
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಮಾರ್ಚ್ 2 ರಂದು ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಉಭಯ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದು, ಆಡಿದ ಎರಡು ಪಂದ್ಯಗಳನ್ನು ಗೆದ್ದುಕೊಂಡಿವೆ. ಹೀಗಾಗಿ ನಾಳಿನ ಪಂದ್ಯವನ್ನು ಗೆಲ್ಲುವ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ದುಬೈ ಪಿಚ್ ಹೇಗಿರುತ್ತದೆ? ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ ಎಂಬ ವಿವರವನ್ನು ನಾವು ನಿಮಗೆ ಹೇಳಲಿದ್ದೇವೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ದುಬೈನಲ್ಲಿ ನಡೆಯಲಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದ ಪಿಚ್ನಲ್ಲಿ ಈಗಾಗಲೇ ನಡೆದಿರುವ ಎರಡು ಪಂದ್ಯಗಳನ್ನು ಗಮನಿಸಿದರೆ, ಇಲ್ಲಿ ಬ್ಯಾಟರ್ಗಳಿಗೆ ಕಠಿಣ ಸವಾಲು ಎದುರಾಗಲಿದೆ. ಆರಂಭದಲ್ಲಿ ವೇಗದ ಬೌಲರ್‌ಗಳು ಸಹಾಯ ಪಡೆದರೆ, ಪಂದ್ಯ ಕಳೆದಂತೆ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಬಹುದು. ಅಲ್ಲದೆ ಗುರಿಯನ್ನು ಬೆನ್ನಟ್ಟುವ ತಂಡಕ್ಕೆ ಕೊಂಚ ಕಷ್ಟಕರವಾಗಬಹುದು.
ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದುವರೆಗೆ 3 ಲೀಗ್ ಪಂದ್ಯಗಳು ಮಳೆಯಿಂದ ರದ್ದಾಗಿವೆ. ಮಳೆಯಿಂದಾಗಿ ಸೆಮಿಫೈನಲ್ ಲೆಕ್ಕಾಚಾರವೇ ಬುಡಮೇಲಾಗಿದೆ. ಆದರೆ ಈ ಪಂದ್ಯಗಳು ನಡೆದಿರುವ ಪಾಕಿಸ್ತಾನದಲ್ಲಿ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುತ್ತಿರುವುದರಿಂದ ಮಳೆಬೀಳುವ ಸಾಧ್ಯತೆಗಳಿಲ್ಲ. ಹೀಗಾಗಿ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪಂದ್ಯವನ್ನು ಆನಂದಿಸಬಹುದಾಗಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಒಟ್ಟು 8 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 7 ಪಂದ್ಯಗಳನ್ನು ಗೆದ್ದರೆ, ಒಂದು ಪಂದ್ಯ ಟೈ ಆಗಿದೆ. ದುಬೈ ಕ್ರೀಡಾಂಗಣದಲ್ಲಿ ಭಾರತ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಇತ್ತ ನ್ಯೂಜಿಲೆಂಡ್ ತಂಡ ಈ ಮೈದಾನದಲ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಸೋಲನುಭವಿಸಿದ್ದರೆ, ಇನ್ನೊಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿತು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹೆಡ್-ಟು-ಹೆಡ್ ದಾಖಲೆಯ ಬಗ್ಗೆ ಹೇಳುವುದಾದರೆ.. ಉಭಯ ತಂಡಗಳು 1975 ರಿಂದ 118 ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಟೀಂ ಇಂಡಿಯಾ 60 ಪಂದ್ಯಗಳನ್ನು ಗೆದ್ದಿದ್ದರೆ, 50 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಒಂದು ಪಂದ್ಯ ಟೈ ಆಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:11 pm, Sat, 1 March 25