ಕ್ರಿಕೆಟ್ ಅಂಗಳದಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಹಲವು ದಾಖಲೆಗಳು ನಿರ್ಮಾಣವಾಗಿರುವುದನ್ನು ನೀವು ನೋಡುತ್ತೀರಿ. ಆದರೆ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನೇಪಾಳ ತಂಡದ ನಾಯಕ ಸಂದೀಪ್ ಲಾಮಿಚಾನೆ ಕೆಟ್ಟ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ನೇಪಾಳ ವಿರುದ್ದ ನಡೆದ 4ನೇ ಟಿ20 ಪಂದ್ಯದಲ್ಲಿ ಕೀನ್ಯಾ ತಂಡವು ಸಂದೀಪ್ ಲಾಮಿಚಾನೆ ಸ್ಪಿನ್ ಮೋಡಿಗೆ ತತ್ತರಿಸಿತು. 4 ಓವರ್ಗಳಲ್ಲಿ ಕೇವಲ 9 ರನ್ ನೀಡಿ 5 ವಿಕೆಟ್ ಕಬಳಿಸಿ ನೇಪಾಳ ನಾಯಕ ಮಿಂಚಿದ್ದರು. ಪರಿಣಾಮ ಕೀನ್ಯಾ ತಂಡವು ಕೇವಲ 101 ರನ್ಗಳಿಗೆ ಆಲೌಟ್ ಆಯಿತು.
ಈ ಸುಲಭ ಮೊತ್ತವನ್ನು ಬೆನ್ನತ್ತಿದ ನೇಪಾಳ ತಂಡವು ಬ್ಯಾಟಿಂಗ್ ವೈಫಲ್ಯ ಎದುರಿಸಿತು. ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 94 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದರೊಂದಿಗೆ ಕೀನ್ಯಾ ತಂಡವು 7 ರನ್ಗಳ ರೋಚಕ ಜಯ ಸಾಧಿಸಿತು.
ಈ ಸೋಲಿನೊಂದಿಗೆ ಟಿ20 ಕ್ರಿಕೆಟ್ನ ಕೆಟ್ಟ ದಾಖಲೆಯೊಂದು ಸಂದೀಪ್ ಲಾಮಿಚಾನೆ ಪಾಲಾಗಿದೆ.
ಅಂದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ತಂಡದ ನಾಯಕರೊಬ್ಬರು 5 ವಿಕೆಟ್ ಪಡೆದಿದ್ದು ಇದೇ ಮೊದಲು. ಆದರೆ ಅದೇ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಐದು ವಿಕೆಟ್ ಪಡೆದು ಸೋಲುಂಡ ಮೊದಲ ನಾಯಕ ಎಂಬ ಕೆಟ್ಟ ದಾಖಲೆ ಸಂದೀಪ್ ಲಾಮಿಚಾನೆ ಪಾಲಾಯಿತು.
ಟಿ20 ಕ್ರಿಕೆಟ್ನಲ್ಲಿ ಯಾವುದೇ ನಾಯಕ 5 ವಿಕೆಟ್ ಪಡೆದು ಸೋಲಿನ ರುಚಿ ನೋಡಿರಲಿಲ್ಲ. ಇದೀಗ ನೇಪಾಳ ತಂಡದ ನಾಯಕ ಸಂದೀಪ್ ಲಾಮಿಚಾನೆ ಅದ್ಭುತ ಪ್ರದರ್ಶನ ನೀಡಿಯೂ ಹೀನಾಯ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.