‘ಕ್ರಿಪ್ಟೋ ಕರೆನ್ಸಿಗಿಂತ ವೇಗವಾಗಿ ಕುಸಿಯುತ್ತಿದೆ’; ರೋಹಿತ್ ಪಡೆಗೆ ಮಾತಿನ ಚಡಿ ಏಟು ಕೊಟ್ಟ ಸೆಹ್ವಾಗ್

| Updated By: ಪೃಥ್ವಿಶಂಕರ

Updated on: Dec 08, 2022 | 12:52 PM

Virender Sehwag: ವಾಸ್ತವವಾಗಿ, ಟೀಂ ಇಂಡಿಯಾದ ಈ ಬಾಂಗ್ಲಾದೇಶ ಪ್ರವಾಸವನ್ನು ಮುಂದಿನ ವರ್ಷ ಭಾರತದಲ್ಲಿಯೇ ನಡೆಯುವ ಏಕದಿನ ವಿಶ್ವಕಪ್​ನ ತಯಾರಿ ಅಂತಲೇ ಬಿಂಬಿಸಲಾಗಿತ್ತು.

‘ಕ್ರಿಪ್ಟೋ ಕರೆನ್ಸಿಗಿಂತ ವೇಗವಾಗಿ ಕುಸಿಯುತ್ತಿದೆ’; ರೋಹಿತ್ ಪಡೆಗೆ ಮಾತಿನ ಚಡಿ ಏಟು ಕೊಟ್ಟ ಸೆಹ್ವಾಗ್
ಪ್ರಾತಿನಿಧಿಕ ಚಿತ್ರ
Follow us on

ಟಿ20 ವಿಶ್ವಕಪ್ (T20 World Cup) ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್​ಗಳ ಹೀನಾಯ ಸೋಲು ಕಂಡಿದ್ದೆ ಬಂತು. ಅಂದಿನಿಂದ ಟೀಂ ಇಂಡಿಯಾಕ್ಕೆ (Team India) ಯಾವುದು ಸರಿಯಾಗಿ ಕೈಹಿಡಿಯುತ್ತಿಲ್ಲ. ಅದೃಷ್ಟವೆಂಬಂತೆ ಕಿವೀಸ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿದ್ದ ಭಾರತಕ್ಕೆ ಇಡೀ ಸರಣಿಯೇ ಕೈವಶವಾಯಿತು. ಆ ನಂತರ ನಡೆದ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿದ್ದ ಭಾರತ, ಅಲ್ಲಿಂದ ಸೀದಾ ಬಾಂಗ್ಲಾ ಪ್ರವಾಸಕ್ಕೆ ಪ್ರಯಾಣ ಬೆಳೆಸಿತ್ತು. ಭಾರತಕ್ಕೆ ಹೋಲಿಸಿದರೆ, ಬಾಂಗ್ಲಾ ದುರ್ಬಲ ತಂಡವಾಗಿದ್ದರಿಂದ ಇಲ್ಲಿ ರೋಹಿತ್ ಪಡೆ ಸರಣಿ ಗೆಲ್ಲುವುದು ಪಕ್ಕಾ ಎಂದುಕೊಳ್ಳಲಾಗಿತ್ತು. ಆದರೆ ಬಾಂಗ್ಲಾ ಪಡೆ ರೋಹಿತ್ (Rohit Sharma) ತಂಡಕ್ಕೆ ಸರಣಿ ಸೋಲಿನ ಶಾಕ್ ನೀಡಿದೆ. ಈ ಎರಡೂ ಪಂದ್ಯಗಳಲ್ಲಿ ತಂಡದ ಸೋಲಿಗೆ ರೋಹಿತ್ ಹುಡುಗರು ಮಾಡಿದ ಅನೇಕ ತಪ್ಪುಗಳೇ ಕಾರಣವಾದವು. ಅಲ್ಲದೆ ಬ್ಯಾಟಿಂಗ್ ವಿಭಾಗದ ವೈಫಲ್ಯವೂ ಇಲ್ಲಿ ಮುನ್ನೆಲೆಗೆ ಬಂದಿತ್ತು. ಈಗ ತಂಡದ ಪ್ರದರ್ಶನದ ಬಗ್ಗೆ ಮಾಜಿ ಆಟಗಾರರು ಆಕ್ರೋಶಗೊಂಡಿದ್ದು, ತಂಡದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ (Virender Sehwag) ರೋಹಿತ್ ಪಡೆಗೆ ಮಾತಿನ ಚಡಿ ಏಟು ನೀಡಿದ್ದಾರೆ.

