ಐತಿಹಾಸಿಕ ವಿಜಯದ ಬಳಿಕ ಮುಜೀಬ್ರನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಪುಟ್ಟ ಅಭಿಮಾನಿ; ಮನಕಲಕುವ ವಿಡಿಯೋ ನೋಡಿ
ENG vs AFG, ODI World Cup 2023: ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ತಲಾ 3 ವಿಕೆಟ್ ಪಡೆದರೆ, ಪ್ರಮುಖ ಬ್ಯಾಟರ್ಗಳ ವಿಕೆಟ್ ಕಬಳಿಸಿದ ಮುಜೀಬ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಗೆಲುವಿನ ನಂತರ ಅಫ್ಘಾನಿಸ್ತಾನದ ಎಲ್ಲಾ ಆಟಗಾರರು ಮತ್ತು ಅಭಿಮಾನಿಗಳು ಮೈದಾನದಲ್ಲೇ ಭಾವುಕರಾಗಿ ಕಣ್ಣೀರಿಟ್ಟ ಘಟನೆಯೂ ನಡೆಯಿತು.
ವಿಶ್ವಕಪ್‌ನಲ್ಲಿ (ICC World Cup 2023) ಭಾನುವಾರದಂದು ನಡೆದ ಅಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ (ENG vs AFG) ನಡುವಿನ ಕ್ರಿಕೆಟ್ ಕದನದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ 69 ರನ್‌ಗಳಿಂದ ಸೋಲನುಭವಿಸಿದೆ. ಇದು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅಫ್ಘಾನಿಸ್ತಾನ ತಂಡದ ಎರಡನೇ ಜಯವಾಗಿದ್ದು, ಬಲಿಷ್ಠ ಆಂಗ್ಲರನ್ನು ಮಣಿಸಿರುವುದು ಅಫ್ಘಾನ್ ಆಟಗಾರರ ಹರ್ಷಕ್ಕೆ ಪಾರವೇ ಇಲ್ಲದಂತ್ತಾಗಿದೆ. ಈ ಪಂದ್ಯದಲ್ಲಿ ಪ್ರಮುಖ 8 ವಿಕೆಟ್ ಕಬಳಿಸಿದ ಅಫ್ಘಾನಿಸ್ತಾನದ ಸ್ಪಿನ್ನರ್ಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಪೈಕಿ ಮುಜೀಬ್ ಉರ್ ರೆಹಮಾನ್ (Mujeeb Ur Rahman) ಮತ್ತು ರಶೀದ್ ಖಾನ್ ತಲಾ 3 ವಿಕೆಟ್ ಪಡೆದರೆ, ಪ್ರಮುಖ ಬ್ಯಾಟರ್ಗಳ ವಿಕೆಟ್ ಕಬಳಿಸಿದ ಮುಜೀಬ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಗೆಲುವಿನ ನಂತರ ಅಫ್ಘಾನಿಸ್ತಾನದ ಎಲ್ಲಾ ಆಟಗಾರರು ಮತ್ತು ಅಭಿಮಾನಿಗಳು ಮೈದಾನದಲ್ಲೇ ಭಾವುಕರಾಗಿ ಕಣ್ಣೀರಿಟ್ಟ ಘಟನೆಯೂ ನಡೆಯಿತು.
ಕಣ್ಣೀರಿಟ್ಟ ಪುಟ್ಟ ಅಭಿಮಾನಿ
ಈ ವೇಳೆ ಸ್ಮರಣೀಯ ಪ್ರದರ್ಶನ ನೀಡಿದ ಮುಜೀಬ್ ಉರ್ ರೆಹಮಾನ್ ಬಳಿ ಬಂದ ಪುಟ್ಟ ಅಭಿಮಾನಿಯೊಬ್ಬ ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ಮುಜೀಬ್ರನ್ನು ತಬ್ಬಿಕೊಂಡು ಕಣ್ಣೀರಿಟ್ಟ ವಿಡಿಯೋ ಎಲ್ಲರನ್ನೂ ಭಾವುಕರಾಗಿಸಿದೆ. ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಮುಜೀಬ್ ಉರ್ ರೆಹಮಾನ್, ಈ ಪ್ರಶಸ್ತಿಯನ್ನು ಅಫ್ಘಾನಿಸ್ತಾನದ ಭೂಕಂಪ ಸಂತ್ರಸ್ತರಿಗೆ ಅರ್ಪಿಸಿದರು. ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಮುಜೀಬ್, ಭಾವನಾತ್ಮಕ ಕ್ಷಣದ ವೀಡಿಯೊವೊಂದನ್ನು ಸಹ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ಮುಜೀಬ್ರನ್ನು ಅಪ್ಪಿಕೊಂಡು ಅಳುತ್ತಿರುವುದನ್ನು ಕಾಣಬಹುದಾಗಿದೆ.
