
ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಣ 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 3-1 ಅಂತರದಿಂದ ಟೀಮ್ ಇಂಡಿಯಾ ವಶಪಡಿಸಿಕೊಂಡಿದೆ. ವಿಶೇಷ ಎಂದರೆ ವೆಸ್ಟ್ ಇಂಡೀಸ್ ಪಾಲಿಗೆ 2ನೇ ಪಂದ್ಯದಲ್ಲಿ ಹೀರೋ ಆಗಿದ್ದ ಆಟಗಾರನೇ ನಾಲ್ಕನೇ ಪಂದ್ಯದಲ್ಲಿ ವಿಲನ್ ಆಗಿದ್ದರು. ಅಂದರೆ ಟೀಮ್ ಇಂಡಿಯಾ ವಿರುದ್ದ 2ನೇ ಪಂದ್ಯದಲ್ಲಿ ಮಾರಕ ಬೌಲಿಂಗ್ ಮೂಲಕ ಪರಾಕ್ರಮ ಮೆರೆದಿದ್ದ ಒಬೆಡ್ ಮೆಕಾಯ್ರನ್ನು 4ನೇ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ಟಾರ್ಗೆಟ್ ಮಾಡಿದ್ದರು.
2ನೇ ಟಿ20 ಪಂದ್ಯದಲ್ಲಿ ಒಬೆಡ್ ಮೆಕಾಯ್ 4 ಓವರ್ಗಳಲ್ಲಿ 1 ಮೇಡನ್ ಹಾಗೂ 17 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ವಿಂಡೀಸ್ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಅಷ್ಟೇ ಅಲ್ಲದೆ ಮಾರಕ ಬೌಲಿಂಗ್ ಮೂಲಕ 25 ವರ್ಷದ ಮೆಕಾಯ್ ವಿಶೇಷ ದಾಖಲೆಯೊಂದನ್ನು ಕೂಡ ನಿರ್ಮಿಸಿದ್ದರು. ಅದರಲ್ಲೂ ಟೀಮ್ ಇಂಡಿಯಾ ವಿರುದ್ದ ಟಿ20ಯಲ್ಲಿ 6 ಪಡೆದ ಮೊದಲ ವಿಂಡೀಸ್ ಬೌಲರ್ ಎನಿಸಿಕೊಂಡಿದ್ದರು.
ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ವಿರುದ್ದ ಅತ್ಯುತ್ತಮ ಬೌಲಿಂಗ್ ಮಾಡಿದ ದಾಖಲೆಯನ್ನು ಕೂಡ ಒಬೆಡ್ ಮೆಕಾಯ್ ಬರೆದಿದ್ದರು. ಕೇವಲ 17 ರನ್ ನೀಡುವ ಮೂಲಕ 6 ವಿಕೆಟ್ ಕಬಳಿಸಿ ಮೆಕಾಯ್ ಭಾರತ ತಂಡದ ವಿರುದ್ದ ಹೊಸ ಇತಿಹಾಸ ನಿರ್ಮಿಸಿದ್ದರು. ಆದರೆ ಈ ದಾಖಲೆ ನಿರ್ಮಾಣವಾಗಿ ದಿನಗಳು ಕಳೆಯುತ್ತಿದ್ದಂತೆ ಇದೀಗ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಮೆಕಾಯ್ ವಿರುದ್ದ ಸೇಡು ತೀರಿಸಿಕೊಂಡಿದ್ದಾರೆ.
ಏಕೆಂದರೆ 4ನೇ ಟಿ20 ಪಂದ್ಯದಲ್ಲಿ ಒಡೆಬ್ ಮೆಕಾಯ್ ನೀಡಿರುವುದು 4 ಓವರ್ಗಳಲ್ಲಿ ಬರೋಬ್ಬರಿ 66 ರನ್ಗಳು. ಅಂದರೆ ವೆಸ್ಟ್ ಇಂಡೀಸ್ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎಂಬ ದಾಖಲೆ ಇದೀಗ ಮೆಕಾಯ್ ಪಾಲಾಗಿದೆ. ಈ ಪಂದ್ಯದಲ್ಲಿ ಆರಂಭದಿಂದಲೇ ಮೆಕಾಯ್ರನ್ನು ಟಾರ್ಗೆಟ್ ಮಾಡಿದ್ದ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು 24 ಎಸೆತಗಳಲ್ಲಿ 66 ರನ್ ಚಚ್ಚಿದರು. ಈ ಮೂಲಕ ಮೆಕಾಯ್ ಹೆಸರಿನಲ್ಲಿ ಕೆಟ್ಟ ದಾಖಲೆಯೊಂದನ್ನು ನಿರ್ಮಿಸಿದರು.
ಇದಕ್ಕೂ ಮುನ್ನ ಈ ಹೀನಾಯ ದಾಖಲೆ ಕೀಮೊ ಪೌಲ್ ಹೆಸರಿನಲ್ಲಿತ್ತು. ಪೌಲ್ 2020 ರಲ್ಲಿ ನ್ಯೂಜಿಲೆಂಡ್ ವಿರುದ್ದ 4 ಓವರ್ಗಳಲ್ಲಿ 64 ರನ್ ನೀಡಿದ್ದರು. ಇದೀಗ 4 ಓವರ್ಗಳಲ್ಲಿ 66 ರನ್ ಬಿಟ್ಟು ಕೊಡುವ ಮೂಲಕ ಒಬೆಡ್ ಮೆಕಾಯ್ ಅತ್ಯಂತ ಕೆಟ್ಟ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹೀರೋ ಎನಿಸಿಕೊಂಡ ಒಬೆಡ್ ಮೆಕಾಯ್, ದಿನಗಳ ಅಂತರದಲ್ಲಿ ವಿಂಡೀಸ್ ಪರ ಅತ್ಯಂತ ದುಬಾರಿ ಟಿ20 ಬೌಲರ್ ಎಂಬ ಕೆಟ್ಟ ದಾಖಲೆಯನ್ನು ನಿರ್ಮಿಸಿದ್ದಾರೆ.