Sourav Ganguly: ನಾನು ಕೇವಲ ನಾಯಕನಾಗಿರಲಿಲ್ಲ, ಲೀಡರ್ ಆಗಿದ್ದೆ..!

| Updated By: ಝಾಹಿರ್ ಯೂಸುಫ್

Updated on: Jun 12, 2022 | 4:52 PM

Sourav Ganguly: ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 146 ಏಕದಿನ ಪಂದ್ಯಗಳನ್ನಾಡಿದೆ. ಈ ವೇಳೆ ಭಾರತ ತಂಡವು 76 ಪಂದ್ಯಗಳಲ್ಲಿ ಗೆದ್ದರೆ, 65 ಮ್ಯಾಚ್​​ನಲ್ಲಿ ಸೋತಿದೆ.

Sourav Ganguly: ನಾನು ಕೇವಲ ನಾಯಕನಾಗಿರಲಿಲ್ಲ, ಲೀಡರ್ ಆಗಿದ್ದೆ..!
Team India Legends
Follow us on

ಟೀಮ್ ಇಂಡಿಯಾದ ಯಶಸ್ವಿ ನಾಯಕರುಗಳಲ್ಲಿ ಸೌರವ್ ಗಂಗೂಲಿ (Sourav Ganguly) ಕೂಡ ಒಬ್ಬರು. ಮ್ಯಾಚ್ ಫಿಕ್ಸಿಂಗ್ ಕಾರಣದಿಂದಾಗಿ ಅಂಧಪತನದತ್ತ ಸಾಗಿದ್ದ ಭಾರತ ಕ್ರಿಕೆಟ್​ಗೆ ಪುನಶ್ಚೇತನ ನೀಡಿದ್ದೇ ಗಂಗೂಲಿ ಎಂದರೆ ತಪ್ಪಾಗಲಾರದು. ಇದೀಗ ತಮ್ಮ ನಾಯಕತ್ವದ ಬಗ್ಗೆ ಖುದ್ದು ದಾದಾ ಮಾತನಾಡಿದ್ದಾರೆ. ಈ ವೇಳೆ ಟೀಮ್ ಇಂಡಿಯಾ ಕೆಲ ಶ್ರೇಷ್ಠ ಆಟಗಾರರನ್ನೂ ಕೂಡ ನೆನಪಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ವೃತ್ತಿ ಜೀವನದಲ್ಲಿ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್ ಮತ್ತು ರಾಹುಲ್ ದ್ರಾವಿಡ್ ಅವರೊಂದಿಗೆ ಸ್ಪರ್ಧಿಸುವ ಬಗ್ಗೆ ಯೋಚಿಸಿರಲಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಸೌರವ್ ಗಂಗೂಲಿ ನಾಯಕತ್ವದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಈ ಆಟಗಾರರು ಗಂಗೂಲಿ ಅವರ ನಾಯಕತ್ವದಲ್ಲಿ ಯಶಸ್ವಿಯಾಗಿದ್ದರು. ಅದೇ ಸಮಯದಲ್ಲಿ, ಮೊಹಮ್ಮದ್ ಅಜರುದ್ದೀನ್ ಹಲವು ವರ್ಷಗಳ ಕಾಲ ಭಾರತ ತಂಡದ ನಾಯಕರಾಗಿದ್ದರು. ಅಜರ್ ನಾಯಕತ್ವದಲ್ಲಿ ಗಂಗೂಲಿ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದ್ದರು.

