IND vs ENG: ಟಿ20 ಸರಣಿಯ ನಡುವೆ ಇಂಗ್ಲೆಂಡ್​ಗೆ ಆಘಾತ; 3ನೇ ಪಂದ್ಯದಿಂದ ಕ್ಯಾಪ್ಟನ್ ಔಟ್

Nat Sciver-Brunt Injury: ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಆದರೆ, ಇಂಗ್ಲೆಂಡ್ ನಾಯಕಿ ನಟ್ ಸಿವರ್-ಬ್ರಂಟ್ ಗಾಯಗೊಂಡಿದ್ದಾರೆ. ಇದರಿಂದಾಗಿ ಅವರು ಮೂರನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಗಾಯದಿಂದ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಟ್ಯಾಮಿ ಬ್ಯೂಮಾಂಟ್ ಅವರು ತಂಡದ ಹೊಸ ನಾಯಕಿಯಾಗಿದ್ದಾರೆ.

IND vs ENG: ಟಿ20 ಸರಣಿಯ ನಡುವೆ ಇಂಗ್ಲೆಂಡ್​ಗೆ ಆಘಾತ; 3ನೇ ಪಂದ್ಯದಿಂದ ಕ್ಯಾಪ್ಟನ್ ಔಟ್
Nat Sciver Brunt

Updated on: Jul 03, 2025 | 10:34 PM

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ರೋಮಾಂಚಕಾರಿ ಕ್ರಿಕೆಟ್ ನಡೆಯುತ್ತಿದೆ. ಒಂದೆಡೆ, ಶುಭ್​ಮನ್ ಗಿಲ್ ನಾಯಕತ್ವದ ಭಾರತದ ಪುರುಷರ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರತವಾಗಿದೆ. ಮತ್ತೊಂದೆಡೆ, ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ಮಹಿಳಾ ತಂಡ, ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಮೊದಲೆರಡು ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಇದೀಗ ಉಭಯ ತಂಡಗಳ ಮೂರನೇ ಟಿ20 ಪಂದ್ಯ ಜುಲೈ 4 ರಂದು ನಡೆಯಲಿದೆ. ಈ ನಡುವೆ ತಂಡದ ನಾಯಕಿ ನ್ಯಾಟ್ ಸಿವರ್-ಬ್ರಂಟ್ (Nat Sciver-Brunt) ಗಾಯದ ಕಾರಣದಿಂದಾಗಿ ಪಂದ್ಯದಿಂದ ಹೊರಗುಳಿದಿರುವುದರಿಂದ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

ನ್ಯಾಟ್ ಸಿವರ್-ಬ್ರಂಟ್​ಗೆ ಗಾಯ

ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ, ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ತಂಡವನ್ನು ಅಚ್ಚರಿಗೊಳಿಸಿದ್ದು ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿತು. ಇಂತಹ ಪರಿಸ್ಥಿತಿಯಲ್ಲಿ, ಆತಿಥೇಯ ಇಂಗ್ಲೆಂಡ್ ಈ ಸರಣಿಯಲ್ಲಿ ಹಿಂದುಳಿದಿದ್ದು, ಸರಣಿಯನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ. ಇಂತಹ ಸಮಯದಲ್ಲಿ, ನಾಯಕಿ ಸಿವರ್-ಬ್ರಂಟ್ ಗಾಯದ ಕಾರಣದಿಂದಾಗಿ ಈ ಟಿ20 ಸರಣಿಯ ಮೂರನೇ ಪಂದ್ಯದಿಂದ ಹೊರಗುಳಿದಿರುವುದರಿಂದ ಇಂಗ್ಲೆಂಡ್‌ ತಂಡ ಯೋಚಿಸುವಂತೆ ಮಾಡಿದೆ.

ಜುಲೈ 3, ಗುರುವಾರ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಾಯಕಿಯ ಗಾಯದ ಬಗ್ಗೆ ಮಾಹಿತಿ ನೀಡಿದ್ದು, ಎಡ ತೊಡೆಸಂದಿಯಲ್ಲಿ ಗಾಯದಿಂದಾಗಿ, ಜುಲೈ 4 ರಂದು ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ ನ್ಯಾಟ್ ಸಿವರ್-ಬ್ರಂಟ್ ಅವರು ಭಾಗವಹಿಸಲು ಸಾಧ್ಯವಾಗುವುದಿಲ್ಲ. ಗಾಯದ ಸ್ಕ್ಯಾನ್ ನಂತರವೇ ಕೊನೆಯ ಎರಡು ಪಂದ್ಯಗಳಲ್ಲಿ ಅವರು ಆಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಂಡಳಿ ತಿಳಿಸಿದೆ. ಸರಣಿಯ ನಾಲ್ಕನೇ ಪಂದ್ಯ ಜುಲೈ 9 ರಂದು ನಡೆಯಲಿದೆ. ಸಿವರ್-ಬ್ರಂಟ್ ಅನುಪಸ್ಥಿತಿಯಲ್ಲಿ, ಅನುಭವಿ ಬ್ಯಾಟರ್ ಟ್ಯಾಮಿ ಬ್ಯೂಮಾಂಟ್ ಅವರಿಗೆ ತಂಡದ ನಾಯಕತ್ವ ವಹಿಸಲಾಗಿದೆ. ಅದೇ ಸಮಯದಲ್ಲಿ, ಮಾಯಾ ಬ್ಯೂಸಿ ಅವರನ್ನು ನ್ಯಾಟ್ ಸಿವರ್-ಬ್ರಂಟ್ ಅವರ ಸ್ಥಾನದಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಎಲ್ಲರೂ ಮಲಗಿದ ನಂತರ ಆರಂಭವಾಗಲಿದೆ ಭಾರತ- ಇಂಗ್ಲೆಂಡ್‌ ನಡುವಿನ 2ನೇ ಟಿ20 ಪಂದ್ಯ

ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ

ಈ ಸರಣಿಯ ವಿಚಾರಕ್ಕೆ ಬಂದರೆ, ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ 97 ರನ್‌ಗಳ ದೊಡ್ಡ ಗೆಲುವು ಸಾಧಿಸುವ ಮೂಲಕ ಮುನ್ನಡೆ ಸಾಧಿಸಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ 210 ರನ್‌ಗಳ ದೊಡ್ಡ ಸ್ಕೋರ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 113 ರನ್‌ಗಳಿಗೆ ಆಲೌಟ್ ಆಯಿತು. ಆ ಪಂದ್ಯದಲ್ಲಿ ಸಿವರ್-ಬ್ರಂಟ್ ತಂಡದ ಪರ ಅತ್ಯಧಿಕ 63 ರನ್ ಗಳಿಸಿದ್ದರು. ನಂತರ ಎರಡನೇ ಪಂದ್ಯದಲ್ಲಿ, ಟೀಂ ಇಂಡಿಯಾ 181 ರನ್ ಗಳಿಸಿದರೆ, ಇಂಗ್ಲೆಂಡ್ 157 ರನ್ ಬಾರಿಸಿ ಪಂದ್ಯವನ್ನು 24 ರನ್‌ಗಳಿಂದ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