15 ವರ್ಷಗಳ ಬಳಿಕ ಬಾಂಗ್ಲಾದೇಶ್ ವಿರುದ್ಧ ಗೆದ್ದ ನ್ಯೂಝಿಲೆಂಡ್

| Updated By: ಝಾಹಿರ್ ಯೂಸುಫ್

Updated on: Sep 23, 2023 | 10:25 PM

New Zealand vs Bangladesh: ನ್ಯೂಝಿಲೆಂಡ್ ತಂಡವು ಬಾಂಗ್ಲಾದೇಶದಲ್ಲಿ ಬಾಂಗ್ಲಾ ವಿರುದ್ಧ ಏಕದಿನ ಪಂದ್ಯ ಗೆದ್ದು ಬರೋಬ್ಬರಿ 15 ವರ್ಷಗಳೇ ಕಳೆದಿತ್ತು. ಅಂದರೆ 2008 ರಲ್ಲಿ ಕಿವೀಸ್ ಪಡೆ ಕೊನೆಯ ಬಾರಿ ಬಾಂಗ್ಲಾದೇಶ್​ನಲ್ಲಿ ಏಕದಿನ ಪಂದ್ಯ ಗೆದ್ದುಕೊಂಡಿತ್ತು.  ಇದರ ನಡುವೆ ಬಾಂಗ್ಲಾದಲ್ಲಿ ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ್ ತಂಡಗಳು 8 ಬಾರಿ ಮುಖಾಮುಖಿಯಾಗಿದೆ.

15 ವರ್ಷಗಳ ಬಳಿಕ ಬಾಂಗ್ಲಾದೇಶ್ ವಿರುದ್ಧ ಗೆದ್ದ ನ್ಯೂಝಿಲೆಂಡ್
New Zealand Team
Image Credit source: AFP/Getty Images
Follow us on

ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಡೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಕಿವೀಸ್ ಪಡೆ 15 ವರ್ಷಗಳ ಬಳಿಕ ಬಾಂಗ್ಲಾ ನೆಲದಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಗೆಲುವಿನ ನಗೆ ಬೀರಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಲಾಕಿ ಫರ್ಗುಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಫಿನ್ ಅಲೆನ್ (12) ಹಾಗೂ ವಿಲ್ ಹಂಗ್ (0) ಮೊದಲ ಪವರ್​ಪ್ಲೇನಲ್ಲೇ ವಿಕೆಟ್ ಒಪ್ಪಿಸಿದ್ದರು. ಇನ್ನು ಚಡ್ ಬೌವ್ಸ್ 14 ರನ್​ಗಳಿಸಿದರೆ, ಹೆನ್ರಿ ನಿಕೋಲ್ಸ್ 49 ರನ್ ಬಾರಿಸಿದರು. ಇದರ ನಡುವೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಬ್ಲಂಡೆಲ್ 66 ಎಸೆತಗಳಲ್ಲಿ 68 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.

ಮತ್ತೊಂದೆಡೆ ಇಶ್ ಸೋಧಿ 35 ರನ್​ಗಳ ಕಾಣಿಕೆ ನೀಡಿದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 49.2 ಓವರ್​ಗಳಲ್ಲಿ 254 ರನ್​ಗಳಿಸಿ ನ್ಯೂಝಿಲೆಂಡ್ ತಂಡವು ಆಲೌಟ್ ಆಯಿತು.

255 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡದ ಪರ ಆರಂಭಿಕ ತಮೀಮ್ ಇಕ್ಬಾಲ್ 58 ಎಸೆತಗಳಲ್ಲಿ 44 ರನ್ ಬಾರಿಸಿದ್ದರು. ಆದರೆ ಉಳಿದ ಬ್ಯಾಟರ್​ಗಳನ್ನು ಬೇಗನೆ ಪೆವಿಲಿಯನ್​ಗೆ ಕಳುಹಿಸುವಲ್ಲಿ ಸ್ಪಿನ್ನರ್ ಇಶ್ ಸೋಧಿ ಯಶಸ್ವಿಯಾದರು.

ಇದಾಗ್ಯೂ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮಹಮದುಲ್ಲಾ 76 ಎಸೆತಗಳಲ್ಲಿ 49 ರನ್ ಬಾರಿಸಿದರು. ಆದರೆ ಇಶ್ ಸೋಧಿ ಸ್ಪಿನ್ ಮೋಡಿಗೆ ಪೆವಿಲಿಯನ್ ಪರೇಡ್ ನಡೆಸಿದ ಬಾಂಗ್ಲಾ ಆಟಗಾರರು 41.1 ಓವರ್​ಗಳಲ್ಲಿ 168 ರನ್​ಗಳಿಗೆ ಆಲೌಟ್ ಆಯಿತು. ನ್ಯೂಝಿಲೆಂಡ್ ಪರ 10 ಓವರ್​ಗಳಲ್ಲಿ 39 ರನ್ ನೀಡಿ ಇಶ್ ಸೋಧಿ 6 ವಿಕೆಟ್ ಕಬಳಿಸಿ ಮಿಂಚಿದರು.

