ಏಷ್ಯಾಕಪ್ನಲ್ಲಿನ ಹೀನಾಯ ಸೋಲಿನಿಂದ ಚೇತರಿಸಿಕೊಳ್ಳುವ ಮುನ್ನವೇ ಪಾಕಿಸ್ತಾನ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಅದು ಕೂಡ ತಂಡದ ಪ್ರಮುಖ ಬೌಲರ್ ನಸೀಮ್ ಶಾ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬೀಳುವ ಶಾಕಿಂಗ್ ಸುದ್ದಿಯೊಂದಿಗೆ. ಸೋಮವಾರ ಭಾರತದ ವಿರುದ್ಧ ನಡೆದ ಸೂಪರ್-4 ಹಂತದ ಪಂದ್ಯದ ವೇಳೆ ನಸೀಮ್ ಶಾ ಅವರು ಭುಜಕ್ಕೆ ಗಾಯವಾಗಿತ್ತು. ಹೀಗಾಗಿ ಅವರು ಅರ್ಧದಲ್ಲೇ ಮೈದಾನ ತೊರೆದಿದ್ದರು.
ಇದೇ ಕಾರಣದಿಂದಾಗಿ ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲೂ ಯುವ ವೇಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ನಸೀಮ್ ಶಾ ಅವರ ಸ್ಕ್ಯಾನಿಂಗ್ ರಿಪೋರ್ಟ್ ಬಂದಿದ್ದು, ಭುಜದ ಗಾಯವು ನಿರೀಕ್ಷಿಸಿದ್ದಕ್ಕಿಂತ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಅವರು ಹೆಚ್ಚಿನ ವಿಶ್ರಾಂತಿ ಪಡೆದುಕೊಳ್ಳಬೇಕಾಗಿ ಬರಬಹುದು ಎಂದು ಪ್ರಾಥಮಿಕ ವೈದ್ಯಕೀಯ ರಿಪೋರ್ಟ್ ತಿಳಿಸಿದೆ.
ಅಂದರೆ ಕನಿಷ್ಠ 2 ತಿಂಗಳುಗಳ ಕಾಲವಾದರೂ ಅವರು ಮೈದಾನದಿಂದ ಹೊರಗುಳಿಯಬೇಕಾಗಿ ಬರಬಹುದು. ಇತ್ತ ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಶುರುವಾಗಲಿದ್ದು, ಈ ವೇಳೆಗೆ ಅವರು ಚೇತರಿಸಿಕೊಳ್ಳುವುದು ಅನುಮಾನ. ಹೀಗಾಗಿ ನಸೀಮ್ ಶಾ ಇಡೀ ಟೂರ್ನಿಯಿಂದ ಹೊರಗುಳಿಯುವುದು ಬಹುತೇಕ ಖಚಿತ ಎಂದು ವರದಿಯಾಗಿದೆ.
ಏಕದಿನ ವಿಶ್ವಕಪ್ ಮೂಲಕ ಭಾರತದ ವಿರುದ್ಧದ ಏಷ್ಯಾಕಪ್ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದ್ದ ಪಾಕ್ ಪಡೆಗೆ ಇದೀಗ ನಸೀಮ್ ಶಾ ಅಲಭ್ಯತೆಯು ದೊಡ್ಡ ಹಿನ್ನಡೆಯನ್ನುಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ.
ನಸೀಮ್ ಶಾ ಏಕದಿನ ವಿಶ್ವಕಪ್ನಿಂದ ಹೊರಗುಳಿದರೆ, ಝಮಾನ್ ಖಾನ್ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಏಕೆಂದರೆ ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರುವ ಝಮಾನ್ ಅದ್ಭುತ ದಾಳಿ ಸಂಘಟಿಸಿದ್ದರು. ಅಲ್ಲದೆ ಶ್ರೀಲಂಕಾ ವಿರುದ್ಧ 8 ರನ್ಗಳ ಗುರಿಯನ್ನು ಕೊನೆಯ ಎಸೆತದವರೆಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಚೊಚ್ಚಲ ಪಂದ್ಯದಲ್ಲೇ ಪ್ರಭಾವ ಬೀರಿರುವ ಝಮಾನ್ ಖಾನ್ಗೆ ಏಕದಿನ ವಿಶ್ವಕಪ್ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!
ಅಕ್ಟೋಬರ್ 6 ರಂದು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದ ಮೂಲಕ ಪಾಕಿಸ್ತಾನ್ ತಂಡವು ಏಕದಿನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಹಾಗೆಯೇ ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ.