ODI World Cup 2023: ಪಾಕ್ ತಂಡದಲ್ಲಿ ಸಂಚಲನ; ಉಪನಾಯಕನಿಗೆ ವಿಶ್ವಕಪ್ ತಂಡದಿಂದ ಗೇಟ್​ಪಾಸ್?

ODI World Cup 2023: ಪಾಕಿಸ್ತಾನ ತಂಡದ ಉಪನಾಯಕನನ್ನು ವಿಶ್ವಕಪ್ ತಂಡದಿಂದ ಕೈಬಿಡುವ ಮಾತುಗಳು ಕೇಳಿಬರುತ್ತಿವೆ. ಏಷ್ಯಾಕಪ್‌ನಲ್ಲಿ ತಂಡದ ಪರ ನಿರಾಶಾದಾಯಕ ಪ್ರದರ್ಶನ ನೀಡಿದ ತಂಡದ ಉಪನಾಯಕ ಶಾದಾಬ್ ಖಾನ್ ಅವರನ್ನು ವಿಶ್ವಕಪ್ ತಂಡದಿಂದ ಕೈಬಿಡಬಹುದು ಎಂದು ವರದಿಯಾಗಿದೆ.

ODI World Cup 2023: ಪಾಕ್ ತಂಡದಲ್ಲಿ ಸಂಚಲನ; ಉಪನಾಯಕನಿಗೆ ವಿಶ್ವಕಪ್ ತಂಡದಿಂದ ಗೇಟ್​ಪಾಸ್?
ಪಾಕಿಸ್ತಾನ ತಂಡ

Updated on: Sep 20, 2023 | 9:37 AM

ಏಷ್ಯಾಕಪ್​ನಲ್ಲಿ (Asia Cup 2023) ಹೀನಾಯವಾಗಿ ಸೋತಿದ್ದೆ ಬಂತು ಪಾಕಿಸ್ತಾನ ತಂಡದಲ್ಲಿ ಮಹತ್ವದ ಬದಲಾವಣೆಗಳಾಗುವ ಸೂಚನೆಗಳು ಎದ್ದು ಕಾಣುತ್ತಿವೆ. ತಂಡದಲ್ಲಿ ಸೀನಿಯರ್ಸ್​ ಹಾಗೂ ಜೂನಿಯರ್ಸ್​ ಎಂಬ ಒಳಜಗಳಗಳು ಸದ್ದು ಮಾಡುತ್ತಿವೆ. ಇದೆಲ್ಲ ಸಾಲದೆಂಬಂತೆ ನಾಯಕ ಬಾಬರ್ ಆಝಂ (Babar Azam) ನಡೆಗೂ ಇತರರ ಆಟಗಾರರು ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ಇದೀಗ ತಂಡದ ಉಪನಾಯಕನನ್ನು ವಿಶ್ವಕಪ್ (ODI World Cup 2023) ತಂಡದಿಂದ ಕೈಬಿಡುವ ಮಾತುಗಳು ಕೇಳಿಬರುತ್ತಿವೆ. ಏಷ್ಯಾಕಪ್‌ನಲ್ಲಿ ತಂಡದ ಪರ ನಿರಾಶಾದಾಯಕ ಪ್ರದರ್ಶನ ನೀಡಿದ ತಂಡದ ಉಪನಾಯಕ ಶಾದಾಬ್ ಖಾನ್ (Shadab Khan) ಅವರನ್ನು ವಿಶ್ವಕಪ್ ತಂಡದಿಂದ ಕೈಬಿಡಬಹುದು ಎಂದು ವರದಿಯಾಗಿದೆ.

ಸಪ್ಪೆ ಪ್ರದರ್ಶನ ನೀಡಿದ ಶಾದಾಬ್ ಖಾನ್

ತಂಡದ ಉಪನಾಯಕತ್ವದ ಜವಬ್ದಾರಿ ಹೊತ್ತು ಏಷ್ಯಾಕಪ್​ಗೆ ಕಾಲಿಟಿದ್ದ ಶಾದಾಬ್, ಇಡೀ ಪಂದ್ಯಾವಳಿಯಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಮಾತ್ರ ಪಡೆದರು. ಅಲ್ಲದೆ ಅವರ ಬ್ಯಾಟ್​ನಿಂದಲೂ ಯಾವುದೇ ಗಮನಾರ್ಹ ಪ್ರದರ್ಶನ ಹೊರಬರಲಿಲ್ಲ. ಸೂಪರ್ 4 ಸುತ್ತಿನಲ್ಲಿ ತಂಡ ಹೀನಾಯ ಪ್ರದರ್ಶನ ನೀಡಿ ಸೋತ ಬಳಿಕ ಹಿರಿಯ ಆಟಗಾರರ ಮೇಲೆ ನಾಯಕ ಬಾಬರ್ ಆಝಂ ಕೋಪಗೊಂಡಿದ್ದರು. ಅವರಲ್ಲಿ ಶಾದಾಬ್ ಖಾನ್ ಕೂಡ ಒಬ್ಬರು. ಬ್ಯಾಟ್ ಹಾಗೂ ಬಾಲ್ ಎರಡರಲ್ಲೂ ನಿರಾಸೆ ಮೂಡಿಸಿದ ಶಾದಬ್​ರನ್ನು ವಿಶ್ವಕಪ್ ತಂಡದಿಂದ ಕೈಬಿಟ್ಟು ಅವರ ಸ್ಥಾನದಲ್ಲಿ ಅಬ್ರಾರ್ ಅಹ್ಮದ್ ಅವರನ್ನು ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಜಿಯೋನ್ಯೂಸ್ ಪ್ರಕಾರ, ಮಂಡಳಿಯು ಕೆಲವು ಆಡಳಿತಾತ್ಮಕ ಬದಲಾವಣೆಗಳ ಬಗ್ಗೆಯೂ ಯೋಚಿಸುತ್ತಿದ್ದು, ತಂಡದ ಮುಖ್ಯ ಆಯ್ಕೆದಾರ ಮತ್ತು ನಾಯಕ ಬಾಬರ್, ಆಟಗಾರರ ಫಿಟ್ನೆಸ್ ಸಮಸ್ಯೆ ಹಾಗೂ ಪ್ರಮುಖ ಆಟಗಾರರ ಕಳಪೆ ಫಾರ್ಮ್ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿ ಮಾಡಿದೆ.

