SA vs ENG: ಟ್ರೋಫಿ ಗೆಲ್ಲಲು ಬಂದು ಒಂದು ಪಂದ್ಯವನ್ನು ಗೆಲ್ಲದೆ ಹೊರಬಿದ್ದ ಇಂಗ್ಲೆಂಡ್
Champions Trophy 2025: ಇಂಗ್ಲೆಂಡ್ ತಂಡವು ಭಾರತದ ವಿರುದ್ಧದ ಏಕದಿನ ಸರಣಿಯನ್ನು ಸೋತ ನಂತರ, ಬೆನ್ ಡಕೆಟ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸುವುದಾಗಿ ಹೇಳಿದ್ದರು. ಆದರೆ, ಇಂಗ್ಲೆಂಡ್ ಗುಂಪು ಹಂತದಲ್ಲಿಯೇ ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್‌ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಅಲ್ಲದೆ ಈ ಟೂರ್ನಿಯಲ್ಲಿ ಇಂಗ್ಲೆಂಡ್‌ಗೆ 1 ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

‘ನಾವು ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸೋತಿರಬಹುದು ಆದರೆ, ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿಯೇ ತೀರುತ್ತೇವೆ’. ಈ ಮಾತನ್ನು ಬೇರೆ ಯಾರು ಹೇಳಿದಲ್ಲ. ಇಂಗ್ಲೆಂಡ್‌ನ ಸ್ಫೋಟಕ ಆರಂಭಿಕ ಆಟಗಾರ ಬೆನ್ ಡಕೆಟ್. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಸೋಲಿಸುವುದಿರಲಿ, ಆಂಗ್ಲ ಪಡೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಬಲಿಷ್ಠ ಪಡೆ ಕಟ್ಟಿಕೊಂಡು ಚಾಂಪಿಯನ್ಸ್ ಟ್ರೋಫಿಗೆ ಕಾಲಿಟ್ಟಿದ್ದ ನಾಯಕ ಜೋಸ್ ಬಟ್ಲರ್, ಈ ಟೂರ್ನಿ ಮುಗಿಯುವುದಕ್ಕೂ ಮುನ್ನವೇ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಇತ್ತ ನಾಯಕನಾಗಿ ಕೊನೆಯ ಪಂದ್ಯವನ್ನಾದರೂ ಗೆಲ್ಲುವ ಇರಾದೆ ಇಟ್ಟುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ದಕ್ಷಿಣ ಆಫ್ರಿಕಾ ಅವಕಾಶ ಮಾಡಿಕೊಡಲಿಲ್ಲ.
ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಏಕಪಕ್ಷೀಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಆದಾಗ್ಯೂ, ಪಂದ್ಯ ಮುಗಿಯುವ ಮೊದಲೇ ದಕ್ಷಿಣ ಆಫ್ರಿಕಾ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಈ ಗೆಲುವಿನೊಂದಿಗೆ ಅದು ತನ್ನ ಗ್ರೂಪ್ ಬಿ ನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿತು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡ ಮಾರ್ಚ್ 5 ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯವನ್ನು ಆಡಲಿದೆ.
ಪಂದ್ಯ ಮುಗಿಯುವ ಮೊದಲೇ ಅರ್ಹತೆ
ಮಾರ್ಚ್ 1 ರ ಶನಿವಾರ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ಕೇವಲ ಔಪಚಾರಿಕವಾಗಿತ್ತು. ಏಕೆಂದರೆ ದಕ್ಷಿಣ ಆಫ್ರಿಕಾದ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತವಾಗಿತ್ತು. ಅಫ್ಘಾನಿಸ್ತಾನ ಸೆಮಿಫೈನಲ್ ತಲುಪಲು ಇಂಗ್ಲೆಂಡ್‌ಗೆ ದಕ್ಷಿಣ ಆಫ್ರಿಕಾ ವಿರುದ್ಧ ದೊಡ್ಡ ಗೆಲುವು ಅಗತ್ಯವಿತ್ತು. ಆದರೆ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ತನ್ನ ಬೌಲಿಂಗ್‌ನಿಂದ ಈ ಸಾಧ್ಯತೆಯನ್ನು ಕೊನೆಗೊಳಿಸಿ ಸೆಮಿಫೈನಲ್‌ಗೆ ಟಿಕೆಟ್ ಖಚಿತಪಡಿಸಿಕೊಂಡಿತು.
ಇಂಗ್ಲೆಂಡ್ ಬ್ಯಾಟಿಂಗ್ ವಿಫಲ
ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದ ಇಂಗ್ಲೆಂಡ್ ತಂಡಕ್ಕೆ ತನ್ನ ಗೌರವ ಉಳಿಸಿಕೊಳ್ಳಲು ಒಂದೇ ಒಂದು ಅವಕಾಶವಿತ್ತು. ಆದರೆ ದಕ್ಷಿಣ ಆಫ್ರಿಕಾ ಬೌಲರ್ಗಳು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಕೇವಲ 179 ರನ್‌ಗಳಿಗೆ ಆಲೌಟ್ ಆಯಿತು. ಎಡಗೈ ವೇಗಿ ಮಾರ್ಕೊ ಯಾನ್ಸನ್ 3 ವಿಕೆಟ್ ಪಡೆದರೆ, ವಿಯಾನ್ ಮುಲ್ಡರ್ ಕೂಡ 3 ವಿಕೆಟ್ ಪಡೆದರು. ಇಂಗ್ಲೆಂಡ್ ಪರ ಜೋ ರೂಟ್ ಅತ್ಯಧಿಕ 37 ರನ್ ಗಳಿಸಿದರು.
ಕ್ಲಾಸೆನ್-ಡುಸೇನ್ ಗೆಲುವಿನ ಜೊತೆಯಾಟ
ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಮೂರನೇ ಓವರ್‌ನಲ್ಲಿ ಖಾತೆ ತೆರೆಯದೆಯೇ ಔಟಾದರು. ಮತ್ತೊಬ್ಬ ಆರಂಭಿಕ ಆಟಗಾರ ರಯಾನ್ ರಿಕಲ್ಟನ್ ಕೂಡ 50 ರನ್ ಗಳಿಸುವ ಮೊದಲೇ ಔಟಾದರು. ಆದರೆ ಆ ಬಳಿಕ ಜೊತೆಯಾದ ಹೆನ್ರಿಕ್ ಕ್ಲಾಸೆನ್ (64) ಮತ್ತು ರಾಸ್ಸಿ ವ್ಯಾನ್ ಡೆರ್ ಡುಸೇನ್ (72) ನೂರು ರನ್‌ಗಳ ಜೊತೆಯಾಟ ನಡೆಸಿ ಇಂಗ್ಲೆಂಡ್‌ನ ಸೋಲನ್ನು ದೃಢಪಡಿಸಿದರು. ಇದೇ ವೇಳೆ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅರ್ಧಶತಕವನ್ನು ಪೂರೈಸಿದರು. ಕ್ಲಾಸೆನ್ ಔಟಾದರಾದರೂ, ಡುಸೇನ್ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:28 pm, Sat, 1 March 25
