RCB ಖರೀದಿಗೆ ಮುಂದಾದ ಕನ್ನಡಿಗರು..!

IPL 2026 RCB: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್​ನ ಅತ್ಯಂತ ಮೌಲ್ಯಯುತ ತಂಡವಾಗಿ ಗುರುತಿಸಿಕೊಂಡಿದೆ. ಇದೀಗ ಈ ತಂಡದ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದೆ. ಅದರಂತೆ ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ಮಾಲೀಕರ ಪಾಲಾಗಲಿದೆ.

RCB ಖರೀದಿಗೆ ಮುಂದಾದ ಕನ್ನಡಿಗರು..!
Ranjan Pai - Rcb - Nikhil Kamath

Updated on: Nov 08, 2025 | 10:16 AM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಯಾರ ಪಾಲಾಗಲಿದೆ? ಈ ಪ್ರಶ್ನೆಗೆ ಸದ್ಯಕ್ಕಂತು ಉತ್ತರವಿಲ್ಲ. ಏಕೆಂದರೆ ಆರ್​ಸಿಬಿ ಫ್ರಾಂಚೈಸಿಯನ್ನು ಖರೀದಿ ಆಸಕ್ತಿದಾರರ ಪಟ್ಟಿ ಬೆಳೆಯುತ್ತಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಕರ್ನಾಟಕದ ಉದ್ಯಮಿಗಳಾದ ನಿಖಿಲ್ ಕಾಮತ್ ಹಾಗೂ ರಂಜನ್ ಪೈ.

ಝೆರೋಧಾ ಕಂಪೆನಿಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಯ (MEMG) ಅಧ್ಯಕ್ಷ ರಂಜನ್ ಪೈ ಜೊತೆಗೂಡಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕರ್ನಾಟಕದ ಉದ್ಯಮಿಗಳಾದ ನಿಖಲ್ ಕಾಮತ್ ಮತ್ತು ರಂಜನ್ ಪೈ ಇಬ್ಬರೂ ಬೆಂಗಳೂರು ಫ್ರಾಂಚೈಸಿಗಾಗಿ ಬಿಡ್ ಮಾಡಲು ಆಸಕ್ತಿ ಹೊಂದಿದ್ದಾರೆ. ಈ ಮೂಲಕ ಆರ್​ಸಿಬಿ ಫ್ರಾಂಚೈಸಿಯನ್ನು ಕರ್ನಾಟಕದಲ್ಲೇ ಉಳಿಸಲು ಪ್ಲ್ಯಾನ್ ರೂಪಿಸಿದ್ದಾರೆ.

ಅತ್ತ ನಿಖಿಲ್ ಕಾಮತ್ ಅವರ ಆಪ್ತರಲ್ಲಿ ಒಬ್ಬರೆನಿಸಿಕೊಂಡಿರುವ ಆದಾರ್ ಪೂನವಾಲ ಕೂಡ ಆರ್​ಸಿಬಿ ಫ್ರಾಂಚೈಸಿಗಾಗಿ ಬಿಡ್ ಮಾಡಲಿದ್ದಾರೆ. ಹೀಗಾಗಿ ನಿಖಿಲ್-ರಂಜನ್ ಪೈ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಜೊತೆಗೂಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿಗೆ ಮುಂದಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಕೂಡ ಆರ್​ಸಿಬಿ ಮೇಲೆ ಕಣ್ಣಿಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಾಗಿ ಅವರ ಜೆಎಸ್​ಡಬ್ಲ್ಯೂ ಗ್ರೂಪ್ ಬಿಡ್ ಮಾಡಲಿದೆ ಎಂದು ತಿಳಿದು ಬಂದಿದೆ.

ಇನ್ನೊಂದೆಡೆ ಅದಾನಿ ಗ್ರೂಪ್ ಕೂಡ ಆರ್​ಸಿಬಿ ಫ್ರಾಂಚೈಸಿಯನ್ನು ಖರೀದಿಸಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಎಂಟ್ರಿ ಕೊಡಲು ಪ್ಲ್ಯಾನ್ ರೂಪಿಸುತ್ತಿದೆ. ಹೀಗಾಗಿ ಅದಾನಿ ಗ್ರೂಪ್​ ಕಡೆಯಿಂದ ಬಿಡ್ಡಿಂಗ್​ನಲ್ಲಿ ಪೈಪೋಟಿ ಎದುರಾಗಲಿದೆ.

ಈ ಉದ್ಯಮಿಗಳಲ್ಲದೆ ದೇವಯಾನಿ ಇಂಟರ್​ನ್ಯಾಷನಲ್ ಗ್ರೂಪ್ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಆಸಕ್ತಿ ತೋರಿದೆ. ಹಾಗೆಯೇ ಅಮೆರಿಕದ ಪ್ರೈವೆಟ್ ಇನ್​ವೆಸ್ಟ್​ಮೆಂಟ್ ಕಂಪೆನಿಯೊಂದು ಕೂಡ ಆರ್​ಸಿಬಿ ಫ್ರಾಂಚೈಸಿ ಖರೀದಿಗಾಗಿ ಡಿಯಾಜಿಯೊ ಕಂಪೆನಿ ಜೊತೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 5 ಓವರ್​ಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ವೆಸ್ಟ್ ಇಂಡೀಸ್

ಅಂದರೆ ದಿನ ಕಳೆದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಲು ಬಿಲಿಯನೇರ್​ಗಳು ಮುಂದೆ ಬರುತ್ತಿದ್ದಾರೆ. ಹೀಗಾಗಿ ಆರ್​ಸಿಬಿ ಫ್ರಾಂಚೈಸಿಯ ಖರೀದಿಗೆ ಭರ್ಜರಿ ಪೈಪೋಟಿಯಂತು ಕಂಡು ಬರಲಿದೆ. ಈ ಪೈಪೋಟಿಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯಾರ ಪಾಲಾಗಲಿದೆ ಎಂಬುನ್ನು ಕಾದು ನೋಡಬೇಕಿದೆ.

RCB ಫ್ರಾಂಚೈಸಿ ಖರೀದಿಗೆ ಆಸಕ್ತಿ ಹೊಂದಿರುವವರು:

  • ಜೆಎಸ್​ಡಬ್ಲ್ಯೂ ಗ್ರೂಪ್ (ಪಾರ್ಥ್ ಜಿಂದಾಲ್)
  • ಅದಾನಿ ಗ್ರೂಪ್ (ಗೌತಮ್ ಅದಾನಿ)
  • ಪೂನಾವಾಲ ಗ್ರೂಪ್ (ಆದಾರ್ ಪೂನಾವಾಲ)
  • ನಿಖಿಲ್ ಕಾಮತ್ (ಝೆರೋಧಾ ಕಂಪೆನಿ)
  • ರಂಜನ್ ಪೈ (ಮಣಿಪಾಲ್ ಗ್ರೂಪ್)
  • ದೇವಯಾನಿ ಇಂಟರ್ನ್ಯಾಷನಲ್ ಗ್ರೂಪ್ (ರವಿಕಾಂತ್ ಜೈಪುರಿಯಾ)
  • ಅಮೆರಿಕದ ಪ್ರೈವೆಟ್ ಇನ್​ವೆಸ್ಟ್​ಮೆಂಟ್ ಕಂಪೆನಿ

 

Published On - 10:08 am, Sat, 8 November 25