ಬೃಹತ್ ಟಾರ್ಗೆಟ್ ನೀಡಿಯೂ ಸೋತ ಪಾಕಿಸ್ತಾನ; ಸೋಲಿನೊಂದಿಗೆ ವಿಶ್ವಕಪ್ ಪ್ರಯಾಣ ಆರಂಭ..!
ODI World Cup 2023 Warm-Up Match: 2023 ರ ವಿಶ್ವಕಪ್ನ ಅಭ್ಯಾಸ ಪಂದ್ಯಗಳು ಇಂದಿನಿಂದ ಭಾರತದಲ್ಲಿ ಆರಂಭವಾಗಿದ್ದು, ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿಯೇ ಪಾಕಿಸ್ತಾನ ತಂಡ ಹೀನಾಯ ಸೋಲು ಅನುಭವಿಸಿದೆ. 7 ವರ್ಷಗಳ ಬಳಿಕ ಭಾರತಕ್ಕೆ ಬಂದಿರುವ ಪಾಕ್ ತಂಡಕ್ಕೆ ಶುಭಾರಂಭ ಮಾಡುವ ಅವಕಾಶ ಸಿಗಲಿಲ್ಲ.
2023 ರ ವಿಶ್ವಕಪ್ನ (ODI World Cup 2023) ಅಭ್ಯಾಸ ಪಂದ್ಯಗಳು ಇಂದಿನಿಂದ ಭಾರತದಲ್ಲಿ ಆರಂಭವಾಗಿದ್ದು, ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿಯೇ ಪಾಕಿಸ್ತಾನ ತಂಡ ಹೀನಾಯ ಸೋಲು ಅನುಭವಿಸಿದೆ. 7 ವರ್ಷಗಳ ಬಳಿಕ ಭಾರತಕ್ಕೆ ಬಂದಿರುವ ಪಾಕ್ ತಂಡಕ್ಕೆ ಶುಭಾರಂಭ ಮಾಡುವ ಅವಕಾಶ ಸಿಗಲಿಲ್ಲ. ಬಾಬರ್ ಆಝಂ (Babar Azam) ನಾಯಕತ್ವದ ಪಾಕಿಸ್ತಾನ ತಂಡ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ (Pakistan vs New Zealand) 5 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಈ ಪಂದ್ಯವಲ್ಲದೆ ಇದೇ ದಿನದಂದು ನಡೆದ ಇನ್ನೊಂದು ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾವನ್ನು (Sri lanka vs Bangladesh) 7 ವಿಕೆಟ್‌ಗಳಿಂದ ಮಣಿಸಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳು ಬಹುತೇಕ ಎಲ್ಲ ಆಟಗಾರರಿಗೆ ಅವಕಾಶ ನೀಡಿವೆ. ಆದಾಗ್ಯೂ, ನ್ಯೂಜಿಲೆಂಡ್ ಅನುಭವಿ ವೇಗದ ಬೌಲರ್ ಟ್ರೆಂಟ್ ಬೌಲ್ಟ್‌ಗೆ ಬೌಲಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಆದರೆ ಬ್ಯಾಟಿಂಗ್ನಲ್ಲಿ ನಾಯಕ ಕೇನ್ ವಿಲಿಯಮ್ಸನ್ ಮಿಂಚದರೆ,ಪಾಕಿಸ್ತಾನ ಈ ಪಂದ್ಯದಲ್ಲಿ ಸ್ಟಾರ್ ವೇಗಿ ಶಾಹೀನ್ ಶಾ ಆಫ್ರಿದಿಗೆ ವಿಶ್ರಾಂತಿ ನೀಡಿತ್ತು.
Mohammad Rizwan Century: ಭಾರತದಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಪಾಕ್ ವಿಕೆಟ್‌ಕೀಪರ್ ಬ್ಯಾಟರ್..!
ಉತ್ತಮ ಆರಂಭ ಸಿಗಲಿಲ್ಲ
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಬಾಬರ್ ಅಜಮ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಫಖರ್ ಜಮಾನ್ ಬದಲಿಗೆ ಅಬ್ದುಲ್ಲಾ ಶಫೀಕ್ ಅವರನ್ನು ಓಪನಿಂಗ್‌ಗೆ ಇಳಿಸಲಾಯಿತು. ಆದರೆ, ಶಫೀಕ್ ಮತ್ತು ಇಮಾಮ್ ಉಲ್ ಹಕ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ನಾಯಕ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಮತ್ತೊಮ್ಮೆ ಪಾಕಿಸ್ತಾನದ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡರು. ಇಬ್ಬರೂ 114 ರನ್‌ಗಳ ಜೊತೆಯಾಟ ನೀಡಿದಲ್ಲದೆ ವೈಯಕ್ತಿಕವಾಗಿ ಬಾಬರ್ 80 ರನ್ ಗಳಿಸಿ ಔಟಾದರೆ, ರಿಜ್ವಾನ್ 103 ರನ್‌ಗಳ ಇನ್ನಿಂಗ್ಸ್ ಆಡಿದರು.