ಕಿವೀಸ್ ಪಡೆಗೆ ಐತಿಹಾಸಿಕ ಗೆಲುವು:

ನ್ಯೂಝಿಲೆಂಡ್ ತಂಡವು ಬಾಂಗ್ಲಾದೇಶದಲ್ಲಿ ಬಾಂಗ್ಲಾ ವಿರುದ್ಧ ಏಕದಿನ ಪಂದ್ಯ ಗೆದ್ದು ಬರೋಬ್ಬರಿ 15 ವರ್ಷಗಳೇ ಕಳೆದಿತ್ತು. ಅಂದರೆ 2008 ರಲ್ಲಿ ಕಿವೀಸ್ ಪಡೆ ಕೊನೆಯ ಬಾರಿ ಬಾಂಗ್ಲಾದೇಶ್​ನಲ್ಲಿ ಏಕದಿನ ಪಂದ್ಯ ಗೆದ್ದುಕೊಂಡಿತ್ತು.  ಇದರ ನಡುವೆ ಬಾಂಗ್ಲಾದಲ್ಲಿ ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ್ ತಂಡಗಳು 8 ಬಾರಿ ಮುಖಾಮುಖಿಯಾಗಿದೆ.

ಆದರೆ ಕಿವೀಸ್ ಪಡೆಗೆ ಒಮ್ಮೆಯೂ ಗೆಲುವು ಮಾತ್ರ ದಕ್ಕಿರಲಿಲ್ಲ. ಇದೀಗ 15 ವರ್ಷಗಳ ಬಳಿಕ ಲಾಕಿ ಫರ್ಗುಸನ್ ನಾಯಕತ್ವದ ನ್ಯೂಝಿಲೆಂಡ್ ತಂಡವು ಬಾಂಗ್ಲಾದೇಶ್ ತಂಡವನ್ನು ತವರಿನಲ್ಲೇ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಹದಿನೈದು ವರ್ಷಗಳ ಸುದೀರ್ಘ ಸೋಲಿನ ಸರಪಳಿಯನ್ನು ಕಳಚುವಲ್ಲಿ ನ್ಯೂಝಿಲೆಂಡ್ ತಂಡ ಯಶಸ್ವಿಯಾಗಿದೆ.

ಬಾಂಗ್ಲಾದೇಶ್ ಪ್ಲೇಯಿಂಗ್ 11: ತಮೀಮ್ ಇಕ್ಬಾಲ್ , ಲಿಟ್ಟನ್ ದಾಸ್ (ನಾಯಕ) , ತಂಜಿದ್ ಹಸನ್ , ಸೌಮ್ಯ ಸರ್ಕಾರ್ , ಮಹಮದುಲ್ಲಾ , ತೌಹಿದ್ ಹೃದೋಯ್ , ಮಹೇದಿ ಹಸನ್ , ಖಲೀದ್ ಅಹ್ಮದ್ , ನಸುಮ್ ಅಹ್ಮದ್ , ಮುಸ್ತಫಿಜುರ್ ರೆಹಮಾನ್ , ಹಸನ್ ಮಹಮೂದ್.

ಇದನ್ನೂ ಓದಿ: ನಂಬರ್ 1: ಕ್ರಿಕೆಟ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ 2ನೇ ತಂಡ ಭಾರತ

ನ್ಯೂಝಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್ , ವಿಲ್ ಯಂಗ್ , ಚಡ್ ಬೋವ್ಸ್ , ಹೆನ್ರಿ ನಿಕೋಲ್ಸ್ , ಟಾಮ್ ಬ್ಲಂಡೆಲ್ ( ವಿಕೆಟ್ ಕೀಪರ್) , ರಚಿನ್ ರವೀಂದ್ರ , ಕೋಲ್ ಮೆಕಾಂಚಿ , ಕೈಲ್ ಜೇಮಿಸನ್ , ಇಶ್ ಸೋಧಿ , ಲಾಕಿ ಫರ್ಗುಸನ್ (ನಾಯಕ) , ಟ್ರೆಂಟ್ ಬೌಲ್ಟ್.

 

Published On - 10:21 pm, Sat, 23 September 23