Ross Tailor Retires: ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಪಡೆಯವುದಾಗಿ ಘೋಷಣೆ ಮಾಡಿದ ರಾಸ್ ಟೇಲರ್

| Updated By: Vinay Bhat

Updated on: Dec 30, 2021 | 10:26 AM

ತಮ್ಮ ನಿವೃತ್ತಿಯ ನಿರ್ಧಾರದ ಬಗ್ಗೆ ರಾಸ್ ಟೇಲರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಇದೊಂದು ಅದ್ಭುತವಾದ ಪ್ರಯಾಣವಾಗಿತ್ತು. ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು ಮತ್ತು ಈ ಸಮಯವು ನನಗೆ ಸರಿಯಾಗಿದೆ ಎಂದು ಟೇಲರ್ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ.

Ross Tailor Retires: ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಪಡೆಯವುದಾಗಿ ಘೋಷಣೆ ಮಾಡಿದ ರಾಸ್ ಟೇಲರ್
Ross Taylor
Follow us on

ಬರೋಬ್ಬರಿ 15 ವರ್ಷಗಳ ಸುದೀರ್ಘಾವಧಿಯ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಲು ನ್ಯೂಜಿಲೆಂಡ್ ತಂಡದ ಖ್ಯಾತ ಬ್ಯಾಟರ್ ರಾಸ್ ಟೇಲರ್ (Ross Taylor) ನಿರ್ಧರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಸರಣಿ ಬಳಿಕ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ. ಈ ಪಂದ್ಯ ಟೇಲರ್ ಅವರ 112ನೇ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವಾಗಿರಲಿದ್ದು ನ್ಯೂಜಿಲೆಂಡ್ ತಂಡದ (New Zealand Cricket Team) ಪರ ಅತಿ ಹೆಚ್ಚು ಪಂದ್ಯವನ್ನಾಡಿದ ಡೇನಿಯಲ್ ವೆಟ್ಟೋರಿ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಮುಂದಿನ ವರ್ಷ ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ ವಿರುದ್ಧ ತಮ್ಮ ಕೊನೆಯ ಸೀಮಿತ ಓವರ್‌ಗಳ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದಾರೆ.

ತಮ್ಮ ನಿವೃತ್ತಿಯ ನಿರ್ಧಾರದ ಬಗ್ಗೆ ರಾಸ್ ಟೇಲರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. “ಇದೊಂದು ಅದ್ಭುತವಾದ ಪ್ರಯಾಣವಾಗಿತ್ತು. ನನಗೆ ಸಾಧ್ಯವಿರುವವರೆಗೆ ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು ಮತ್ತು ಈ ಸಮಯವು ನನಗೆ ಸರಿಯಾಗಿದೆ,” ಎಂದು ಟೇಲರ್ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ನ್ಯೂಜಿಲೆಂಡ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಟೇಲರ್ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂದು ಕೋಚ್ ಗ್ಯಾರಿ ಸ್ಟೆಡ್ ಸಹ ತಿಳಿಸಿದ್ದಾರೆ. “ಬ್ಯಾಟ್ಸ್‌ಮನ್ ಆಗಿ ಅವರ ಕೌಶಲ್ಯ ಮತ್ತು ಮನೋಧರ್ಮವು ವಿಶ್ವ ದರ್ಜೆಯದ್ದಾಗಿದೆ. ಇಷ್ಟು ದಿನ ಅಂತಹ ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡಿದ ಅವರ ಸಾಮರ್ಥ್ಯವು ವೃತ್ತಿಪರತೆಯನ್ನು ತೋರಿಸುತ್ತದೆ. ಅವರ ಅನುಭವವು ಹಲವು ಬಾರಿ ತಂಡಕ್ಕೆ ನೆರವಾಗಿದೆ” ಎಂದು ಅವರು ಹೇಳಿದ್ದಾರೆ.

 

ರಾಸ್ ಟೇಲರ್ 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದರು. ಈವರೆಗೆ 233 ಏಕದಿನ ಪಂದ್ಯಗಳನ್ನು ಆಡಿರುವ ಅವರು ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು 2006ರಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಆಡಿದ್ದರು. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಕಿವೀಸ್ ಆಟಗಾರನಾಗಿ ರಾಸ್ ಟೇಲರ್ ನಿವೃತ್ತಿಯನ್ನು ಪಡೆದುಕೊಳ್ಳಲಿದ್ದಾರೆ. ಟೇಲರ್ ಟೆಸ್ಟ್ ಕ್ರಿಕೆಟ್‌ನಲ್ಲಿ 19 ಶತಕಗಳನ್ನು ಸಿಡಿಸಿದ್ದು 7584 ರನ್‌ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 8581 ರನ್‌ಗಳಿಸಿದ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 21 ಶತಕಗಳನ್ನು ಸಿಡಿಸಿರುವುದು ಕೂಡ ನ್ಯೂಜಿಲೆಂಡ್ ಪರ ದಾಖಲೆಯಾಗಿದೆ.

ಈ ವರ್ಷ ಸೌತಾಂಪ್ಟನ್‌ನಲ್ಲಿ ನಡೆದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವು ಭಾರತವನ್ನು ಸೋಲಿಸಿದಾಗ ಟೇಲರ್ ಉತ್ತಮ ಆಟ ಪ್ರದರ್ಶಿಸಿದ್ದರು. ಆದರೆ, ಭಾರತ ವಿರುದ್ಧದ ಇತ್ತೀಚಿನ ಸರಣಿಯಲ್ಲಿ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 11 ರನ್‌ ಗಳಿಸಿದ್ದರು.

Jasprit Bumrah Record: ಬುಮ್ರಾ ಖಾತೆಗೆ ಮತ್ತೊಂದು ದಾಖಲೆ: ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ಮೈಲಿಗಲ್ಲು ತಲುಪಿದ ಜಸ್​ಪ್ರೀತ್

South Africa vs India: ಭಾರತದ ಗೆಲುವಿಗೆ ಎದುರಾಯ್ತು ದೊಡ್ಡ ಕಂಟಕ: ಐದನೇ ದಿನದ ಸೆಂಚುರಿಯನ್ ವಾತಾವರಣ ಹೇಗಿದೆ?

(New Zealand batter Ross Taylor has announced he will retire from international cricket)