ಏಷ್ಯಾಕಪ್​ನಲ್ಲಿ ಪಾಕಿಸ್ತಾನಕ್ಕೆ ಸಿಕ್ಕ ಬಹುಮಾನದ ಮೊತ್ತವೆಷ್ಟು ಗೊತ್ತಾ?

ಅಬ್ರಾರ್ ಅಹ್ಮದ್​ಗೆ ಅವಕಾಶ?

ಇದೇ ವೇಳೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ರಾರ್ ಅಹ್ಮದ್ ತಮ್ಮ ಲೆಗ್ ಸ್ಪಿನ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ರಾರ್ ಒಟ್ಟು 6 ಪಂದ್ಯಗಳಲ್ಲಿ 38 ವಿಕೆಟ್ ಕಬಳಿಸಿದ್ದರು. ಶಾದಾಬ್ ಗಿಂತ ಅಬ್ರಾರ್ ಅವರ ಚೆಂಡು ಗಾಳಿಯಲ್ಲಿ ವೇಗವಾಗಿ ತಿರುಗುತ್ತದೆ. ಹೀಗಾಗಿ ಅವರನ್ನು ವಿಶ್ವಕಪ್ ತಂಡದಲ್ಲಿ ಆಯ್ಕೆ ಮಾಡಲು ಮುಖ್ಯ ಆಯ್ಕೆದಾರ ಇಂಜಮಾಮ್ ಉಲ್ ಹಕ್ ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ.

ಶಾಹೀನ್ ಶಾ ಆಫ್ರಿದಿಗೆ ಉಪನಾಯಕತ್ವ

ಒಂದು ವೇಳೆ ಶಾದಾಬ್ ಅವರನ್ನು ವಿಶ್ವಕಪ್ ತಂಡದಿಂದ ಕೈಬಿಡದಿದ್ದರೂ, ಅವರನ್ನು ಉಪನಾಯಕ ಸ್ಥಾನದಿಂದ ಕೈಬಿಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಅವರ ಬದಲಿಗೆ ಬೌಲಿಂಗ್ ದಾಳಿಯ ನಾಯಕನಾಗಿ ಏಷ್ಯಾಕಪ್‌ನಲ್ಲಿ ಪ್ರಭಾವಿ ಪ್ರದರ್ಶನ ನೀಡಿದ ಕಾರಣ ಶಾಹೀನ್ ಶಾ ಆಫ್ರಿದಿ ಅವರಿಗೆ ಉಪನಾಯಕನ ಜವಾಬ್ದಾರಿಯನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.

ಮುಖ್ಯ ಆಯ್ಕೆಗಾರ ಇಂಜಮಾಮ್ ಮತ್ತು ನಾಯಕ ಬಾಬರ್ ಆಜಮ್ ಶೀಘ್ರದಲ್ಲೇ ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಅವರೊಂದಿಗೆ ಸಭೆ ನಡೆಸಲಿದ್ದು, ಅವರ ಅನುಮೋದನೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿಯಾಗಿದೆ. ಶಾದಾಬ್ ಹೊರತಾಗಿ ಏಷ್ಯಾಕಪ್‌ನಲ್ಲಿ ಒಂದೇ ಒಂದು ಅರ್ಧಶತಕ ಗಳಿಸಲು ವಿಫಲರಾಗಿದ್ದ ಆರಂಭಿಕ ಆಟಗಾರ ಫಖರ್ ಜಮಾನ್​ರನ್ನು ತಂಡದಲ್ಲಿ ಆಡಿಸುವ ಬಗ್ಗೆಯೂ ಅನುಮಾನ ಮೂಡಿದ್ದು, ಇವರೊಂದಿಗೆ ಇಂಜುರಿಗೆ ತುತ್ತಾಗಿರುವ ನಸೀಮ್ ಶಾ ಕೂಡ ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