Team India: ಕಳಪೆ ಪ್ರದರ್ಶನ ನೀಡಿದ ಆಟಗಾರರಿಗೆ ಚಾನ್ಸ್: ನಿತೀಶ್ ರಾಣಾಗೆ ಅನ್ಯಾಯ..!

| Updated By: ಝಾಹಿರ್ ಯೂಸುಫ್

Updated on: Jul 17, 2023 | 2:54 PM

Team India: ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಿ 14 ಪಂದ್ಯಗಳಲ್ಲಿ ನಿತೀಶ್ ರಾಣಾ 413 ರನ್ ಬಾರಿಸಿ ಮಿಂಚಿದ್ದರು.

Team India: ಕಳಪೆ ಪ್ರದರ್ಶನ ನೀಡಿದ ಆಟಗಾರರಿಗೆ ಚಾನ್ಸ್: ನಿತೀಶ್ ರಾಣಾಗೆ ಅನ್ಯಾಯ..!
Nitish Rana
Follow us on

ಏಷ್ಯನ್ ಗೇಮ್ಸ್​ಗಾಗಿ ಟೀಮ್ ಇಂಡಿಯಾವನ್ನು (Team India) ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ. ಆದರೆ ಈ ಬಳಗದಲ್ಲಿ ಯುವ ಎಡಗೈ ದಾಂಡಿಗ ನಿತೀಶ್ ರಾಣಾಗೆ ಸ್ಥಾನ ಕಲ್ಪಿಸಿಲ್ಲ ಎಂಬುದೇ ಅಚ್ಚರಿ. ಅಂದರೆ ಕಳೆದ 2 ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಎದುರು ನೋಡುತ್ತಿರುವ ರಾಣಾ ಅವರನ್ನು ಮತ್ತೊಮ್ಮೆ ಆಯ್ಕೆ ಸಮಿತಿ ನಿರ್ಲಕ್ಷಿಸಿರುವುದು ಸ್ಪಷ್ಟ.

ಏಕೆಂದರೆ ಇತ್ತ ಏಷ್ಯನ್ ಗೇಮ್ಸ್​​ಗೆ ಆಯ್ಕೆಯಾಗಿರುವ ತಂಡದಲ್ಲಿ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಾಷಿಂಗ್ಟನ್ ಸುಂದರ್ ಹಾಗೂ ಶಹಬಾಝ್ ಅಹ್ಮದ್​​ ಅವರನ್ನು ಆಯ್ಕೆ ಮಾಡಿದ್ದಾರೆ. ಅತ್ತ ಅದ್ಭುತ ಫಾರ್ಮ್​ನಲ್ಲಿದ್ದ ನಿತೀಶ್ ರಾಣಾ ಏಷ್ಯನ್ ಗೇಮ್ಸ್​ಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಅವರನ್ನು ಮೀಸಲು ಆಟಗಾರರ ಪಟ್ಟಿಗೂ ಕೂಡ ಪರಿಗಣಿಸಲಾಗಿಲ್ಲ.

ಇನ್ನು ಹೆಚ್ಚುವರಿ ಆಟಗಾರರಾಗಿ ಆಯ್ಕೆಯಾಗಿರುವುದು ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್. ಇಲ್ಲಿ ದೀಪಕ್ ಹೂಡಾ ಅವರ ಆಯ್ಕೆ ಮತ್ತೊಂದು ಅಚ್ಚರಿ.

ಕಳಪೆ ಪ್ರದರ್ಶನ ನೀಡಿದ ಆಟಗಾರರಿಗೆ ಮಣೆ:

ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಿ 14 ಪಂದ್ಯಗಳಲ್ಲಿ ನಿತೀಶ್ ರಾಣಾ 413 ರನ್ ಬಾರಿಸಿ ಮಿಂಚಿದ್ದರು. ಆದರೆ ಅವರನ್ನು ಕೈಬಿಟ್ಟು, 7 ಪಂದ್ಯಗಳಲ್ಲಿ 60 ರನ್ ಹಾಗೂ 3 ವಿಕೆಟ್ ಪಡೆದ ವಾಷಿಂಗ್ಟನ್ ಸುಂದರ್​ಗೆ ಚಾನ್ಸ್ ನೀಡಲಾಗಿದೆ.
ಹಾಗೆಯೇ 10 ಪಂದ್ಯಗಳಲ್ಲಿ 40 ರನ್ ಹಾಗೂ 1 ವಿಕೆಟ್ ಪಡೆದ ಶಹಬಾಝ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದೀಪಕ್ ಹೂಡಾ 12 ಪಂದ್ಯಗಳಲ್ಲಿ ಗಳಿಸಿದ ಸ್ಕೋರ್ ಕೇವಲ 84 ರನ್ ಮಾತ್ರ.

ಅಂದರೆ ಇಲ್ಲಿ ಟೀಮ್ ಇಂಡಿಯಾ ಆಯ್ಕೆಗೆ ಯಾವ ಮಾನದಂಡ ಅನುಸರಿಸಲಾಗಿದೆ ಎಂಬುದೇ ದೊಡ್ಡ ಪ್ರಶ್ನೆ. ಏಕೆಂದರೆ ಐಪಿಎಲ್ ಬಳಿಕ ದೇಶೀಯ ಅಂಗಳದಲ್ಲಿ ಯಾವುದೇ ಟಿ20 ಪಂದ್ಯಾವಳಿ ನಡೆದಿಲ್ಲ. ಇಲ್ಲಿ ಆಟಗಾರರ ಫಾರ್ಮ್​ ಅನ್ನು ಪರಿಗಣನೆಗೆ ತೆಗೆದುಕೊಂಡಿದ್ದರೆ, ನಿತೀಶ್ ರಾಣಾ ಆಲ್​ರೌಂಡರ್ ಕೋಟಾದಲ್ಲಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಬೇಕಿತ್ತು.

ಇದನ್ನೂ ಓದಿ: Yuvraj Singh: ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲೋದು ಡೌಟ್: ಯುವರಾಜ್ ಸಿಂಗ್

ಆದರೆ ಅತ್ತ ಟೆಸ್ಟ್ ತಂಡದಲ್ಲಿ ಸರ್ಫರಾಝ್ ಖಾನ್ ಅವರನ್ನು ಆಯ್ಕೆ ಸಮಿತಿ ಹೇಗೆ ನಿರ್ಲಕ್ಷಿಸಿದೆಯೋ, ಇದೀಗ ಇತ್ತ ಟಿ20 ತಂಡದ ಆಯ್ಕೆಗೆ ನಿತೀಶ್ ರಾಣಾ ಅವರನ್ನು ಪರಿಗಣಿಸಿಲ್ಲ ಎಂಬುದಕ್ಕೆ ಈ ಮೇಲೆ ನೀಡಲಾದ ಅಂಕಿ ಅಂಶಗಳೇ ಸಾಕ್ಷಿ.

ಏಷ್ಯನ್ ಗೇಮ್ಸ್​ಗೆ ಭಾರತ ಟಿ20 ತಂಡ:

ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಝ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ , ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್).

ಮೀಸಲು ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್.