WI vs NZ: ವಿಂಡೀಸ್ ನೆಲದಲ್ಲಿ ಏಕದಿನ ಸರಣಿ ಗೆದ್ದು ಹಿಂದೆಂದೂ ಮಾಡಿರದ ಐತಿಹಾಸಿಕ ದಾಖಲೆ ಬರೆದ ಕಿವೀಸ್..!

WI vs NZ: ಕಿವೀಸ್ ಬಳಗ ವೆಸ್ಟ್ ಇಂಡೀಸ್‌ ನೆಲದಲ್ಲಿ ತಮ್ಮ ಮೊದಲ ಏಕದಿನ ಸರಣಿಯ ಜಯ ದಾಖಲಿಸಿದ್ದಾರೆ. ಆತಿಥೇಯರು ಈ ಹಿಂದೆ ಟಿ20 ಸರಣಿಯಲ್ಲಿ ಸೋತಿದ್ದ ರೀತಿಯಲ್ಲಿಯೇ ಕೆರಿಬಿಯನ್ ತಂಡವನ್ನು ಸೋಲಿಸಿದ್ದಾರೆ.

WI vs NZ: ವಿಂಡೀಸ್ ನೆಲದಲ್ಲಿ ಏಕದಿನ ಸರಣಿ ಗೆದ್ದು ಹಿಂದೆಂದೂ ಮಾಡಿರದ ಐತಿಹಾಸಿಕ ದಾಖಲೆ ಬರೆದ ಕಿವೀಸ್..!
Updated By: ಪೃಥ್ವಿಶಂಕರ

Updated on: Aug 22, 2022 | 2:32 PM

ನ್ಯೂಜಿಲೆಂಡ್ ತಂಡ ವೆಸ್ಟ್ ಇಂಡೀಸ್​ ( West Indies) ನೆಲದಲ್ಲಿ ಹಿಂದೆಂದೂ ಮಾಡದ ಕೆಲಸವನ್ನು ಮಾಡಿ ಇತಿಹಾಸ ಸೃಷ್ಟಿಸಿದೆ. ಕಿವೀಸ್ ಬಳಗ ವೆಸ್ಟ್ ಇಂಡೀಸ್‌ ನೆಲದಲ್ಲಿ ತಮ್ಮ ಮೊದಲ ಏಕದಿನ ಸರಣಿಯ ಜಯ ದಾಖಲಿಸಿದ್ದಾರೆ. ಆತಿಥೇಯರು ಈ ಹಿಂದೆ ಟಿ20 ಸರಣಿಯಲ್ಲಿ ಸೋತಿದ್ದ ರೀತಿಯಲ್ಲಿಯೇ ಕೆರಿಬಿಯನ್ ತಂಡವನ್ನು ಸೋಲಿಸಿದ್ದಾರೆ. ಟಿ20 ಸರಣಿಯಂತೆ ನ್ಯೂಜಿಲೆಂಡ್ (New Zealand) ಏಕದಿನ ಸರಣಿಯನ್ನೂ 2-1 ಅಂತರದಿಂದ ವಶಪಡಿಸಿಕೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯವನ್ನು ಕಿವೀಸ್ ತಂಡ 5 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು. ತಂಡದ ಆರಂಭವೂ ಅಬ್ಬರವಾಗಿತ್ತು. ಶಾಯ್ ಹೋಪ್ ಮತ್ತು ಕೈಲ್ ಮೈಯರ್ಸ್ ನಡುವೆ 173 ರನ್‌ಗಳ ಆರಂಭಿಕ ಜೊತೆಯಾಟವಿತ್ತು. 34.5 ಓವರ್‌ಗಳಲ್ಲಿ ಹಾಕಿದ ಈ ಅಡಿಪಾಯ ತಂಡಕ್ಕೆ ದೊಡ್ಡ ಸ್ಕೋರ್ ಮಾಡುವ ಧೈರ್ಯವನ್ನು ನೀಡಿತು ಮತ್ತು ಅದೇ ಆಯಿತು. ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನ 50 ಓವರ್‌ಗಳು ಅಂತ್ಯಗೊಂಡಾಗ, ಅವರ ಸ್ಕೋರ್ ಬೋರ್ಡ್ 8 ವಿಕೆಟ್‌ಗೆ 301 ರನ್ ಆಗಿತ್ತು.

ವಿಂಡೀಸ್​ ನೆಲದಲ್ಲಿ ಮೊದಲ ಏಕದಿನ ಸರಣಿ ಗೆದ್ದ ಕೀವಿಸ್

ಈಗ ನ್ಯೂಜಿಲೆಂಡ್ ವೆಸ್ಟ್ ಇಂಡೀಸ್‌ನಲ್ಲಿ ಮೊದಲ ಏಕದಿನ ಸರಣಿಯನ್ನು ಗೆಲ್ಲಬೇಕಾದರೆ, ಅವರು 302 ರನ್ ಗಳಿಸಬೇಕಾಗಿತ್ತು. ಈ ಕೆಲಸವನ್ನು ಕಿವೀಸ್ ತಂಡ ತುಂಬಾ ಚೆನ್ನಾಗಿ ಮಾಡಿತು. ನ್ಯೂಜಿಲೆಂಡ್ 47.1 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 307 ರನ್ ಗಳಿಸಿ ವೆಸ್ಟ್ ಇಂಡೀಸ್‌ನಲ್ಲಿ ಮೊದಲ ODI ಸರಣಿಯ ಜಯ ದಾಖಲಿಸಿತು.

ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ತಂಡದ ಕೈಲ್ ಮೈಯರ್ಸ್ ಶತಕ ಬಾರಿಸಿದರೆ, ಅದೇ ಸಮಯದಲ್ಲಿ ಶಾಯ್ ಹೋಪ್ ಮತ್ತು ನಾಯಕ ನಿಕೋಲಸ್ ಪೂರನ್ ಅರ್ಧಶತಕ ಗಳಿಸಿದರು. ನಿಕೋಲಸ್ ಪೂರನ್ ಕೇವಲ 55 ಎಸೆತಗಳಲ್ಲಿ 9 ಸಿಕ್ಸರ್ ಬಾರಿಸಿ 91 ರನ್ ಗಳಿಸಿದರು.

ಮಾರ್ಟಿನ್ ಗಪ್ಟಿಲ್, ಡೆವೊನ್ ಕಾನ್ವೆ, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ ಮತ್ತು ಜೇಮ್ಸ್ ನೀಶಮ್ ನ್ಯೂಜಿಲೆಂಡ್‌ಗೆ ದೊಡ್ಡ ಗುರಿಯನ್ನು ಬೆನ್ನಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಟ್ಟಾರೆ, ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಸಾಂಘಿಕ ಪ್ರಯತ್ನ ಕಂಡುಬಂದಿತು. ಗುಪ್ಟಿಲ್ 57 ರನ್, ಕಾನ್ವೆ 56 ರನ್, ಲ್ಯಾಥಮ್ 69 ರನ್, ಮಿಚೆಲ್ 63 ರನ್ ಮತ್ತು ನೀಶಮ್ 34 ರನ್ ಗಳಿಸಿದರು. ಈ 5 ಬ್ಯಾಟ್ಸ್‌ಮನ್‌ಗಳ ದಾಳಿಯಿಂದ ವೆಸ್ಟ್ ಇಂಡೀಸ್ ದೊಡ್ಡ ಸ್ಕೋರ್ ನಂತರವೂ ಸೋಲನ್ನು ಎದುರಿಸಬೇಕಾಯಿತು.

Published On - 2:32 pm, Mon, 22 August 22