IND-L vs SL-L Final: ನಮನ್ ಓಜಾ ಸ್ಫೋಟಕ ಶತಕ: ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಚಾಂಪಿಯನ್ ಆದ ಭಾರತ ಲೆಜೆಂಡ್ಸ್
Road Safety World Series 2022: ನಮನ್ ಓಜಾ ಅವರ ಸ್ಫೋಟಕ ಶತಕದ ಜೊತೆ ವಿನಯ್ ಕುಮಾರ್ ಆಲ್ರೌಂಡ್ ಆಟ, ಅಭಿಮನ್ಯು ಮಿಥುನ್ ಬೌಲಿಂಗ್ ದಾಳಿಯಿಂದ ಭಾರತ ಲೆಜೆಂಡ್ಸ್ ಶ್ರೀಲಂಕಾ ಲೆಜೆಂಡ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20 2022ಕ್ಕೆ ತೆರೆಬಿದ್ದಿದೆ. ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ಲೆಜೆಂಡ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಭಾರತ ಲೆಜೆಂಡ್ಸ್ (India Legends vs Sri Lanka Legends) ತಂಡ ಭರ್ಜರಿ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಮನ್ ಓಜಾ (Naman Ojha) ಅವರ ಸ್ಫೋಟಕ ಶತಕದ ಜೊತೆ ವಿನಯ್ ಕುಮಾರ್ (Vinay Kumar) ಆಲ್ರೌಂಡ್ ಆಟ, ಅಭಿಮನ್ಯು ಮಿಥುನ್ ಬೌಲಿಂಗ್ ದಾಳಿಯಿಂದ ಭಾರತ ಲೆಜೆಂಡ್ಸ್ 33 ರನ್ಗಳ ಜಯ ಸಾಧಿಸಿತು. ಈ ಮೂಲಕ ಎರಡನೇ ಆವೃತ್ತಿಯಲ್ಲಿ ಕೂಡ ತೆಂಡೂಲ್ಕರ್ ಪಡೆ ತನ್ನ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿಶೇಷ ಎಂದರೆ ಭಾರತ ತಂಡ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ಎರಡನೇ ಆವೃತ್ತಿಯಲ್ಲಿ ಒಂದೂ ಸೋಲು ಕಾಣದೆ ಚಾಂಪಿಯನ್ ಆಗಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಲೆಜೆಂಡ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಅಂದುಕೊಂಡಂತೆ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ನಾಯಕ ಸಚಿನ್ ತೆಂಡುಲ್ಕರ್ ಶೂನ್ಯಕ್ಕೆ ಔಟಾಗುವ ಮೂಲಕ ಆಘಾತ ಅನುಭವಿಸಿತು. ನಂತರ ಬಂದ ಸುರೇಶ್ ರೈನಾ ಕೂಡ 4 ರನ್ ಆಗುವಷ್ಟರಲ್ಲಿ ಔಟಾದರು. ಈ ಸಂದರ್ಭ ತಂಡಕ್ಕೆ ಆಸರೆಯಾಗಿದ್ದು ನಮನ್ ಓಜಾ ಹಾಗೂ ವಿನಯ್ ಕುಮಾರ್. ಇವರಿಬ್ಬರು ಉತ್ತಮವಾಗಿ ಬ್ಯಾಟ್ ಮಾಡಿದರು. ವಿನಯ್ ಕುಮಾರ್ 21 ಎಸೆತಗಳಲ್ಲಿ 36 ರನ್ ಗಳಿಸುವ ಮೂಲಕ ಉತ್ತಮ ಜೊತೆಯಾಟ ಆಡಿದರು.
71 ಎಸೆತಗಳನ್ನು ಎದುರಿಸಿದ ನಮನ್ ಓಜಾ 15 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಹಿತ 108 ರನ್ ಗಳಿಸಿದ ಇಂಡಿಯಾ ಲೆಜೆಂಡ್ಸ್ ತಂಡ ಉತ್ತಮ ರನ್ ಕಲೆ ಹಾಕಲು ಕಾರಣರಾದರು. ಯುವರಾಜ್ ಸಿಂಗ್ 19 ರನ್ ಗಳಿಸಿ ಔಟಾದರೆ, ಇರ್ಫಾನ್ ಪಠಾಣ್ 11 ರನ್ ಗಳಿಸಿದರು. ಸ್ಟುವರ್ಟ್ ಬಿನ್ನಿ ಕೊನೆಯ ಎರಡು ಎಸೆತಗಳನ್ನು ಎದುರಿಸಿ 8 ರನ್ಗಳ ಕೊಡುಗೆ ನೀಡಿದರು. ಇದರ ಪರಿಣಾಮ ಇಂಡಿಯಾ ಲೆಜೆಂಡ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು. ಶ್ರೀಲಂಕಾ ಪರವಾಗಿ ನುವಾನ್ ಕುಲಶೇಖರ 3 ವಿಕೆಟ್ ಹಾಗೂ ಇಸಿರು ಉದಾನ 2 ವಿಕೆಟ್ ಕಿತ್ತರು.
ಇತ್ತ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ಲೆಜೆಂಡ್ಸ್ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಸನತ್ ಜಯಸೂರ್ಯ (5), ದಿಲ್ಶನ್ ಮುನವೀರ (8), ನಾಯಕ ತಿಲಕರತ್ನೆ ದಿಲ್ಶಾನ್ (11), ಉಪುಲ್ ತರಂಗ (10) ಬೇಗನೆ ಔಟಾಗುವ ಮೂಲಕ ಶ್ರೀಲಂಕಾ ಲೆಜೆಂಡ್ಸ್ ತಂಡ ಆರಂಭದಲ್ಲೇ ಮುಗ್ಗರಿಸಿತು. ಜೀವನ್ ಮೆಂಡಿಸ್ 11 ಎಸೆತಗಳಲ್ಲಿ 20 ರನ್ ಗಳಿಸಿದರು. ಮಹೇಲ ಉದವಟ್ಟೆ 19 ಎಸೆತಗಳಲ್ಲಿ 26 ರನ್ ಗಳಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಅಂತಿಮವಾಗಿ ಶ್ರೀಲಂಕಾ 18.5 ಓವರ್ಗಳಲ್ಲಿ 162 ರನ್ಗೆ ಆಲೌಟ್ ಆಗುವ ಮೂಲಕ ಸೋಲುಂಡಿತು. ಭಾರತ ಪರ ವಿನಯ್ ಕುಮಾರ್ 3 ವಿಕೆಟ್ ಕಿತ್ತರೆ, ಅಭಿಮನ್ಯು ಮಿಥುನ್ 2 ವಿಕೆಟ್ ಪಡೆದರು. ಓಜಾ ಪಂದ್ಯಶ್ರೇಷ್ಠ ಬಾಜಿಕೊಂಡರೆ, ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿದ ತಿಲಕರತ್ನೆ ದಿಲ್ಶಾನ್ ಸರಣಿಶ್ರೇಷ್ಠ ತಮ್ಮದಾಗಿಸಿದರು.
Published On - 8:49 am, Sun, 2 October 22