ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ಕಾನೂನು ಪ್ರಕ್ರಿಯೆಗಳ ಬಳಿಕ ಟೀಮ್ ಇಂಡಿಯಾದ ಮಾಜಿ ಆಟಗಾರ ನಮನ್ ಓಜಾ ತಂದೆ ವಿನಯ್ ಓಜಾ ಸೇರಿದಂತೆ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. 2013 ರಲ್ಲಿ ವಿನಯ್ ಓಜಾ ಸೇರಿದಂತೆ ನಾಲ್ವರು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 1.25 ಕೋಟಿ ರೂ. ವಂಚಿಸಿದ್ದರು. ಈ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವರ್ಷಗಳ ಬಳಿಕ ನ್ಯಾಯಾಲಯ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಅದರಂತೆ ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ವಿನಯ್ ಓಜಾ ಸೇರಿದಂತೆ ಮೂವರಿಗೆ 7 ವರ್ಷಗಳ ಜೈಲು ಶಿಕ್ಷೆ, 14 ಲಕ್ಷ ರೂ. ದಂಡ ಹಾಗೂ ಹಗರಣದ ಮಾಸ್ಟರ್ ಮೈಂಡ್ ಅಭಿಷೇಕ್ ರತ್ನಂಗೆ 10 ವರ್ಷ ಜೈಲು ಮತ್ತು 80 ಲಕ್ಷ ರೂ. ದಂಡ ವಿಧಿಸಿದೆ.
2013 ರಲ್ಲಿ, ಬೇತುಲ್ನ ಮುಲ್ತಾಯಿ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಂಕ್ ಆಫ್ ಮಹಾರಾಷ್ಟ್ರದ ಜೌಲ್ಖೇಡಾ ಶಾಖೆಯಲ್ಲಿ 1.25 ಕೋಟಿ ರೂ.ಗಳ ದೊಡ್ಡ ವಂಚನೆ ಪತ್ತೆಯಾಗಿತ್ತು. ಈ ವಂಚನೆಯಲ್ಲಿ ಆರು ಮಂದಿ ಭಾಗಿಯಾಗಿದ್ದರು. ಅಂದು ಇದೇ ಬ್ಯಾಂಕ್ನಲ್ಲಿ ನಮನ್ ಓಜಾ ಅವರ ತಂದೆ ವಿನಯ್ ಓಜಾ ಅವರು ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇವರೆಲ್ಲರೂ ಸೇರಿ ಬ್ಯಾಂಕ್ ಅಧಿಕಾರಿಗಳ ಪಾಸ್ವರ್ಡ್ಗಳ ಮೂಲಕ ಅವ್ಯವಹಾರ ನಡೆಸಿದ್ದರು. ಅಭಿಷೇಕ್ ರತ್ನಂ ಈ ಎಲ್ಲಾ ರುಜುವಾತುಗಳನ್ನು ಬಳಸಿಕೊಂಡು ಅನೇಕ ನಕಲಿ ಖಾತೆಗಳನ್ನು ತೆರೆದು, ಕೋಟಿ ರೂ.ಗಳನ್ನು ವಂಚಿಸಿದ್ದರು.
ಈ ಅವ್ಯವಹಾರವು ಬೆಳಕಿಗೆ ಬರುತ್ತಿದ್ದಂತೆ ಅಭಿಷೇಕ್ ರತ್ನಂ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಹಾಗೆಯೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ನಮನ್ ಓಜಾ ಅವರ ತಂದೆಯು 2022 ರಲ್ಲಿ ಬಂಧನಕ್ಕೊಳಗಾಗಿದ್ದರು.
ಇದೀಗ ಈ ಪ್ರಕರಣದಲ್ಲಿ ನಾಲ್ವರು ತಪ್ಪಿತಸ್ಥರೆಂದು ದೃಢವಾಗಿದೆ. ಹೀಗಾಗಿ ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅಭಿಷೇಕ್ ರತ್ನಂ ಅವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ವಿನಯ್ ಓಜಾ ಸೇರಿದಂತೆ ಮೂವರಿಗೆ 7 ವರ್ಷಗಳ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: 22ನೇ ವಯಸ್ಸಿನಲ್ಲೇ ಸೈಮ್ ಅಯ್ಯೂಬ್ ಅಬ್ಬರ: ಸಚಿನ್, ವಿರಾಟ್ ಕೊಹ್ಲಿ ದಾಖಲೆ ಶೇಕಿಂಗ್
ನಮನ್ ಓಜಾ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್. 2010 ರಲ್ಲಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಓಜಾ 1 ಟೆಸ್ಟ್, 1 ಏಕದಿನ ಮತ್ತು 2 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 69 ರನ್ ಕಲೆಹಾಕಿದ್ದರು. ಇನ್ನು ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳ ಪರ ಕಣಕ್ಕಿಳಿದಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ನಮನ್ ಓಜಾ ಲೆಜೆಂಡ್ಸ್ ಲೀಗ್ ಸೇರಿದಂತೆ ಒಂದಷ್ಟು ಫ್ರಾಂಚೈಸಿ ಲೀಗ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.