ODI World Cup 2023: ಏಕದಿನ ವಿಶ್ವಕಪ್​ಗೆ ಆಯ್ಕೆಯಾಗುವ 10ನೇ ತಂಡ ಯಾವುದು?

| Updated By: ಝಾಹಿರ್ ಯೂಸುಫ್

Updated on: Jul 04, 2023 | 10:35 PM

ODI World Cup 2023: ಒಂದು ವೇಳೆ ನೆದರ್​ಲ್ಯಾಂಡ್ಸ್​ ತಂಡವು ರೋಚಕ ಜಯ ಸಾಧಿಸಿದರೆ, ಸ್ಕಾಟ್​ಲ್ಯಾಂಡ್ ವಿಶ್ವಕಪ್​ಗೆ ಅರ್ಹತೆ ಪಡೆಯುವುದು ಖಚಿತ ಎನ್ನಬಹುದು.

ODI World Cup 2023: ಏಕದಿನ ವಿಶ್ವಕಪ್​ಗೆ ಆಯ್ಕೆಯಾಗುವ 10ನೇ ತಂಡ ಯಾವುದು?
ODI World Cup 2023
Follow us on

ODI World Cup 2023: ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯಗಳು ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 4 ಪಂದ್ಯಗಳಲ್ಲಿ ಜಯ ಸಾಧಿಸಿರುವ ಶ್ರೀಲಂಕಾ ತಂಡವು ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದೆ. ಇದರೊಂದಿಗೆ ಈ ಬಾರಿ ಕಣಕ್ಕಿಳಿಯಲಿರುವ 10 ತಂಡಗಳಲ್ಲಿ 9 ತಂಡಗಳು ಫೈನಲ್ ಆಗಿವೆ. ಇದಾಗ್ಯೂ 10ನೇ ತಂಡ ಯಾವುದೆಂಬುದು ಇನ್ನೂ ಕೂಡ ನಿರ್ಧಾರವಾಗಿಲ್ಲ. ಸೂಪರ್ ಸಿಕ್ಸ್​ ಹಂತದಲ್ಲಿ ಝಿಂಬಾಬ್ವೆ ವಿರುದ್ಧ ಸ್ಕಾಟ್​ಲ್ಯಾಂಡ್ ಜಯ ಸಾಧಿಸುವುದರೊಂದಿಗೆ ವಿಶ್ವಕಪ್ ಟೂರ್ನಿಯ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಅತ್ತ ಕೊನೆಯ ಪಂದ್ಯದಲ್ಲಿ ಸೋತಿರುವ ಝಿಂಬಾಬ್ವೆ ತಂಡ ವಿಶ್ವಕಪ್ ರೇಸ್​ನಿಂದ ಹೊರಬಿದ್ದಿದೆ.

ಇನ್ನುಳಿದಿರುವುದು ಸ್ಕಾಟ್​ಲ್ಯಾಂಡ್ ಹಾಗೂ ನೆದರ್​ಲ್ಯಾಂಡ್ಸ್​ ನಡುವಣ ಪೈಪೋಟಿ. ಅಂದರೆ ಮುಂದಿನ ಪಂದ್ಯದಲ್ಲಿ ಸ್ಕಾಟ್​ಲ್ಯಾಂಡ್ ತಂಡ ನೆದರ್​ಲ್ಯಾಂಡ್ಸ್ ವಿರುದ್ಧ ಗೆದ್ದರೆ ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆಯಬಹುದು. ಆದರೆ ಸ್ಕಾಟ್​ಲ್ಯಾಂಡ್​ ವಿರುದ್ಧ ನೆದರ್​ಲ್ಯಾಂಡ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿದರೆ ಮಾತ್ರ ಟಾಪ್-10 ಗೆ ಎಂಟ್ರಿ ಕೊಡಬಹುದು. ಹೀಗಾಗಿ ಅಂತಿಮವಾಗಿ ಯಾವ ತಂಡ ಅರ್ಹತೆ ಪಡೆಯಲಿದೆ ಎಂಬುದೇ ಈಗ ಕುತೂಹಲ.

