ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನಾಡದ ಕ್ರಿಕೆಟಿಗನಿಗೆ ಬಿಸಿಸಿಐ ಅಧ್ಯಕ್ಷ ಹುದ್ದೆ

New BCCI President Mithun Manhas: ಬಿಸಿಸಿಐನ ನೂತನ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ಅವರನ್ನು ನೇಮಕ ಮಾಡಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಆಡದ ಮೊದಲ ಆಟಗಾರರಾಗಿ, ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯ ಚುಕ್ಕಾಣಿ ಹಿಡಿದಿದ್ದಾರೆ. ಇವರಿಗೆ ಕ್ರಿಕೆಟ್ ಆಡಳಿತದಲ್ಲಿ ಅಪಾರ ಅನುಭವವಿದೆ; ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್, ದುಲೀಪ್ ಟ್ರೋಫಿ ಹಾಗೂ ಐಪಿಎಲ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಇವರು ಸುಮಾರು 15,000 ರನ್‌ಗಳನ್ನು ಗಳಿಸಿದ್ದಾರೆ.

ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನಾಡದ ಕ್ರಿಕೆಟಿಗನಿಗೆ ಬಿಸಿಸಿಐ ಅಧ್ಯಕ್ಷ ಹುದ್ದೆ
Bcci

Updated on: Sep 28, 2025 | 4:31 PM

ಕ್ರಿಕೆಟ್ ಲೋಕದ ದೊಡ್ಡಣ್ಣ ಬಿಸಿಸಿಐಗೆ (BCCI) ನೂತನ ಅಧ್ಯಕ್ಷರ ನೇಮಕವಾಗಿದೆ. ಜಮ್ಮು ಮತ್ತು ಕಾಶ್ಮೀರ ಮೂಲದ ಮಿಥುನ್ ಮನ್ಹಾಸ್ (Mithun Manhas) ಅವರನ್ನು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಘೋಷಿಸಿದ್ದಾರೆ. ಮಿಥುನ್ ಮನ್ಹಾಸ್ ಅವರು ಬಿಸಿಸಿಐ ಅಧ್ಯಕ್ಷ ಹುದ್ದೆಗೆ ನೇಮಕವಾಗುವುದು ಖಚಿತ ಎಂಬ ಸುದ್ದಿ ಈಗಾಗಲೇ ಹರಿದಾಡುತ್ತಿತ್ತು. ಆದರೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇತ್ತು. ಇದೀಗ ನಿರೀಕ್ಷೆಯಂತೆ ಸೆಪ್ಟೆಂಬರ್ 28 ರಂದು ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಮಿಥುನ್ ಮನ್ಹಾಸ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಮೊದಲ ಅನ್‌ಕ್ಯಾಪ್ಡ್ ಆಟಗಾರ

ಬಿಸಿಸಿಐ ಅಧ್ಯಕ್ಷರಾದ ಮೂರನೇ ಕ್ರಿಕೆಟಿಗ ಮಿಥುನ್ ಮನ್ಹಾಸ್. ಅವರಿಗಿಂತ ಮೊದಲು ಸೌರವ್ ಗಂಗೂಲಿ ಮತ್ತು ರೋಜರ್ ಬಿನ್ನಿ ಈ ಹುದ್ದೆಯಲ್ಲಿದ್ದರು. ಅಚ್ಚರಿಯ ಸಂಗತಿಯೆಂದರೆ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಿಥುನ್ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನಾಡಿಲ್ಲ. ಈ ಮೂಲಕ ಅಂತರರಾಷ್ಟ್ರೀಯ ಪಂದ್ಯವನ್ನಾಡದೆ ಬಿಸಿಸಿಐನ ಚುಕ್ಕಾಣಿ ಹಿಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಮಿಥುನ್ ಪಾಲಾಗಿದೆ.

ಆಡಳಿತದಲ್ಲಿ ಅಪಾರ ಅನುಭವ

ಬಿಸಿಸಿಐನ ಹೊಸ ಅಧ್ಯಕ್ಷರಾದ ಮಿಥುನ್ ಮನ್ಹಾಸ್, ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು, ಅವರು ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯದ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು. ಮಿಥುನ್ ಮನ್ಹಾಸ್ ಐಪಿಎಲ್‌ಗೆ ಸಹ ಕೊಡುಗೆ ನೀಡಿದ್ದಾರೆ, ಅಲ್ಲಿ ಅವರು ಐಪಿಎಲ್ ಫ್ರಾಂಚೈಸಿ ಗುಜರಾತ್ ಟೈಟಾನ್ಸ್‌ನ ಸಹಾಯಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕ್ರಿಕೆಟಿಗನಾಗಿ ಮಿಥುನ್ ಪ್ರದರ್ಶನ

ಮಿಥುನ್ ಮನ್ಹಾಸ್ 157 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, ಇದರಲ್ಲಿ 130 ಲಿಸ್ಟ್ ಎ ಪಂದ್ಯಗಳು ಮತ್ತು 91 ಟಿ20 ಪಂದ್ಯಗಳು ಸೇರಿವೆ. ಎಲ್ಲಾ ಸ್ವರೂಪಗಳಲ್ಲಿ, ಮಿಥುನ್ ಮನ್ಹಾಸ್ ದೇಶೀಯ ಕ್ರಿಕೆಟ್‌ನಲ್ಲಿ ಸುಮಾರು 15,000 ರನ್ ಬಾರಿಸಿದ್ದಾರೆ.

IND vs PAK: ಪಾಕ್ ವಿರುದ್ಧ ಆಡಲು ಟೀಂ ಇಂಡಿಯಾಗೆ ಒತ್ತಡ ಹೇರಿತಾ ಬಿಸಿಸಿಐ? ಸುರೇಶ್ ರೈನಾ ಸ್ಫೋಟಕ ಹೇಳಿಕೆ

ಬಿಸಿಸಿಐನಲ್ಲಿ ಯಾರಿಗೆ ಯಾವ ಹುದ್ದೆ ಸಿಕ್ಕಿದೆ?

ಮಿಥುನ್ ಮನ್ಹಾಸ್ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಅವರ ಜೊತೆಗೆ, ರಾಜೀವ್ ಶುಕ್ಲಾ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ದೇವಜಿತ್ ಸೈಕಿಯಾ ಅವರನ್ನು ಬಿಸಿಸಿಐನ ಹೊಸ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಪ್ರಭತೇಜ್ ಸಿಂಗ್ ಭಾಟಿಯಾ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ಮತ್ತು ಎ. ರಘುರಾಮ್ ಭಟ್ ಅವರನ್ನು ಖಜಾಂಚಿಯಾಗಿ ನೇಮಿಸಲಾಗಿದೆ. ಇದಲ್ಲದೆ, ಅರುಣ್ ಧುಮಾಲ್ ಅವರನ್ನು ಐಪಿಎಲ್ ಅಧ್ಯಕ್ಷರನ್ನಾಗಿ ಮತ್ತೆ ನೇಮಿಸಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Sun, 28 September 25