ಭಾರತವನ್ನು ಶತ್ರು ರಾಷ್ಟ್ರ (Enemy Nation) ಎಂದು ಕರೆಯುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಝಾಕಾ ಅಶ್ರಫ್ (PCB Chairman Zaka Ashraf) ಇದೀಗ ತಮ್ಮ ವಿವಾದಾತ್ಮಕ ಹೇಳಿಕೆಯಿಂದಾಗಿರುವ ಡ್ಯಾಮೇಜ್ ಸರಿಪಡಿಸಲು ಮುಂದಾಗಿದ್ದಾರೆ. 2023ರ ಐಸಿಸಿ ವಿಶ್ವಕಪ್ (ODI World Cup 2023) ಆರಂಭಕ್ಕೂ ಮುನ್ನ ಭಾರತಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ ಝಕಾ ಅಶ್ರಫ್ ಇದೀಗ ಆ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಭಾರತವನ್ನು ಶತ್ರು ದೇಶ ಎಂದು ಕರೆದಿದ್ದ ಆಶ್ರಫ್ ಇದೀಗ ಭಾರತ ಶತ್ರು ದೇಶವಲ್ಲ ಬದಲಿಗೆ ಸಾಂಪ್ರದಾಯಿಕ ಪ್ರತಿಸ್ಪರ್ಧಿ (Traditional Rival) ಎಂದು ಕರೆದಿದ್ದಾರೆ. ಅಲ್ಲದೆ ಭಾರತದಲ್ಲಿ ಪಾಕಿಸ್ತಾನದ ಆಟಗಾರರಿಗೆ ಸಿಗುತ್ತಿರುವ ಆತಿಥ್ಯವನ್ನೂ ಆಶ್ರಫ್ ಹಾಡಿಹೊಗಳಿದ್ದಾರೆ.
ವಾಸ್ತವವಾಗಿ ವಿಶ್ವಕಪ್ ಆಡಲು ಪಾಕಿಸ್ತಾನದಿಂದ ಹೈದರಾಬಾದ್‌ಗೆ ಬಂದಿಳಿದಿದ್ದ ಪಾಕ್ ಆಟಗಾರರಿಗೆ ಭಾರತ ಭವ್ಯ ಸ್ವಾಗತ ನೀಡಿತ್ತು. ಇದನ್ನು ಕಂಡು ಸ್ವತಃ ಪಾಕ್ ಆಟಗಾರರೇ ಬೆರಗಾಗಿದ್ದರು. ಅಲ್ಲದೆ ಕೆಲವು ಕ್ರಿಕೆಟಿಗರು ಭಾರತದ ಆತಿಥ್ಯವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೊಗಳಿ ಪೋಸ್ಟ್ ಹಾಕಿದ್ದರು. ಆದರೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅಶ್ರಫ್ ಮಾತ್ರ, ಭಾರತವನ್ನು ಶತ್ರು ದೇಶ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಅಧ್ಯಕ್ಷರ ಈ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿತ್ತು.
‘ತಪ್ಪು ನಮ್ಮದೆ ಭಾರತವನ್ನು ದೂರಬೇಡಿ’; ವೀಸಾ ವಿಳಂಬ ವಿವಾದಕ್ಕೆ ಸ್ಪಷ್ಟನೆ ನೀಡಿದ ಪಾಕ್ ಮಂಡಳಿ
ಅಲ್ಲದೆ ಅಧ್ಯಕ್ಷರ ಈ ಹೇಳಿಕೆ ಭಾರತೀಯರನ್ನು ಕೆರಳಿಸಿತ್ತು. ಹೀಗಾಗಿ ಹಲವು ನೆಟ್ಟಿಗರು ಅಶ್ರಫ್ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಲಾರಂಭಿಸಿದ್ದರು. ಇದೀಗ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿರುವ ಪಿಸಿಬಿ ಹೇಳಿಕೆ ನೀಡಿದ್ದು, ಈ ಹೇಳಿಕೆಯಲ್ಲಿ, ಝಾಕಾ ಅಶ್ರಫ್ ಅವರು ಹೈದರಾಬಾದ್ ತಲುಪಿದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ನೀಡಿದ ಅದ್ಭುತ ಸ್ವಾಗತವನ್ನು ಶ್ಲಾಘಿಸಿದ್ದಾರೆ ಎಂದಿದೆ.
ಝಾಕಾ ಅಶ್ರಫ್ ಮಾತನಾಡಿ, ‘‘ವಿಶ್ವಕಪ್ ಆಡಲು ಭಾರತಕ್ಕೆ ಹೋಗಿರುವ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡಕ್ಕೆ ನೀಡಿದ ಅದ್ಭುತ ಸ್ವಾಗತ ಉಭಯ ದೇಶಗಳ ಜನರು ಪರಸ್ಪರ ಆಟಗಾರರ ಮೇಲೆ ಎಷ್ಟು ಪ್ರೀತಿ ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭವ್ಯ ಸ್ವಾಗತ ಇದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅಶ್ರಫ್, ಭಾರತ ಮತ್ತು ಪಾಕಿಸ್ತಾನವು ಕ್ರಿಕೆಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳೇ ಹೊರತು ಶತ್ರುಗಳಲ್ಲ. ಭಾರತದ ವಿಷಯಕ್ಕೆ ಬಂದಾಗ ಪಾಕಿಸ್ತಾನವನ್ನು ಯಾವಾಗಲೂ ಆತ್ಮೀಯವಾಗಿ ಸ್ವಾಗತಿಸಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:49 am, Sat, 30 September 23