ವೃತ್ತಿ ಜೀವನದ ಆರಂಭ- ಅಂತ್ಯ ಎರಡನ್ನು ಸೊನ್ನೆಯೊಂದಿಗೆ ಕೊನೆಗೊಳಿಸಿದ ಕಿವೀಸ್ ಕ್ರಿಕೆಟಿಗ
Colin De Grandhomme: ಕಾಲಿನ್ ಅವರ ವೃತ್ತಿಜೀವನದ ಬಗ್ಗೆ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಅವರು ನ್ಯೂಜಿಲೆಂಡ್ ಪರ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರೀತಿಯಲ್ಲೇ, ಅಂತ್ಯವನ್ನು ಕಂಡಿದ್ದಾರೆ.
ನ್ಯೂಜಿಲೆಂಡ್‌ನ ಆಲ್‌ರೌಂಡರ್ ಕಾಲಿನ್ ಡಿ ಗ್ರಾಂಡ್‌ಹೋಮ್ (Colin De Grandhomme) ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯೊಂದಿಗೆ ಮಾತನಾಡಿದ ನಂತರ ಗ್ರಾಂಡ್‌ಹೋಮ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕಿವೀಸ್ ಆಡಳಿತ ಮಂಡಳಿ ಈ ಹಿಂದೆ ಗ್ರಾಂಡ್‌ಹೋಮ್ ಅವರನ್ನು ಕೇಂದ್ರ ಒಪ್ಪಂದದಿಂದ ಕಿತ್ತುಹಾಕಿತ್ತು. ಸತತ ಗಾಯ ಹಾಗೂ ಕಳಪೆ ಫಾರ್ಮ್ನಿಂದಾಗಿ ಬಳಲುತ್ತಿದ್ದ ಈ 36ರ ಹರೆಯದ ಆಟಗಾರ ಈ ನಿರ್ಧಾರ ಕೈಗೊಂಡಿದ್ದಾರೆ. ಜಿಂಬಾಬ್ವೆಯಲ್ಲಿ ಜನಿಸಿದ ಗ್ರ್ಯಾಂಡ್ಹೋಮ್ 2012 ರಲ್ಲಿ ನ್ಯೂಜಿಲೆಂಡ್‌ಗೆ ಪಾದಾರ್ಪಣೆ ಮಾಡಿದ್ದರು. ಕುಟುಂಬದೊಂದಿಗೆ ಸಮಯ ಕಳೆಯುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಗ್ರಾಂಡ್‌ಹೋಮ್ ಹೇಳಿಕೊಂಡಿದ್ದಾರೆ.
ಒಂದು ದಶಕದ ಕ್ರಿಕೆಟ್‌ಗೆ ವಿದಾಯ
ತಮ್ಮ ನಿರ್ಧಾರದ ಹಿಂದೆ ಹಲವು ಕಾರಣಗಳಿವೆ ಎಂದು ಹೇಳಿದ ಗ್ರ್ಯಾಂಡ್ಹೋಮ್, ‘ನಾನು ಮತ್ತೆ ಚಿಕ್ಕವನಾಗಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿದೆ. ಸತತ ಇಂಜುರಿಯಿಂದಾಗಿ ನನಗೆ ತರಬೇತಿ ಕಷ್ಟವಾಗುತ್ತಿದೆ. ಹೀಗಾಗಿ ನಾನು ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತೇನೆ. ನನಗೆ ದೇಶದ ಪರ ಕ್ರಿಕೆಟ್ ಆಡಲು ಅವಕಾಶ ಮಾಡಿಕೊಟ್ಟ ಕಿವೀಸ್ ಮಂಡಳಿಗೆ ಧನ್ಯವಾದ. ‘2012 ರಿಂದ ಇಲ್ಲಿಯವರೆಗೆ ನ್ಯೂಜಿಲೆಂಡ್ ಪರ ಆಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನನ್ನ ಅಂತರರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ನನಗೆ ಹೆಮ್ಮೆ ಇದೆ. ಇದು ಸರಿಯಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ ಎಂದು ಗ್ರಾಂಡ್‌ಹೋಮ್ ವಿದಾಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೊಗಳಿದ ಕೋಚ್
