಲ್ಲಿ 5ನೇ ದಿನದಾಟದ ಮುಕ್ತಾಯವಾಗಿದ್ದರಿಂದ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು.

ಭಾರತ-ಸೌತ್ ಆಫ್ರಿಕಾ: ಇಂಗ್ಲೆಂಡ್ ವಿರುದ್ಧ ಡ್ರಾ ಮಾಡಿಕೊಂಡ ಬಳಿಕ 2015 ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ-ಸೌತ್ ಆಫ್ರಿಕಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 215 ರನ್​ ಪೇರಿಸಿದರೆ, ಸೌತ್ ಆಫ್ರಿಕಾ ತಂಡವು ಕೇವಲ 79 ರನ್​ಗಳಿಗೆ ಆಲೌಟ್ ಆಗಿತ್ತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಭಾರತ ತಂಡವು 173 ರನ್​ ಕಲೆಹಾಕಿತು. ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಸವಾಲಿನ ಮೊತ್ತ ಪಡೆದ ಸೌತ್ ಆಫ್ರಿಕಾ ತಂಡವು 185 ರನ್​ಗಳಿಗೆ ಸರ್ವಪತನ ಕಂಡಿತು. ಪರಿಣಾಮ ಟೀಮ್ ಇಂಡಿಯಾ 124 ರನ್​ಗಳ ಭರ್ಜರಿ ಜಯ ಸಾಧಿಸಿತು.

ಭಾರತ-ಶ್ರೀಲಂಕಾ: 2017 ರಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಣ 2ನೇ ಟೆಸ್ಟ್ ಪಂದ್ಯವು ನಾಗ್ಪುರದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 205 ರನ್​ಗಳಿಗೆ ಆಲೌಟಾದರೆ, ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 610 ರನ್​ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವನ್ನು ಭಾರತೀಯ ಬೌಲರ್​ಗಳು ಕೇವಲ 166 ರನ್​ಗಳಿಗೆ ಆಲೌಟ್ ಮಾಡಿದರು. ಇದರೊಂದಿಗೆ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 239 ರನ್​ಗಳ ಭರ್ಜರಿ ಜಯ ಸಾಧಿಸಿ ವಿದರ್ಭ ಮೈದಾನದಲ್ಲಿ ಹೊಸ ಇತಿಹಾಸ ನಿರ್ಮಿಸಿತು.

ಭಾರತ-ಆಸ್ಟ್ರೇಲಿಯಾ: 6 ವರ್ಷಗಳ ಬಳಿಕ ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು ವಿಸಿಎ ಮೈದಾನದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ರವೀಂದ್ರ ಜಡೇಜಾ ಅವರ ಸ್ಪಿನ್ ದಾಳಿಗೆ ನಲುಗಿ ಕೇವಲ 177 ರನ್​ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಇನಿಂಗ್ಸ್​ ಆರಂಭಿಸಿದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಅವರ ಶತಕ ಸಿಡಿಸಿದರು. ಇನ್ನು ಜಡೇಜಾ, ಅಕ್ಷರ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 400 ರನ್​ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 91 ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ ಆಸ್ಟ್ರೇಲಿಯಾ ತಂಡವು ಹೀನಾಯವಾಗಿ ಸೋಲನುಭವಿಸಿದೆ. ಇದರೊಂದಿಗೆ 4 ಪಂದ್ಯಗಳ​ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 132 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಅಂದರೆ 2008 ರಿಂದ ವಿದರ್ಭ ಕ್ರಿಕೆಟ್ ಮೈದಾನದಲ್ಲಿ ಆಡಲಾದ 7 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋತಿರುವುದು ಕೇವಲ 1 ಪಂದ್ಯದಲ್ಲಿ ಮಾತ್ರ. ಇನ್ನು 1 ಮ್ಯಾಚ್ ಡ್ರಾನಲ್ಲಿ ಅಂತ್ಯ ಕಂಡಿದೆ. ಹಾಗೆಯೇ ಇನ್ನುಳಿದ 5 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಅಮೋಘ ಗೆಲುವಿನ ನಾಗಾಲೋಟ ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂಲಕ ಮುಂದುವರೆದಿರುವುದು ವಿಶೇಷ.