Pictures of the day I would like to dedicate my man of the match award to the earthquakes victims and their families in Afghanistan. pic.twitter.com/VraFd8MZQA
— Muj R 88 (@Mujeeb_R88) October 15, 2023
ಆಲ್ರೌಂಡರ್ ಪ್ರದರ್ಶನ ನೀಡಿದ ಮುಜೀಬ್
ಬೌಲಿಂಗ್ನಲ್ಲಿ ಮ್ಯಾಜಿಕ್ ಮಾಡುವುದಕ್ಕೂ ಮುನ್ನ ಬ್ಯಾಟಿಂಗ್ನಲ್ಲಿ ಅವಶ್ಯಕ ಕಾಣಿಕೆ ನೀಡಿದ ಮುಜೀಬ್ ಉರ್ ರೆಹಮಾನ್ ಕೇವಲ 16 ಎಸೆತಗಳನ್ನು ಎದುರಿಸಿ 28 ರನ್‌ಗಳ ಸಣ್ಣ ಆದರೆ ಪ್ರಮುಖ ಇನ್ನಿಂಗ್ಸ್ ಆಡಿದರು. ಆ ಬಳಿಕ ಇಂಗ್ಲೆಂಡ್‌ನ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ಬಲೆಗೆ ಕೆಡುವಿದ ಮುಜೀಬ್, ಅರ್ಧಶತಕ ಸಿಡಿಸಿ ಅಪಾಯಕಾರಿ ಎನಿಸಿದ್ದ ಹ್ಯಾರಿ ಬ್ರೂಕ್ (66) ವಿಕೆಟ್ ಕೂಡ ಪಡೆದರು. ಮುಜೀಬ್ ತಮ್ಮ 10 ಓವರ್ಗಳ ಕೋಟಾದಲ್ಲಿ 51 ರನ್ ನೀಡಿ ಒಟ್ಟು 3 ವಿಕೆಟ್ ಪಡೆದರು.
ಆಂಗ್ಲರಿಗೆ ಮರ್ಮಾಘಾತ ನೀಡಿದ ಅಫ್ಘಾನ್; ಪಾಯಿಂಟ್ ಪಟ್ಟಿಯಲ್ಲೂ ಅಚ್ಚರಿಯ ಬದಲಾವಣೆ
ವಿಶ್ವಕಪ್‌ನಲ್ಲಿ ಎರಡನೇ ಗೆಲುವು
ರಶೀದ್ ಖಾನ್ ಕೂಡ ಅದ್ಭುತ ಪ್ರದರ್ಶನ ನೀಡಿ 9.3 ಓವರ್ ಗಳಲ್ಲಿ ಕೇವಲ 37 ರನ್ ನೀಡಿ ಗೆಲುವಿನ ವಿಕೆಟ್ ಸೇರಿದಂತೆ ಒಟ್ಟು 3 ವಿಕೆಟ್ ಪಡೆದರು. ಮೊಹಮ್ಮದ್ ನಬಿ 2 ವಿಕೆಟ್ ಪಡೆದರು. ಈ ಗೆಲುವು ಅಫ್ಘಾನಿಸ್ತಾನಕ್ಕೆ ಐತಿಹಾಸಿಕವಾಗಿದೆ. 2015ರ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಆಡಿದ ಅಫ್ಘಾನಿಸ್ತಾನ ತಂಡವು ಇದುವರೆಗೆ ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿತ್ತು. ಅದರ ಎರಡನೇ ಆವೃತ್ತಿಯಲ್ಲಿ ಅಂದರೆ 2019 ರಲ್ಲಿ, ಅಫ್ಘಾನಿಸ್ತಾನ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ವಿರುದ್ಧದ ಈ ಗೆಲುವು ವಿಶ್ವಕಪ್‌ನಲ್ಲಿ ಯಾವುದೇ ತಂಡದ ವಿರುದ್ಧ ಅವರ ಎರಡನೇ ಗೆಲುವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:46 am, Mon, 16 October 23