ಮುಂದುವರೆದು ಮಾತನಾಡಿದ ಗ್ರಾಂಡ್‌ಹೋಮ್, ‘ನಾನು ಈ ತಂಡವನ್ನು ಪ್ರೀತಿಸುತ್ತೇನೆ. ಕಳೆದ ದಶಕ ಮತ್ತು ಆ ಅವಧಿಯಲ್ಲಿ ನನ್ನ ಅನುಭವಗಳು ಅದ್ಭುತವಾಗಿವೆ ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಾನು ಇಲ್ಲಿ ತಂಡದ ಆಟಗಾರರೊಂದಿಗೆ, ಕೋಚಿಂಗ್ ಸಿಬ್ಬಂದಿಯೊಂದಿಗೆ ಮತ್ತು ಎದುರಾಳಿಗಳೊಂದಿಗೆ ನನ್ನ ಜೀವನದುದ್ದಕ್ಕೂ ನೆನಪಿಟ್ಟುಕೊಳ್ಳುವಂತಹ ಸ್ನೇಹವನ್ನು ಮಾಡಿದ್ದೇನೆ ಎಂದಿದ್ದಾರೆ. ಗ್ರಾಂಡ್‌ಹೋಮ್ ಬಗ್ಗೆ ಮಾತನಾಡಿದ ನ್ಯೂಜಿಲೆಂಡ್ ಕೋಚ್ ಗ್ರೇರಿ ಸ್ಟೆಡ್, ಕಾಲಿನ್ ಬ್ಲ್ಯಾಕ್‌ಕ್ಯಾಪ್ಸ್‌ನ ಪ್ರಮುಖ ಭಾಗವಾಗಿದ್ದಾರೆ ಮತ್ತು ತಂಡದ ಅನೇಕ ಅದ್ಭುತ ವಿಜಯಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅವರ ಅತ್ಯುತ್ತಮ ಆಟವು ತಂಡಕ್ಕೆ ಉಪಯುಕ್ತವಾಗಿದೆ. ಅವರು ನನ್ನ ತಂಡದ ಪ್ರಮುಖ ಭಾಗವಾಗಿದ್ದಾರೆ ಎಂದಿದ್ದಾರೆ.
ಶೂನ್ಯದೊಂದಿಗೆ ಪ್ರಾರಂಭ, ಶೂನ್ಯದೊಂದಿಗೆ ಅಂತ್ಯ
ಕಾಲಿನ್ ಅವರ ವೃತ್ತಿಜೀವನದ ಬಗ್ಗೆ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಅವರು ನ್ಯೂಜಿಲೆಂಡ್ ಪರ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರೀತಿಯಲ್ಲೇ, ಅಂತ್ಯವನ್ನು ಕಂಡಿದ್ದಾರೆ. ಕಾಲಿನ್ ತನ್ನ ತವರು ತಂಡ ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್ ಪರ ಮೊದಲ ಪಂದ್ಯವನ್ನು ಆಡಿದರು. ಆ ಟಿ20 ಪಂದ್ಯದಲ್ಲಿ ಒಂದೇ ಒಂದು ಬಾಲ್ ಆಡುವ ಅವಕಾಶ ಸಿಗದೆ ಖಾತೆ ತೆರೆಯದೆ ಅಜೇಯರಾಗಿ ಉಳಿದಿದ್ದರು. ಈಗ ಅವರ ಕೊನೆಯ ಪಂದ್ಯವು ಅದೇ ರೀತಿ ಕೊನೆಗೊಂಡಿದೆ. ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ, ಕಾಲಿನ್ ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 42 ರನ್ ಗಳಿಸಿದರು ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯದೆ ಔಟಾದರು. ಈ ಇನ್ನಿಂಗ್ಸ್ ಅವರ ವೃತ್ತಿಜೀವನದ ಕೊನೆಯ ಇನ್ನಿಂಗ್ಸ್ ಆಗಿದ್ದು, ಕಾಲಿನ್ ಅವರ ವೃತ್ತಿಜೀವನದ ಅಂತ್ಯ, ಆರಂಭದಂತೆಯೇ ಕೊನೆಗೊಂಡಿತು.
Published On - 7:26 pm, Thu, 1 September 22