2 ತಂಡಗಳ ಲೆಕ್ಕಾಚಾರ ಈ ಕೆಳಗಿನಂತಿದೆ:

1- ಸ್ಕಾಟ್​ಲ್ಯಾಂಡ್​: 4 ಪಂದ್ಯಗಳಲ್ಲಿ 3 ಜಯ ಸಾಧಿಸಿರುವ ಸ್ಕಾಟ್​ಲ್ಯಾಂಡ್​ ಅರ್ಹತಾ ಸುತ್ತಿನ ಪಾಯಿಂಟ್ಸ್ ಟೇಬಲ್​ನಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇಲ್ಲಿ ಸ್ಕಾಟ್​ಲ್ಯಾಂಡ್ ತಂಡವು​ 6 ಪಾಯಿಂಟ್ಸ್​ ಜೊತೆಗೆ +0.296 ನೆಟ್​ ರನ್ ಹೊಂದಿದೆ. ಹೀಗಾಗಿ ನೆದರ್​ಲ್ಯಾಂಡ್ಸ್ ವಿರುದ್ಧ ಗೆದ್ದರೆ 8 ಅಂಕಗಳೊಂದಿಗೆ ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆಯಲಿದೆ.

2- ನೆದರ್​ಲ್ಯಾಂಡ್ಸ್: 4 ಪಂದ್ಯಗಳಲ್ಲಿ 2 ಜಯ ಸಾಧಿಸಿರುವ ನೆದರ್​ಲ್ಯಾಂಡ್ಸ್ ತಂಡವು ಒಟ್ಟು 4 ಪಾಯಿಂಟ್ಸ್​ ಹೊಂದಿದೆ. ಸ್ಕಾಟ್​ಲ್ಯಾಂಡ್ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದರೆ 6 ಅಂಕಗಳೊಂದಿಗೆ ಉತ್ತಮ ನೆಟ್​ ರನ್​ ಪಡೆದು ವಿಶ್ವಕಪ್​ಗೆ ಅರ್ಹತೆ ಪಡೆಯಬಹುದು. ಅಂದರೆ ಸ್ಕಾಟ್​ಲ್ಯಾಂಡ್​ಗಿಂತ ಹೆಚ್ಚಿನ ನೆಟ್ ರನ್​ ರೇಟ್ ಹೊಂದಿದ್ದರೆ ಮಾತ್ರ ಅರ್ಹತೆ ಪಡೆಯಲಿದೆ.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ಗೆ 15 ಸದಸ್ಯರ ಭಾರತ ಸಂಭಾವ್ಯ ತಂಡ ಹೀಗಿದೆ

ಸ್ಕಾಟ್​ಲ್ಯಾಂಡ್​ಗೆ ಉತ್ತಮ ಅವಕಾಶ:

ಒಂದು ವೇಳೆ ನೆದರ್​ಲ್ಯಾಂಡ್ಸ್​ ತಂಡವು ರೋಚಕ ಜಯ ಸಾಧಿಸಿದರೆ, ಸ್ಕಾಟ್​ಲ್ಯಾಂಡ್ ವಿಶ್ವಕಪ್​ಗೆ ಅರ್ಹತೆ ಪಡೆಯುವುದು ಖಚಿತ ಎನ್ನಬಹುದು. ಏಕೆಂದರೆ ಸ್ಕಾಟ್​ಲ್ಯಾಂಡ್​ +0.296 ನೆಟ್​ ರನ್ ರೇಟ್ ಹೊಂದಿದೆ. ಹೀಗಾಗಿ ಗೆದ್ದರೂ, ಕಡಿಮೆ ಅಂತರದಿಂದ ಸೋತರೂ ಸ್ಕಾಟ್​ಲ್ಯಾಂಡ್​ ವಿಶ್ವಕಪ್​ಗೆ ಅರ್ಹತೆ ಪಡೆಯುವ ಸಾಧ್ಯತೆ ಹೆಚ್ಚು. ಇದಾಗ್ಯೂ ನೆದರ್​ಲ್ಯಾಂಡ್ಸ್ ಭರ್ಜರಿ ಜಯ ಸಾಧಿಸಿ ಸ್ಕಾಟ್​ಲ್ಯಾಂಡ್​ಗಿಂತ ಹೆಚ್ಚಿನ ರನ್ ರೇಟ್ ಪಡೆದರೆ ಮಾತ್ರ ವಿಶ್ವಕಪ್​ಗೆ ಅರ್ಹತೆ ಪಡೆಯಲಿದೆ. ಅಂದರೆ ಇಲ್ಲಿ  ಸ್ಕಾಟ್​ಲ್ಯಾಂಡ್​​​ಗೆ ಉತ್ತಮ ಅವಕಾಶವಿದೆ ಎನ್ನಬಹುದು.