IPL ಫ್ರಾಂಚೈಸಿಗಳ ತಂಡದಲ್ಲಿ ಆಡಲಿದ್ದಾರಾ ಪಾಕಿಸ್ತಾನ್ ಆಟಗಾರರು..?
t20 Cricket League ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯಡಂ ಗಿಲ್ಕ್ರಿಸ್ಟ್ ಟಿ20 ಲೀಗ್ನಲ್ಲಿ ಐಪಿಎಲ್ ಫ್ರಾಂಚೈಸಿ ಪ್ರಾಬಲ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

ವಿಶ್ವದ ಜನ್ರಪಿಯ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ (IPL) ಟೂರ್ನಿಯಲ್ಲಿ ಪಾಕಿಸ್ತಾನ್ ಆಟಗಾರರು ಕಾಣಿಸಿಕೊಂಡಿದ್ದು ಕೇವಲ 1 ಸೀಸನ್ನಲ್ಲಿ ಮಾತ್ರ. ಅದು ಕೂಡ ಐಪಿಎಲ್ನ ಉದ್ಘಾಟನಾ ಸೀಸನ್ನಲ್ಲಿ ಎಂಬುದು ವಿಶೇಷ. ಅಂದರೆ 2008 ರಲ್ಲಿ ಪಾಕ್ ಆಟಗಾರರು ಐಪಿಎಲ್ ಆಡಿದ್ದರು. ಆದರೆ ಆ ಬಳಿಕ ಭಾರತದ ಮೇಲಿನ ಪಾಕ್ ಪ್ರೇರಿತ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಕ್ರಿಕೆಟಿಗರನ್ನು ಐಪಿಎಲ್ನಿಂದ ಬ್ಯಾನ್ ಮಾಡಲಾಗಿತ್ತು. ಇದಾದ ಬಳಿಕ ಐಪಿಎಲ್ನಲ್ಲಿ ಪಾಕ್ ಆಟಗಾರರು ಕಾಣಿಸಿಕೊಂಡಿರಲಿಲ್ಲ. ಇದೀಗ ಪಾಕ್ ಆಟಗಾರರು ಐಪಿಎಲ್ ಫ್ರಾಂಚೈಸಿಗಳ ತಂಡಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಂದರೆ ಐಪಿಎಲ್ ಮಾದರಿಯಲ್ಲೇ ಹೊಸ ಎರಡು ಟಿ20 ಲೀಗ್ಗಳು ಶುರುವಾಗುತ್ತಿದೆ. ಈ ಲೀಗ್ನಲ್ಲಿ ಕೆಲ ತಂಡಗಳನ್ನು ಐಪಿಎಲ್ ಫ್ರಾಂಚೈಸಿ ಖರೀದಿಸಿದೆ.
ಅದರಲ್ಲೂ ಮುಖ್ಯವಾಗಿ ಸೌತ್ ಆಫ್ರಿಕಾ ಟಿ20 ಲೀಗ್ನ 6 ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿರುವುದು ವಿಶೇಷ. ಇನ್ನು ಯುಎಇ ಟಿ20 ಲೀಗ್ನಲ್ಲೂ ಐಪಿಎಲ್ ಮಾಲೀಕರ ಮೂರು ತಂಡಗಳಿವೆ. ಈ ಎರಡು ಲೀಗ್ಗಳಿಗೆ ಇನ್ನಷ್ಟೇ ತಂಡಗಳ ಆಯ್ಕೆ ನಡೆಯಬೇಕಿದೆ. ಹೀಗಾಗಿಯೇ ಈ ತಂಡಗಳಲ್ಲಿ ಪಾಕಿಸ್ತಾನದ ಸ್ಟಾರ್ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಯುಎಇನಲ್ಲಿ ಹಲವು ಪಾಕ್ ಕ್ರಿಕೆಟ್ ಪ್ರೇಮಿಗಳಿದ್ದು, ಹೀಗಾಗಿ ಪಾಕ್ ಸ್ಟಾರ್ ಆಟಗಾರರನ್ನು ಖರೀದಿಸಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯ ವೀಕ್ಷಿಸಲು ಬರಲಿದ್ದಾರೆ ಎಂಬ ಲೆಕ್ಕಚಾರದಲ್ಲಿದೆ ಕೆಲ ಫ್ರಾಂಚೈಸಿಗಳು.