ಟೀಂ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡ ಸೆಹ್ವಾಗ್

ಮೊದಲ ಏಕದಿನ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಕೈಚೆಲ್ಲಿದ್ದ ಭಾರತ ಕೊನೆಯ ಹಂತದಲ್ಲಿ ಸೋಲನುಭವಿಸಿತ್ತು. ಎರಡನೇ ಪಂದ್ಯದಲ್ಲೂ ಗೆಲ್ಲುವ ಅವಕಾಶವನ್ನು ಸ್ವತಃ ನಾಯಕ ರೋಹಿತ್ ಶರ್ಮಾ ಅವರೇ ಕೈಚೆಲ್ಲಿದರು. ಹೀಗಾಗಿ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾದ ಪ್ರದರ್ಶನದ ಮೇಲೆ ಗರಂ ಆಗಿರುವ ಟೀಂ ಇಂಡಿಯಾದ ಮಾಜಿ ಆಟಗಾರರು ರೋಹಿತ್ ಪಡೆ ಮೇಲೆ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಆದರೆ ಸ್ವಲ್ಪ ಭಿನ್ನವಾಗಿ ಟೀಂ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿರುವ ಸಿಡಿಲಮರಿ ಸೆಹ್ವಾಗ್ ತಮ್ಮ ಟ್ಟಿಟರ್ ಖಾತೆಯಲ್ಲಿ, ‘‘ನಮ್ಮ ತಂಡದ ಪ್ರದರ್ಶನ ಕ್ರಿಪ್ಟೋ ಕರೆನ್ಸಿಗಿಂತ ವೇಗವಾಗಿ ಕುಸಿಯುತ್ತಿದೆ. ಟೀಂ ಇಂಡಿಯಾ ಎಚ್ಚೆತ್ತುಕೊಳ್ಳಬೇಕಿದೆ, ಮೈಗೊಡವಿ ನಿಲ್ಲಬೇಕಿದೆ’’ (ಕ್ರಿಪ್ಟೋಸ್ ಸೆ ಭೀ ತೇಜ್ ಗಿರ್ ರಹೀ ಹೈ ಅಪ್ನಿ ಪರ್ಫಾರ್ಮೆನ್ಸ್ ಯಾರ್) ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಸೋಲಿನ ನಡುವೆಯೂ ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿ- ರಾಹುಲ್ ದಾಖಲೆ ಮುರಿದ ಶ್ರೇಯಸ್ ಅಯ್ಯರ್..!

ಬ್ಯಾಟಿಂಗ್ ವೈಫಲ್ಯ

ವಾಸ್ತವವಾಗಿ, ಟೀಂ ಇಂಡಿಯಾದ ಈ ಬಾಂಗ್ಲಾದೇಶ ಪ್ರವಾಸವನ್ನು ಮುಂದಿನ ವರ್ಷ ಭಾರತದಲ್ಲಿಯೇ ನಡೆಯುವ ಏಕದಿನ ವಿಶ್ವಕಪ್​ನ ತಯಾರಿ ಅಂತಲೇ ಬಿಂಬಿಸಲಾಗಿತ್ತು. ಹೀಗಾಗಿ ಈ ಏಕದಿನ ಸರಣಿಯಲ್ಲಿ ಯಾವ ಆಟಗಾರನಿಗೆ ಯಾವ ಕ್ರಮಾಂಕ ನೀಡಬೇಕು ಎಂಬುದನ್ನು ಕಂಡುಕೊಳ್ಳುವ ಇರಾದೆಯಲ್ಲಿ ಟೀಂ ಇಂಡಿಯಾ ಇತ್ತು. ಆದರೆ ಇಡೀ ಸರಣಿಯಲ್ಲಿ ಶ್ರೇಯಸ್ ಒಬ್ಬರನ್ನು ಬಿಟ್ಟರೆ ಮಿಕ್ಕ ಇನ್ನ್ಯಾವ ಆಟಗಾರನಿಗೂ ತನಗೆ ನೀಡಿದ ಜವಬ್ದಾರಿಯನ್ನು ಪರಿಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆಟಗಾರರ ತೀರ ಕಳಪೆ ಪ್ರದರ್ಶನ ಮುಂದಿನ ವರ್ಷ ಏಕದಿನ ವಿಶ್ವಕಪ್ ಆಯೋಜನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಬಿಸಿಸಿಐಗೆ ದೊಡ್ಡ ತಲೆನೋವು ತಂದೊಡ್ಡಿದೆ.

ಪಂದ್ಯ ಹೀಗಿತ್ತು

ಇನ್ನು ಈ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡ ಮೆಹದಿ ಹಸನ್​ರ ಭರ್ಜರಿ ಅಜೇಯ ಶತಕ ಹಾಗೂ ಮಹಮ್ಮದುಲ್ಲಾ ಅವರ ಅರ್ಧಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 271 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಹಾಗೂ ನಾಯಕ ರೋಹಿತ್ ಶರ್ಮಾ ಬಿಟ್ಟರೆ ಮತ್ತ್ತ್ಯಾರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.

ಅಂತಿಮವಾಗಿ ತಂಡದ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ರೋಹಿತ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರಾದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ ಟೀಂ ಇಂಡಿಯಾ ಪೂರ್ಣ 50 ಓವರ್​ಗಳನ್ನು ಆಡಿ 9 ವಿಕೆಟ್ ಕಳೆದುಕೊಂಡು 266 ರನ್ ಗಳಿಸಲಷ್ಟೇ ಶಕ್ತವಾಯಿತು. 5 ರನ್​ಗಳ ಗೆಲುವಿನೊಂದಿಗೆ ಪಂದ್ಯ ಗೆದ್ದ ಬಾಂಗ್ಲಾ ತಂಡ ಸರಣಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Thu, 8 December 22