50 ಓವರ್‌ಗಳಲ್ಲಿ 345 ರನ್
ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೌದ್ ಶಕೀಲ್ ಅದ್ಭುತ ಪ್ರದರ್ಶನ ನೀಡಿದ್ದು, ನಾಯಕ ಬಾಬರ್‌ಗೆ ಸಮಾಧಾನದ ವಿಷಯವಾಗಿತ್ತು. ಈ ಎಡಗೈ ಬ್ಯಾಟ್ಸ್‌ಮನ್ ಕೇವಲ 53 ಎಸೆತಗಳಲ್ಲಿ 75 ರನ್‌ಗಳ ಇನ್ನಿಂಗ್ಸ್ ಆಡಿದರು. ಹೀಗಾಗಿ ತಂಡ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 345 ರನ್ ಕಲೆಹಾಕಿತು. ನ್ಯೂಜಿಲೆಂಡ್ ಪರ ಎಡಗೈ ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟ್ನರ್ (2/39) ಮತ್ತು ಮ್ಯಾಟ್ ಹೆನ್ರಿ (1/8) ಗಮನಾರ್ಹ ಪ್ರದರ್ಶನ ನೀಡಿದರು.
ಶತಕ ವಂಚಿತ ರವೀಂದ್ರ
ಈ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ಗೆ ಉತ್ತಮ ಆರಂಭ ಸಿಗಲಿಲ್ಲ. ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಡೆವೊನ್ ಕಾನ್ವೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಬ್ಬ ಆರಂಭಿಕರಾಗಿ ಕಣಕ್ಕಿಳಿದಿದ್ದ 23 ವರ್ಷದ ಸ್ಪಿನ್ ಆಲ್‌ರೌಂಡರ್ ರಚಿನ್ ರವೀಂದ್ರ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಪಾಕಿಸ್ತಾನವನ್ನು ಅಚ್ಚರಿಗೊಳಿಸಿದರು. ರವೀಂದ್ರ ಅವರು ಕೇನ್ ವಿಲಿಯಮ್ಸನ್ ಅವರೊಂದಿಗೆ 137 ರನ್‌ಗಳ ಜೊತೆಯಾಟ ಹಂಚಿಕೊಂಡರು. ಮಾರ್ಚ್ 29 ರಂದು ನಡೆದ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದ ವಿಲಿಯಮ್ಸನ್, 6 ತಿಂಗಳ ನಂತರ ಮೊದಲ ಪಂದ್ಯವನ್ನು ಆಡುತ್ತಿದ್ದು, ಅರ್ಧಶತಕದ ಇನ್ನಿಂಗ್ಸ್ ಆಡಿದರು.
ಆದರೆ ಈ ವೇಳೆ ಆರಂಭಿಕ ರವೀಂದ್ರ ಶತಕ ಪೂರೈಸಲು ಸಾಧ್ಯವಾಗದೆ 97 ರನ್ (72 ಎಸೆತ) ಗಳಿಸಿ ಔಟಾದರು. ಇದರ ನಂತರ, ಡ್ಯಾರಿಲ್ ಮಿಚೆಲ್ (59 ನಿವೃತ್ತಿ), ಮಾರ್ಕ್ ಚಾಪ್ಮನ್ (ಅಜೇಯ 65, 41 ಎಸೆತ) ಮತ್ತು ಜೇಮ್ಸ್ ನೀಶಮ್ (33) ಅದ್ಭುತ ಬ್ಯಾಟಿಂಗ್‌ನಿಂದಾಗಿ ನ್ಯೂಜಿಲೆಂಡ್ ಕೇವಲ 45 ಓವರ್‌ಗಳಲ್ಲಿ ಪಾಕಿಸ್ತಾನ ನೀಡಿದ ಗುರಿಯನ್ನು ಸಾಧಿಸಿತು.
ಪಾಕಿಸ್ತಾನದ ಈ ಸೋಲಿಗೆ ಪ್ರಮುಖ ಕಾರಣ ತಂಡದ ಪ್ರಮುಖ ವೇಗಿಗಳಾದ ಶಾಹೀನ್ ಮತ್ತು ಶಾದಾಬ್ ಖಾನ್ ಬೌಲಿಂಗ್ ಮಾಡದೆ ಇರವುದು. ಇದಲ್ಲದೆ ಕೆಲವು ಕ್ಯಾಚ್‌ಗಳನ್ನು ಪಾಕಿಸ್ತಾನದ ಫೀಲ್ಡರ್‌ಗಳು ಕೈಬಿಟ್ಟರು.ಇದು ಪಾಕ್ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:26 pm, Fri, 29 September 23