ಇತ್ತ ಪಾಕಿಸ್ತಾನ್ ಆಟಗಾರರು ಕೂಡ ಐಪಿಎಲ್ ಫ್ರಾಂಚೈಸಿಗಳ ತಂಡಗಳಲ್ಲಿ ಆಡಲು ತುದಿಗಾಲಲ್ಲಿ ನಿಂತಿದ್ದಾರೆ. ಏಕೆಂದರೆ ಐಪಿಎಲ್ ಮೂಲಕ ಭರ್ಜರಿ ಯಶಸ್ಸು ಸಾಧಿಸಿರುವ ಫ್ರಾಂಚೈಸಿಗಳು, ಯುಎಇ ಟಿ20 ಲೀಗ್ ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಹೆಚ್ಚಿನ ಬಂಡವಾಳ ಹೂಡಲಿದ್ದಾರೆ. ಅಲ್ಲದೆ ಈ ಟೂರ್ನಿಗಳನ್ನು ಐಪಿಎಲ್ ಮಾದರಿಯಲ್ಲೇ ಯಶಸ್ಸಿಗೆ ಕೊಂಡೊಯ್ಯಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ. ಹೀಗಾಗಿ ಪಾಕಿಸ್ತಾನ್ ಆಟಗಾರರು ಅತ್ಯುತ್ತಮ ಲೀಗ್ಗಳ ಭಾಗವಾಗಲು ತುದಿಗಾಲಲ್ಲಿ ನಿಂತಿದ್ದಾರೆ.
ಒಂದು ವೇಳೆ ಪಾಕ್ ಆಟಗಾರರಿಗೆ ಯುಎಇ ಟಿ20 ಲೀಗ್ ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಅವಕಾಶ ನೀಡಿದರೆ ಪಾಕಿಸ್ತಾನ್ ಸೂಪರ್ ಲೀಗ್ ತನ್ನ ಜನಪ್ರಿಯತೆ ಕಳೆದುಕೊಳ್ಳುವ ಭೀತಿ ಕೂಡ ಪಾಕ್ ಕ್ರಿಕೆಟ್ ಮಂಡಳಿಗಿದೆ. ಏಕೆಂದರೆ ಈಗಾಗಲೇ ಆಸ್ಟ್ರೇಲಿಯಾ ಆಟಗಾರರು ಕೂಡ ಬಿಗ್ ಬ್ಯಾಷ್ ಲೀಗ್ಗಿಂತ ಐಪಿಎಲ್ ಫ್ರಾಂಚೈಸಿಗಳ ಲೀಗ್ನಲ್ಲಿ ಹೆಚ್ಚಿನ ಮೊತ್ತ ಸಿಗುತ್ತಿದೆ ಎಂದು ಹೊಸ ಲೀಗ್ನತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೆ ಬಿಗ್ ಬ್ಯಾಷ್ ಲೀಗ್ನಲ್ಲಿ ಆಡಲು ಹಿಂದೇಟು ಹಾಕುತ್ತಿದ್ದಾರೆ.
ಇದೇ ಕಾರಣದಿಂದಾಗಿ ಇತ್ತೀಚೆಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯಡಂ ಗಿಲ್ಕ್ರಿಸ್ಟ್ ಟಿ20 ಲೀಗ್ನಲ್ಲಿ ಐಪಿಎಲ್ ಫ್ರಾಂಚೈಸಿ ಪ್ರಾಬಲ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಇದೇ ಆತಂಕ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೂ ಇದೆ. ಹೀಗಾಗಿ ಆಟಗಾರರಿಗೆ ಎನ್ಒಸಿ ನೀಡಲಿದ್ದಾರಾ ಎಂಬುದೇ ಈಗ ಉಳಿದಿರುವ ಪ್ರಶ್ನೆ. ಮತ್ತೊಂದೆಡೆ ಐಪಿಎಲ್ ಫ್ರಾಂಚೈಸಿಗಳು ಹಲವು ವಿದೇಶಿ ಲೀಗ್‌ಗಳಲ್ಲಿ ತಂಡಗಳ ಮಾಲೀಕತ್ವ ಹೊಂದುವ ಮೂಲಕ ಕ್ರಿಕೆಟ್ ಲೀಗ್‌ಗಳಲ್ಲಿ ಅಧಿಪತ್ಯ ಸಾಧಿಸುವತ್ತಾ ಹೊರಟಿದೆ.
