ಪಾಕಿಸ್ತಾನ್ ತಂಡದಿಂದ ತ್ರಿಮೂರ್ತಿಗಳಿಗೆ ಗೇಟ್ ಪಾಸ್..!
Pakistan vs New Zealand: ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಣ ಸರಣಿಯು ಮಾರ್ಚ್ 16 ರಿಂದ ಶುರುವಾಗಲಿದೆ. ನ್ಯೂಝಿಲೆಂಡ್ನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಪಾಕಿಸ್ತಾನ್ ತಂಡ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ. ಈ ಸರಣಿಗೂ ಮುನ್ನ ಪಾಕ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಪಿಸಿಬಿ ನಿರ್ಧರಿಸಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ ಪಾಕಿಸ್ತಾನ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಪಾಕ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಈ ಮೇಜರ್ ಸರ್ಜರಿಯಿಂದಾಗಿ ಬಾಬರ್ ಆಝಂ, ಶಾಹೀನ್ ಶಾ ಅಫ್ರಿದಿ ಹಾಗೂ ನಸೀಮ್ ಶಾ ತಂಡದಿಂದ ಹೊರಬೀಳಲಿದ್ದಾರೆ ಎಂದು ವರದಿಯಾಗಿದೆ. ಈ ಮೂವರು ಆಟಗಾರರು ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನ್ ತಂಡದ ಖಾಯಂ ಸದಸ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದಾಗ್ಯೂ ತ್ರಿಮೂರ್ತಿಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಹೀಗಾಗಿ ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಬಾಬರ್, ಶಾಹೀನ್ ಹಾಗೂ ನಸೀಮ್ ಅವರನ್ನು ಕೈ ಬಿಡಲು ಪಿಸಿಬಿ ಅಧಿಕಾರಿಗಳು ಚರ್ಚಿಸಿದ್ದಾರೆ.
ಇನ್ನು ಈ ಮೂವರೊಂದಿಗೆ ಮತ್ತೋರ್ವ ವೇಗಿ ಹ್ಯಾರಿಸ್ ರೌಫ್ ಹೆಸರು ಕೂಡ ಕಾಣಿಸಿಕೊಂಡಿದೆ. ಇದಾಗ್ಯೂ ಅವರನ್ನು ತಂಡದಿಂದ ಕೈ ಬಿಡಲಿದ್ದಾರಾ ಅಥವಾ ಉಳಿಸಿಕೊಳ್ಳಲಿದ್ದಾರಾ ಎಂಬುದರ ಬಗ್ಗೆ ಸ್ಪಷ್ಟತೆ ಹೊರಬಿದ್ದಿಲ್ಲ. ಹೀಗಾಗಿ ರೌಫ್ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ ನಡುವಣ ಸರಣಿಯು ಮಾರ್ಚ್ 16 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ 5 ಟಿ20 ಪಂದ್ಯ ಹಾಗೂ 3 ಏಕದಿನ ಪಂದ್ಯಗಳನ್ನಾಡಲಾಗುತ್ತದೆ.
ಇತ್ತ ತವರಿನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೀನಾಯವಾಗಿ ಸೋತಿರುವ ಪಾಕಿಸ್ತಾನ್ ತಂಡಕ್ಕೆ ಮುಂದಿನ ಸರಣಿ ಬಹಳ ಮುಖ್ಯವೆನಿಸಿಕೊಂಡಿದೆ. ಹೀಗಾಗಿ ನ್ಯೂಝಿಲೆಂಡ್ ಪ್ರವಾಸಕ್ಕೂ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ತರಲು ಪಿಸಿಬಿ ನಿರ್ಧರಿಸಿದ್ದು, ಅದರಂತೆ ಬಾಬರ್ ಆಝಂ, ಶಾಹೀನ್ ಶಾ ಅಫ್ರಿದಿ ಹಾಗೂ ನಸೀಮ್ ಶಾಗೆ ಪಾಕಿಸ್ತಾನ್ ತಂಡದಿಂದ ಗೇಟ್ ಪಾಸ್ ಸಿಗುವುದು ಖಚಿತ ಎನ್ನಬಹುದು.
ಇದನ್ನೂ ಓದಿ: ICC ODI Rankings: ಟಾಪ್-10 ನಲ್ಲಿ ಟೀಮ್ ಇಂಡಿಯಾದ ನಾಲ್ವರು ಬ್ಯಾಟರ್ಗಳು
ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದ ಪಾಕಿಸ್ತಾನ್ ತಂಡ: ಮೊಹಮ್ಮದ್ ರಿಝ್ವಾನ್ (ನಾಯಕ), ಬಾಬರ್ ಆಝಂ, ಫಖರ್ ಝಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಶ್ದಿಲ್ ಶಾ, ಸಲ್ಮಾನ್ ಅಲಿ ಅಘಾ, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಶಾಹಿನ್ ಶಾ ಅಫ್ರಿದಿ, ಇಮಾಮ್ ಉಲ್ ಹಕ್.
ಪಾಕಿಸ್ತಾನದ ಈ ಹದಿನಾರು ಆಟಗಾರರಲ್ಲಿ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಎಂಬುದೇ ಈಗ ಕುತೂಹಲ.




