ಟೀಮ್ ಇಂಡಿಯಾದಿಂದ (Team India) ಹೊರಗುಳಿದಿರುವ ಆಟಗಾರರು ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಒಂದೆಡೆ ಚೇತೇಶ್ವರ ಪೂಜಾರಾ (Cheteshwara Pujara) ಆಕರ್ಷಕ ದ್ವಿಶತಕ ಸಿಡಿಸಿದರೆ, ಮತ್ತೊಂದೆಡೆ ಭಾರತೀಯ ಬೌಲರ್ಗಳಾದ ವಾಷಿಂಗ್ಟನ್ ಸುಂದರ್ (Washington Sundar) ಹಾಗೂ ನವದೀಪ್ ಸೈನಿ (Navdeep Saini) 5 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದಾರೆ. ಭಾರತದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 2 ದಿನಗಳ ಹಿಂದೆ ಲಂಕಾಶೈರ್‌ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲದೆ ಆ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಇದೀಗ ಭಾರತದ ವೇಗದ ಬೌಲರ್ ನವದೀಪ್ ಸೈನಿ ಬೆಂಕಿ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ.
ಕೆಂಟ್ ತಂಡದ ಪಾದಾರ್ಪಣೆ ಮಾಡಿದ ನವದೀಪ್ ಸೈನಿ ವಾರ್ವಿಕ್‌ಶೈರ್ ವಿರುದ್ಧ 5 ವಿಕೆಟ್ ಕಬಳಿಸಿದ್ದಾರೆ. ಅವರ ಪ್ರದರ್ಶನದಿಂದಾಗಿ ವಾರ್ವಿಕ್‌ಷೈರ್ ಮೊದಲ ಇನ್ನಿಂಗ್ಸ್‌ನಲ್ಲಿ 225 ರನ್‌ಗಳಿಗೆ ಆಲೌಟ್ ಆಗಿದೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನದಲ್ಲಿ 3 ವಿಕೆಟ್ ಪಡೆದ ನವದೀಪ್ ಸೈನಿ ಎರಡನೇ ದಿನ 2 ವಿಕೆಟ್ ಕಬಳಿಸಿ ಚೊಚ್ಚಲ ಪಂದ್ಯದಲ್ಲೇ ಐದು ವಿಕೆಟ್ ಪಡೆದ ಸಾಧನೆ ಮಾಡಿದರು.
ನವದೀಪ್ ಸೈನಿ ಮೊದಲ ಇನಿಂಗ್ಸ್ ನಲ್ಲಿ 18 ಓವರ್ ಗಳಲ್ಲಿ 72 ರನ್ ನೀಡಿ ಐದು ವಿಕೆಟ್ ಕಬಳಿಸಿದ್ದಾರೆ. ವಿಶೇಷ ಎಂದರೆ ಈ ಇನ್ನಿಂಗ್ಸ್‌ನಲ್ಲಿ ಸೈನಿ 14 ನೋ-ಬಾಲ್‌ಗಳನ್ನು ಎಸೆದಿದ್ದರು. ಸೈನಿಯನ್ನು ಹೊರತುಪಡಿಸಿದರೆ ಕೆಂಟ್ ತಂಡದ ಯಾವುದೇ ಬೌಲರ್ ನೋಬಾಲ್ ಎಸೆದಿಲ್ಲ ಎಂಬುದು ಮತ್ತೊಂದು ವಿಶೇಷ.
Five wickets on debut: @navdeepsaini96 ? pic.twitter.com/6wzYjE8N1d
— Kent Cricket (@KentCricket) July 20, 2022
ರಾಹುಲ್ ದ್ರಾವಿಡ್ ಅವರ ಮಾಜಿ ತಂಡ:
ನವದೀಪ್ ಸೈನಿ ಇತ್ತೀಚೆಗೆ ಟೀಮ್ ಇಂಡಿಯಾ ಜೊತೆ ಇಂಗ್ಲೆಂಡ್ ಪ್ರವಾಸಕ್ಕೆ ನೆಟ್ ಬೌಲರ್ ಆಗಿ ಹೋಗಿದ್ದರು. ಅಲ್ಲದೆ ಲೀಸೆಸ್ಟರ್‌ಶೈರ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಅತ್ತ ಭಾರತ-ಇಂಗ್ಲೆಂಡ್ ಸರಣಿ ಮುಗಿಯುತ್ತಿದ್ದಂತೆ ಸೈನಿ ಕೌಂಟಿ ಕ್ರಿಕೆಟ್ನತ್ತ ಮುಖಮಾಡಿದ್ದರು. ಅದರಂತೆ ಈ ಸೀಸನ್ನಲ್ಲಿ ಕೆಂಟ್ ತಂಡದ ಪರ 3 ಟೆಸ್ಟ್ ಪಂದ್ಯಗಳನ್ನು ಮತ್ತು ಐದು ಏಕದಿನ ಪಂದ್ಯಗಳನ್ನು ಆಡಲಿದ್ದಾರೆ.
ವಿಶೇಷ ಎಂದರೆ ಸೈನಿ ಕೆಂಟ್ ಪರ ಆಡುತ್ತಿರುವ ಎರಡನೇ ಭಾರತೀಯ ಕ್ರಿಕೆಟಿಗ. ಇವರಿಗಿಂತ ಮೊದಲು ಟೀಮ್ ಇಂಡಿಯಾದ ಹಾಲಿ ಕೋಚ್ ರಾಹುಲ್ ದ್ರಾವಿಡ್ ಕೂಡ ಈ ಇಂಗ್ಲಿಷ್ ಕೌಂಟಿ ತಂಡದ ಪರ ಕಣಕ್ಕಿಳಿದಿದ್ದರು. ಇದೀಗ ಕೆಂಟ್ ಪರ ಕಣಕ್ಕಿಳಿದು ಮೊದಲ ಪಂದ್ಯದಲ್ಲೇ 5 ವಿಕೆಟ್ ಪಡೆದ ವಿಶೇಷ ದಾಖಲೆಯನ್ನು ನವದೀಪ್ ಸೈನಿ ನಿರ್ಮಿಸಿದ್ದಾರೆ.
What a way to enter county cricket ?? pic.twitter.com/q29h4KO4O6
— Kent Cricket (@KentCricket) July 20, 2022
ಇನ್ನು ಚೊಚ್ಚಲ ಪಂದ್ಯದಲ್ಲಿ 5 ವಿಕೆಟ್ ಉರುಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ ನವದೀಪ್ ಸೈನಿಯನ್ನು ಸಹ ಆಟಗಾರರು ಹಾಗೂ ಅಭಿಮಾನಿಗಳು ಸ್ಟ್ಯಾಂಡಿಂಗ್ ಓವೇಷನ್ ಮೂಲಕ ಗೌರವಿಸಿದರು. ಇದೀಗ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ನಲ್ಲಿ ತಮ್ಮ ಬೆಂಕಿ ಬೌಲಿಂಗ್ ಮೂಲಕ ನವದೀಪ್ ಸೈನಿ ಎಲ್ಲರ ಗಮನ ಸೆಳೆದಿದ್ದು, ಹೀಗಾಗಿ ಮುಂಬರುವ ದಿನಗಳಲ್ಲೂ ಸೈನಿ ಕೌಂಟಿ ಮೂಲಕವೇ ಟೀಮ್ ಇಂಡಿಯಾ ಕದತಟ್ಟಿದರೂ ಅಚ್ಚರಿಪಡಬೇಕಿಲ್ಲ.