ವಿದೇಶಿ ಲೀಗ್‌ಗಳಲ್ಲಿ ಐಪಿಎಲ್ ಫ್ರಾಂಚೈಸಿಗಳು:
- ಮುಂಬೈ ಇಂಡಿಯನ್ಸ್: CSA T20 ಲೀಗ್ (ಸೌತ್ ಆಫ್ರಿಕಾ), UAE T20 ಲೀಗ್
- ಕೋಲ್ಕತ್ತಾ ನೈಟ್ ರೈಡರ್ಸ್: ಕೆರಿಬಿಯನ್ ಪ್ರೀಮಿಯರ್ ಲೀಗ್, UAE T20 ಲೀಗ್, USA ಟಿ20 ಲೀಗ್
- ರಾಜಸ್ಥಾನ್ ರಾಯಲ್ಸ್: CSA T20 ಲೀಗ್ (ಸೌತ್ ಆಫ್ರಿಕಾ), CPL (ವೆಸ್ಟ್ ಇಂಡೀಸ್)
- ಲಕ್ನೋ ಸೂಪರ್ ಜೈಂಟ್ಸ್: CSA T20 ಲೀಗ್ (ಸೌತ್ ಆಫ್ರಿಕಾ)
- ಡೆಲ್ಲಿ ಕ್ಯಾಪಿಟಲ್ಸ್: UAE T20 ಲೀಗ್, CSA T20 ಲೀಗ್
- ಪಂಜಾಬ್ ಕಿಂಗ್ಸ್: CPL (ವೆಸ್ಟ್ ಇಂಡೀಸ್)
- ಸನ್‌ರೈಸರ್ಸ್ ಹೈದರಾಬಾದ್: CSA T20 ಲೀಗ್ (ಸೌತ್ ಆಫ್ರಿಕಾ)
- ಚೆನ್ನೈ ಸೂಪರ್ ಕಿಂಗ್ಸ್: CSA T20 ಲೀಗ್ (ಸೌತ್ ಆಫ್ರಿಕಾ)
ಇಲ್ಲಿ ವಿಶೇಷ ಎಂದರೆ ಸೌತ್ ಆಫ್ರಿಕಾ ಟಿ20 ಲೀಗ್ ಹಾಗೂ ಯುಎಇ ಟಿ20 ಲೀಗ್‌ಗಳಲ್ಲಿ ಐಪಿಎಲ್ ಫ್ರಾಂಚೈಸಿಗಳು ಹೆಚ್ಚಿನ ಬಂಡವಾಳ ಹೂಡಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಐಪಿಎಲ್ ಮಾದರಿಯಲ್ಲೇ CSA T20 ಲೀಗ್ (ಸೌತ್ ಆಫ್ರಿಕಾ), UAE T20 ಲೀಗ್ ಅತೀ ಹೆಚ್ಚು ಜನರನ್ನು ಆಕರ್ಷಿಸಲಿದೆ ಅಂದು ನಿರೀಕ್ಷಿಸಲಾಗಿದೆ. ಇದರಿಂದ ಆಟಗಾರರಿಗೆ ಹೆಚ್ಚಿನ ಮೊತ್ತ ಸಂಭಾವನೆ ಕೂಡ ಸಿಗಲಿದೆ. ಇದೇ ಕಾರಣದಿಂದಾಗಿ ಐಪಿಎಲ್ ಆಡುವ ವಿದೇಶಿ ಆಟಗಾರರು ತಮ್ಮ ತವರಿನ ಲೀಗ್ಗಿಂತ ಐಪಿಎಲ್ ಫ್ರಾಂಚೈಸಿಗಳ ಲೀಗ್ನತ್ತ ಆಕರ್ಷಿತರಾಗುತ್ತಿದ್ದಾರೆ.