ಈ ಬಗ್ಗೆ ಮಾತನಾಡಿರುವ ಗಂಗೂಲಿ, ನಾಯಕನಿಗೂ ಲೀಡರ್​ಗೂ ಬಹಳ ವ್ಯತ್ಯಾಸವಿದೆ. ಒಬ್ಬ ನಾಯಕನಾಗಿ, ನಿಮ್ಮ ನಾಯಕತ್ವದಲ್ಲಿ ಹಿರಿಯರು ಮತ್ತು ಯುವಕರು ಹೇಗೆ ನಂಬಿಕೆ ಇಡುತ್ತೀರಿ ಎಂಬುದು ತುಂಬಾ ಸವಾಲಿನ ಕೆಲಸವಾಗಿದೆ. ನನಗೆ ನಾಯಕತ್ವ ಎಂದರೆ ಮೈದಾನದಲ್ಲಿ ತಂಡವನ್ನು ಮುನ್ನಡೆಸುವುದು ಮತ್ತು ಲೀಡರ್​ ಎಂದರೆ ತಂಡವನ್ನು ಕಟ್ಟುವುದು ಎಂದು ನಂಬಿದ್ದೆ. ಹಾಗಾಗಿ ನಾನು ಸಚಿನ್, ಅಜರ್ ಅಥವಾ ದ್ರಾವಿಡ್ ಯಾರೊಂದಿಗೆ ಕೆಲಸ ಮಾಡಿದರೂ ಸ್ಪರ್ಧಿಸಲಿಲ್ಲ. ಒಬ್ಬ ಲೀಡರ್​ನಂತೆ, ನಾನು ಅವರೊಂದಿಗೆ ನನ್ನ ಸಂಬಂಧವನ್ನು ಬೆಳೆಸಿದೆ. ಅವರ ನಡುವೆ ಜವಾಬ್ದಾರಿಗಳನ್ನು ಹಂಚಿಕೊಂಡಿದ್ದೇನೆ ಎಂದು ಗಂಗೂಲಿ ತಿಳಿಸಿದರು.

ಇದನ್ನೂ ಓದಿ
KL Rahul: ಗಾಯ ಗಂಭೀರವಲ್ಲ..ಜಿಮ್​ನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್..!
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡದಲ್ಲಿ ಅಭೂತಪೂರ್ವ ಬದಲಾವಣೆಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗಂಗೂಲಿ, ನಾನು ಕಾಲಕಾಲಕ್ಕೆ ಕ್ರಿಕೆಟ್ ಬದಲಾವಣೆಯನ್ನು ನೋಡಿದ್ದೇನೆ. ಆ ಕಾಲದಲ್ಲಿ ನಾನಾ ರೀತಿಯ ಮನಸ್ಥಿತಿಗಳಿತ್ತು. ತಂಡದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಎಂದು ಮೊದಲಿನಿಂದಲೂ ತಿಳಿದಿದ್ದೆ. ಆದರೆ, ಪ್ರತಿಭೆಗೆ ಮಾನ್ಯತೆ ಸಿಕ್ಕಾಗ ಮಾತ್ರ ಉಪಯೋಗಕ್ಕೆ ಬರಲು ಸಾಧ್ಯ. ನನ್ನ ನಾಯಕತ್ವದಲ್ಲಿ ಅನೇಕ ಶ್ರೇಷ್ಠ ಆಟಗಾರರು ಆಡಿದರು. ಅವರು ಯಾವುದೇ ಸಮಯದಲ್ಲಿ ನಾಯಕರಾಗಬಹುದು. ಆ ಆಟಗಾರರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 146 ಏಕದಿನ ಪಂದ್ಯಗಳನ್ನಾಡಿದೆ. ಈ ವೇಳೆ ಭಾರತ ತಂಡವು 76 ಪಂದ್ಯಗಳಲ್ಲಿ ಗೆದ್ದರೆ, 65 ಮ್ಯಾಚ್​​ನಲ್ಲಿ ಸೋತಿದೆ. ಇನ್ನು ಗಂಗೂಲಿ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡವು 49 ಟೆಸ್ಟ್ ಪಂದ್ಯವಾಡಿದ್ದು, ಈ ವೇಳೆ 21 ಗೆಲುವು, 15 ಡ್ರಾ ಹಾಗೂ 13 ಪಂದ್ಯಗಳಲ್ಲಿ ಸೋತಿದೆ. ಇದೀಗ ಬಿಸಿಸಿಐ ಅಧ್ಯಕ್ಷರಾಗಿರುವ ಗಂಗೂಲಿ ಭಾರತೀಯ ಕ್ರಿಕೆಟ್​ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಇರಾದೆಯಲ್ಲಿದ್ದಾರೆ.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:50 pm, Sun, 12 June 22